ಕುಂದಾಪುರ : ಕ್ರಿಕೆಟ್ ಕಾಶಿ ಕುಂದಾಪುರದಲ್ಲಿ ಹೆಸರಾಂತ ಹಿರಿಯ ವಿಕೆಟ್ ಕೀಪರ್ ಕೆ ಪಿ ಸತೀಶ್ ಸಾರಥ್ಯದಲ್ಲಿ ಹಿರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ.


ಅಶ್ವಸೂರ್ಯ/ಕುಂದಾಪುರ : ನವೆಂಬರ್ 22 ಮತ್ತು 23 ರಂದು ಕ್ರಿಕೆಟ್ ಕಾಶಿ ಕುಂದಾಪುರದ ಹೆಸರಾಂತ ಗಾಂಧಿ ಮೈದಾನದಲ್ಲಿ 45 ವರ್ಷ ಮೇಲ್ಪಟ್ಟ ಹಿರಿಯರ ಕ್ರಿಕೆಟ್ ಪಂದ್ಯಾವಳಿಗೆ ವೇದಿಕೆ ಸಿದ್ಧವಾಗಿದೆ. ರಾಜ್ಯಕಂಡ 80 ಮತ್ತು 90 ರ ದಶಕದ ಘಟಾನುಘಟಿ ಹಿರಿಯ ಆಟಗಾರರನ್ನು ಮತ್ತೊಮ್ಮೆ ಒಂದೆಡೆ ಸೇರಿಸುವ ಮತ್ತು ಅವರ ಆಟವನ್ನು ಮತ್ತೊಮ್ಮೆ ಕಣ್ಣು ತುಂಬಿಸಿಕೊಳ್ಳುವ ಹಿನ್ನೆಲೆಯಲ್ಲಿ 80, 90 ರ ದಶಕದಲ್ಲಿ ರಾಜ್ಯ ಕಂಡ ಶ್ರೇಷ್ಠ ವಿಕೆಟ್ ಕೀಪರ್ ಕುಂದಾಪುರದ ಹೆಸರಾಂತ ಹಿರಿಯ ಕ್ರಿಕೆಟ್ ಆಟಗಾರ ಕೆ ಪಿ ಸತೀಶ್ ಸಾರಥ್ಯದಲ್ಲಿ ನವೆಂಬರ್ 22 ಮತ್ತು 23 ರಂದು ಹಿರಿಯರ ಕ್ರಿಕೆಟ್ ಹಬ್ಬಕ್ಕೆ ( ಪಂದ್ಯಾವಳಿಗೆ ) ವೇದಿಕೆ ಸಿದ್ಧವಾಗಿದೆ.

ರಾಜ್ಯದ ಬೆಂಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರು ಮತ್ತು ಹಾಸನ ಹಾಗೂ ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ಪ್ರತಿಷ್ಠಿತ ಹನ್ನೆರಡು ತಂಡಗಳು ಹಿರಿಯರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ.ಈ ಪಂದ್ಯಾವಳಿಯ ಯಶಸ್ಸಿಗಾಗಿ ಈ ಪಂದ್ಯಾವಳಿಯ ಆಯೋಜಕರಾಗಿರುವ ಹಿರಿಯ ಕ್ರಿಕೆಟಿಗ ಕೆ ಪಿ ಸತೀಶ್ ಅವರು ಕ್ರಿಕೆಟ್ ಆಭಿಮಾನಿಗಳು ಮತ್ತು ಹಿತೈಷಿಗಳು ಹಾಗೂ ಪ್ರಯೋಜಕರಿಗೆ ತನು ಮನ ಧನದ ಸಹಾಯ ಸಹಕಾರವನ್ನು ಕೋರಿದ್ದಾರೆ..

✍️ ಕೆ ಪಿ ಸತೀಶ್ ಅವರ ಮನದಾಳದ ಮಾತು……
ಕರಾವಳಿಯ ಕ್ರಿಕೆಟ್ ಕಾಶಿ ಎಂದೇ ಹೆಸರುವಾಸಿಯಾದ ಕುಂದಾಪುರದ ಗಾ೦ಧಿ ಮೈದಾನದಲ್ಲಿ 45 ವರ್ಷ ಮೇಲ್ಪಟ್ಟ ಹಿರಿಯರ ಕ್ರಿಕೆಟ್ ಪಂದ್ಯಾಕೂಟ ಏರ್ಪಡಿಸುವ ಬಗ್ಗೆ ನನ್ನ ಮಹದಾಸೆ ಹೊಂದಿದ್ದೇನೆ. ಬಾಲ್ಯದಿಂದಲೂ ಕಿರಿದಾದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ನಾನು ಹಿರಿಯರು ಬ್ಯಾಟಿಂಗ್ ಆಡುತ್ತಿರುವಾಗ ಗಾಂಧಿ ಮೈದಾನದಿಂದ ಬರುವ ಬಾಲುಗಳನ್ನು ಹೆಕ್ಕಿ ಗಾಂಧಿ ಮೈದಾನದ ಕಡೆಗೆ ಎಸೆಯುತ್ತಿದ್ದೆ.
ಕ್ರಿಕೆಟ್ ಕಾಶಿ ಕುಂದಾಪುರದ ಗಾಂಧಿ ಮೈದಾನ

ಅ ದಿನಗಳಿಂದಲೇ ಕ್ರಿಕೆಟ್ ಬಗ್ಗೆ ನನ್ನ ಆಸಕ್ತಿ ದಿನದಿಂದ ದಿನಕ್ಕೆ ಹೆಚ್ಚಿಯಿತು, ಆಗ ನನಗೆ 12 ವರ್ಷ ಪ್ರಾಯವಿರಬಹುದು ಲಾವಣ್ಯ ಕ್ರಿಕೆಟರ್ಸ್ ಕುಂದಾಪುರ ತಂಡದಿಂದ ನನ್ನ ಕ್ರಿಕೆಟ್ ಜೀವನವನ್ನು ಆರಂಭಿಸಿ ನಂತರ lark Friends ಕುಂದಾಪುರ ತಂಡದಲ್ಲಿ ಕೆಲವು ದಿನಗಳು ಆಡಿ ಒಂದಷ್ಟು ಹೆಸರು ಮಾಡುವ ಹಂತದಲ್ಲಿ ರಾಜ್ಯದ ಹೆಸರಾಂತ ತಂಡಗಳಲ್ಲಿ ಒಂದಾದ ಕುಂದಾಪುರದ ಚಕ್ರವರ್ತಿ ಕ್ರಿಕೆಟ್ ಕ್ಲಬ್ ತಂಡದೊಂದಿಗೆ ನನ್ನ ಕ್ರಿಕೆಟ್ ಜೀವನವನ್ನು ಆರಂಭಿಸಿದೆ. ಕಾಲಾನಂತರ ಚಕ್ರವರ್ತಿಯ ಹಿರಿಯ ಆಟಗಾರರಾದ ಶ್ರೀ ಗಣೇಶ್ ನಾವಡ ಇವರು ನನ್ನ ಪ್ರತಿಭೆಯನ್ನು ಗುರುತಿಸಿ ಕರಾವಳಿ ಕ್ರಿಕೆಟ್ ಕ್ಲಬ್ ಕುಂದಾಪುರ ತಂಡಕ್ಕೆ ತಾಲೀಮಿಗಾಗಿ ಕಳಿಸಿಕೊಟ್ಟರು ಆ ತಂಡದಲ್ಲಿ ತಾಲೂಕು ಮಟ್ಟ, ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದ ಪಂದ್ಯಾಟಗಳಲ್ಲಿ ಪ್ರತಿನಿಧಿಸಿದೆ.ಕ್ರಿಕೆಟ್ ಜೀವನದ ಆರಂಭದ ದಿನದಿಂದಲೂ ವಿಕೆಟ್ ಕೀಪಿಂಗ್ ನಲ್ಲಿ ಹೆಚ್ಚಿನ ಆಸಕ್ತಿ ಇರುವ ನಾನು ಈ ಹಂತದಲ್ಲಿ ನನ್ನ ಪ್ರತಿಭೆಯ ಮೂಲಕ ಜಿಲ್ಲಾದ್ಯಂತ ಶ್ರೇಷ್ಠ ವಿಕೆಟ್ ಕೀಪರ್ ಆಗಿ ಗುರುತಿಸಲ್ಪಟ್ಟೆ ಅ ಸಂಧರ್ಭದಲ್ಲಿ ಟಾರ್ಪೆಡೋಸ್ ಕುಂದಾಪುರ ಇವರು ನಡೆಸಿದ ರಾಜ್ಯ ಮಟ್ಟದ ಪಂದ್ಯಾಟದಲ್ಲಿ ಕರಾವಳಿ ಕುಂದಾಪುರ ತಂಡ ಫೈನಲನ್ನು ತಲುಪಿ ರನ್ನರ್ ಅಪ್ ಪ್ರಶಸ್ತಿ ಪಡೆದು ಕೊಂಡಿತು. ಈ ಪಂದ್ಯಾಕೂಟದಲ್ಲಿ ನನ್ನ ಉತ್ತಮ ನಿರ್ವಹಣೆಯನ್ನು ಕಂಡ ಕ್ರಿಕೆಟ್ ಪ್ರೇಮಿಗಳ ಮನದಾಳದಲ್ಲಿ ಜಿಲ್ಲೆಯಾದ್ಯಂತ ಉತ್ತಮ ವಿಕೆಟ್ ಕೀಪರ್ ಆಗಿ ಪ್ರಸಿದ್ದಿಯನ್ನು ಪಡೆದೆ. ನಂತರದಲ್ಲಿ ಚಕ್ರವರ್ತಿ ಕ್ರಿಕೆಟ್ ಕ್ಲಬ್ ನ ಅಂದಿನ ವಿಕೆಟ್ ಕೀಪರ್ ಶಿವಾನಂದ ಗೌಡ ಅವರ ಅನುಪಸ್ಥಿತಿಯಲ್ಲಿ ತಂಡದ ನಾಯಕ ಶ್ರೀಪಾದ ಉಪಾಧ್ಯಾಯರವರ ಸಲಹೆಯಂತೆ ತಂಡದಲ್ಲಿ ವಿಕೆಟ್ ಕೀಪಿಂಗ್ ಅನ್ನು ಆರಂಭಿಸಿ ಹಲವು ಪ್ರಶಸ್ತಿಗಳ ವಿಜಯಕ್ಕೆ ನಾನು ಕೂಡ ಕಾರಣನಾಗಿರುತ್ತೇನೆ. ತದನಂತರದಲ್ಲಿ ಜಿಲ್ಲೆಯಾದ್ಯಂತ ನೂರಾರು ಪ್ರಶಸ್ತಿಗಳನ್ನೂ ಜಯಸಿ ವೈಯಕ್ತಿಕವಾಗಿ ಹಲವಾರು ಶ್ರೇಷ್ಠ ಗೂಟ ರಕ್ಷಕ ( Best wicket keeper ) ಪ್ರಶಸ್ತಿಗೆ ಭಾಜನನಾಗಿರುತ್ತೇನೆ ನಂತರದಲ್ಲಿ ರಾಜ್ಯಮಟ್ಟದ ಪಂದ್ಯಾಟಗಳಲ್ಲಿ ಆಡಿ ತಂಡದೊಂದಿಗೆ ನನ್ನ ವೈಯಕ್ತಿಕ ನಿರ್ವಹಣೆಯನ್ನು ತೋರಿ ನೂರಾರು ರಾಜ್ಯಮಟ್ಟದ ಪ್ರಶಸ್ತಿಗಳನ್ನ ಜಯಿಸಿ ಉತ್ತಮ ವಿಕೆಟ್ ಕೀಪರ್ ಪ್ರಶಸ್ತಿಯನ್ನು ಪಡೆದಿರುತ್ತೇನೆ ನನ್ನ ಕ್ರಿಕೆಟ್ ಜೀವನದ ಉತ್ತಮ ನಿರ್ವಹಣೆಗೆ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಬೆಸ್ಟ್ ವಿಕೆಟ್ ಕೀಪರ್ ಪ್ರಸಸ್ತಿಗೆ ಚಿನ್ನದ ನಾಣ್ಯ ಮತ್ತು ಸೈಕಲನ್ನು ಪ್ರಶಸ್ತಿಯನ್ನಾಗಿ ಪಡೆದಿರುತ್ತೇನೆ ಅಂದಿನಿಂದ ಕರ್ನಾಟಕ ರಾಜ್ಯಾದ್ಯಂತ ಟೆನ್ನಿಸ್ ಬಾಲ್ ಕ್ರಿಕೆಟ್ ಜಗತ್ತಿನ ಉತ್ತಮ ವಿಕೆಟ್ ಕೀಪರ್ ಎಂಬ ಬಿರುದಿಗೆ ಭಾಜನರಾಗಿರುತ್ತೇನೆ ಇಂದು 50ರ ವಯಸ್ಸನ್ನು ದಾಟಿರುವ ನನಗೆ ಹಲವಾರು ಕ್ರೀಡಾ ಸಂಸ್ಥೆಗಳು ಮತ್ತು ಕ್ರಿಕೆಟ್ ತಂಡಗಳೂ ಉತ್ತಮ ವಿಕೆಟ್ ಕೀಪರ್ ಎಂದು ಗೌರವಿಸಿ ಸನ್ಮಾನಿಸಿರುತ್ತಾರೆ. ಕರ್ನಾಟಕ ರಾಜ್ಯದಾದ್ಯಂತ ಹಿರಿಯ ಆಟಗಾರರ ಸಂಪರ್ಕ ಹೊಂದಿರುವ ನಾನು 45 ವರ್ಷ ಮೇಲ್ಪಟ್ಟ ಹಿರಿಯರ ಕ್ರಿಕೆಟ್ ಪಂದ್ಯಾಕೂಟವನ್ನು ನಡೆಸುವ ಬಗ್ಗೆ ಮಹದಾಸೆಯನ್ನು ಹೊಂದಿದ್ದು ಇದೇ ಬರುವ ನವೆ೦ಬರ್ ತಿಂಗಳ 22 ಮತ್ತು 23 ರಂದು ಕ್ರಿಕೆಟ್ ಕಾಶಿ
ಕುಂದಾಪುರದ ಗಾ೦ಧಿ ಮೈದಾನದಲ್ಲಿ 6 ಓವರಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಕೂಟ ವನ್ನು ನಡೆಸುವುದಕ್ಕೆ ನಿರ್ಧರಿಸಿರುತ್ತೇನೆ.ಈ ನನ್ನ ಕನಸಿನ ಹಿರಿಯರ ಕ್ರಿಕೆಟ್ ಪಂದ್ಯಾವಳಿಯನ್ನು ನೆಡೆಸಲು ಈ ವರೆಗೆ ನನ್ನನ್ನು ಪ್ರೋತ್ಸಾಹಿಸಿ ಬೆಳಸಿ ಹಾರೈಸಿದ ತಾವುಗಳು ತನು ಮನ ಧನ ಸಹಕಾರವನ್ನು ನೀಡಿ ಈ ಪಂದ್ಯಾಕೂಟ ವನ್ನು ಯಶಸ್ವಿಗೊಳಿಸಬೇಕಾಗಿ ತಮ್ಮಲ್ಲಿ ವಿನಯ ಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇನೆ.



