ಬೆಂಗಳೂರು : ಲಂಚದ ಹಣಕ್ಕೆ ಬೇಡಿಕೆ ಇಟ್ಟ ಇನ್ಸ್‌ಪೆಕ್ಟರ್ ಅಮಾನತು.! ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಖಡಕ್ ಆದೇಶ.
news.ashwasurya.in
ಅಶ್ವಸೂರ್ಯ/ಬೆಂಗಳೂರು : ಲಂಚದ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಬೆಳ್ಳಂದೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅವರನ್ನು ಅಮಾನತುಗೊಳಿಸಿ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಖಡಕ್ ಆದೇಶ ನೀಡಿದ್ದಾರೆ.
ಮಗಳು ಸತ್ತ ನಂತರದಲ್ಲಿ ತಂದೆಗೆ ಲಂಚದ ಹಣ ಕೇಳಿದ್ದ ಬೆಳ್ಳಂದೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಮೇಶ್ ರೊಟ್ಟಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ರಮೇಶ್ ರೊಟ್ಟಿ ಲಂಚ ಕೇಳಿದ ಆರೋಪ ಮೇಲ್ನೋಟಕ್ಕೆ ಸಾಬೀತಾದಾಗಿದ್ದ ಹಿನ್ನೆಲೆಯಲ್ಲಿ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ರಮೇಶ್ ರೊಟ್ಟಿ ಅವರನ್ನು ಅಮಾನತು ಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣ ಹಿನ್ನಲೆ ಏನು?
ಬೆಂಗಳೂರಿನಲ್ಲಿ ಭಾರತ್ ಪೆಟ್ರೋಲಿಯಂ ನಿಗಮದ ನಿವೃತ್ತ ಸಿಎಫ್ಒ ಶಿವಕುಮಾರ್ ಅವರ ಮಗಳ ಸಾವಿನ ನಂತರದ ಪ್ರತಿಯೊಂದು ಹಂತದಲ್ಲೂ ಲಂಚಕ್ಕಾಗಿ ಅಧಿಕಾರಿಗಳು ಪೀಡಿಸಿದ್ದರು. ಈ ಬಗ್ಗೆ ಶಿವಕುಮಾರ್ ಅವರು ತಮ್ಮ ಮಗಳ ಮರಣದ ನಂತರ ಅಧಿಕಾರಿಗಳಿಂದ ತಾವು ಎದುರಿಸಿದ ಕಿರುಕುಳ ಮತ್ತು ಲಂಚಕ್ಕೆ ಸಂಬಂಧಿಸಿದ ಅನುಭವವನ್ನು ಲಿಂಕ್ಡ್ಇನ್ನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ನಲ್ಲಿ ಬೆಳ್ಳಂದೂರು ಪೊಲೀಸರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿತ್ತು.

ಈ ಆರೋಪದ ನಂತರ ಘಟನೆ ಬಗ್ಗೆ ವರದಿ ನೀಡುವಂತೆ ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸೂಚನೆ ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ವೈಟ್ ಫೀಲ್ಡ್ ಡಿಸಿಪಿ ಪರಶುರಾಮ್ ಕಮಿಷನರ್ ಅವರಿಗೆ ವರದಿ ಸಲ್ಲಿಸಿದರು.
ಪರಶುರಾಮ್ ಸಲ್ಲಿಸಿದ ವರದಿಯಲ್ಲಿ ಮೇಲ್ನೋಟಕ್ಕೆ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಸಾಬೀತಾದಾಗಿದೆ. ಈ ಹಿನ್ನೆಲೆ ಬೆಳ್ಳಂದೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಮೇಶ್ ರೊಟ್ಟಿ ಅವರನ್ನು ಅಮಾನತುಗೊಳಿಸಲು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಖಡಕ್ ಆದೇಶ ನೀಡಿದ್ದಾರೆ.


