ಮಂಗಳೂರು : ಓಮನ್ ದೇಶದ ಮೀನುಗಳು ಮಂಗಳೂರು ಮಾರ್ಕೆಟಿಗೆ.! ಮೀನುಪ್ರಿಯರ ‘ಖುಷಿ’ ಹೆಚ್ಚಿಸಿದ ವಿದೇಶಿ ಬಂಗುಡೆ-ಬೂತಾಯಿ.!

news.ashwasurya.in
ಅಶ್ವಸೂರ್ಯ/ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಶಿವಮೊಗ್ಗ ಜಿಲ್ಲೆ ಮೀನು ಊಟಕ್ಕೆ ಅತ್ಯಂತ ಹೆಸರುವಾಸಿ. ಸಾಮಾನ್ಯವಾಗಿ ಹಳ್ಳಿಯಿಂದ ಹಿಡಿದು ನಗರದ ತನಕವೂ ಮೀನಿನ ಖಾದ್ಯ ಇಲ್ಲಿನ ಜನತೆಗೆ ಪ್ರೀಯವಾದ ಪದಾರ್ಥ. ಹಾಗಾಗಿ ಮೀನು ಮಾರುಕಟ್ಟೆ ಯಾವತ್ತೂ ಜನರಿಂದ ತುಂಬಿರುತ್ತದೆ. ಇಂತಹ ಮೀನು ಪ್ರಿಯರ ನಾಡಿಗೆ ಇದೀಗ ಮಂಗಳೂರು ಮೀನು ಮಾರುಕಟ್ಟೆಗೆ ವಿದೇಶದ ( ಓಮನ್) ಮೀನುಗಳು ಲಗ್ಗೆ ಇಟ್ಟಿವೆ. ಜತೆಗೆ ಮೀನು ಪ್ರಿಯರ ಸಂತಸಕ್ಕೂ ಕಾರಣವಾಗಿದೆ. ಓಮನ್ ನಿಂದ ಆಮದಾಗುತ್ತಿರುವ ಈ ಮೀನುಗಳು ಅತ್ಯಂತ ರುಚಿಯಾಗಿದ್ದು, ಜನತೆಯ ಬೇಡಿಕೆಯೂ ಹೆಚ್ಚಾಗಿದೆ.

ಕಳೆದ 4 ತಿಂಗಳಿನಿಂದ ಜಿಲ್ಲೆಯನ್ನು ಬಿಟ್ಟು ಬಿಡದೆ ಮಳೆಯು ಕಾಡುತ್ತಿರುವುದರಿಂದ ಇಲ್ಲಿ ಮೀನು ಹಿಡಿಯುವ ಕಾಯಕಕ್ಕೂ ಸಾಕಷ್ಟು ತೊಂದರೆ ಯಾಗಿದೆ.ಮೀನು ಮಾರುಕಟ್ಟೆಗಳಲ್ಲಿ ಮೀನಿನ ಕೊರತೆಯೂ ಕಂಡುಬರುತ್ತಿದ್ದು ಗ್ರಾಮೀಣ ಭಾಗಗಳಿಗೆ ಎಷ್ಟೋ ದಿನ ಮೀನು ಸರಬರಾಜು ಆಗುವುದೆ ನಿಂತುಹೋಗಿತ್ತು. ಇಂತಹ ಸಂದರ್ಭದಲ್ಲಿಯೇ ಓಮನ್ ದೇಶದ ಬಂಗುಡೆ ಹಾಗೂ ಬೂತಾಯಿಗಳು ಮೀನುಗಳು ಮಂಗಳೂರು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.! ಇಲ್ಲಿ ಸಿಗುವ ಬಂಗುಡೆ ಹಾಗೂ ಬೂತಾಯಿಗಳಿಗಿಂತ ಗಾತ್ರದಲ್ಲಿ ದೊಡ್ಡದಿರುವ ಓಮನ್ ದೇಶದ ಮೀನುಗಳು ಮೀನುಪ್ರಿಯರನ್ನು ಹೆಚ್ಚು ಆಕರ್ಷಿಸಿವೆ. ರುಚಿಯಲ್ಲೂ ಸ್ವಾದಿಷ್ಟವಿರುವ ಈ ವಿದೇಶಿ ಮೀನುಗಳು ಮಾರುಕಟ್ಟೆಯನ್ನು ಮತ್ತೆ ಸದೃಢಗೊಳಿಸಿವೆ.

ನಮ್ಮಲ್ಲಿ ಸಿಗುವ ಸಣ್ಣ ಬಂಗುಡೆ ಹಾಗೂ ದೊಡ್ಡ ಬೂತಾಯಿ ರುಚಿ ಕಡಿಮೆ ಎಂಬ ಅಭಿಪ್ರಾಯವಿದೆ. ದೊಡ್ಡ ಬಂಗುಡೆ ಹಾಗೂ ಸಣ್ಣ ಬೂತಾಯಿ ಹೆಚ್ಚು ರುಚಿಯಾಗಿರುತ್ತದೆ ಎಂಬ ನಂಬಿಕೆ ಮೀನು ಪ್ರೀಯರಲ್ಲಿದೆ. ಓಮನ್ ದೇಶದ ಬೂತಾಯಿ ಇಲ್ಲಿನ ಬಂಗುಡೆಯಷ್ಟು ಗಾತ್ರ ಹೊಂದಿದ್ದರೂ ರುಚಿಯಲ್ಲಿ ಕಡಿಮೆಯೇನಿಲ್ಲ. ಹಾಗಾಗಿ ಜನತೆ ಇದನ್ನು ಮುಗಿಬಿದ್ದು ಕೊಂಡು ಕೊಳ್ಳುತ್ತಿರುವುದು ಮಾರುಕಟ್ಟೆಯಲ್ಲಿ ಕಂಡು ಬರುತ್ತಿದೆ.

ಪಶ್ಚಿಮ ಕರಾವಳಿಯಲ್ಲಿ ಈ ಬಾರಿ ಬೂತಾಯಿ ಮೀನುಗಳು ವಿಪರೀತವಾಗಿ ಕಡಿಮೆ. ಈ ಕಾರಣದಿಂದ ವಿಪರೀತ ಬೇಡಿಕೆ ಹಿನ್ನಲೆಯಲ್ಲಿ ಮೀನು ದುಬಾರಿಯಾಗಿತ್ತು. ಗ್ರಾಮೀಣ ಭಾಗದಲ್ಲಿ ಒಂದು ಕೆಜಿ ಬೂತಾಯಿಗೆ ಹಾಗೂ ಬಂಗುಡೆಗೆ ರೂ.200 ರಿಂದ 450 ತನಕ ದರ ಕಂಡುಬರುತ್ತಿದೆ. ಇದು ಮೀನುಪ್ರಿಯ ಕುಟುಂಬಗಳಿಗೆ ನುಂಗಲಾರದ ತುತ್ತಾಗಿದೆ. ಇದೀಗ ಓಮನ್ ಮೀನುಗಳು ಬರುತ್ತಿರುವ ಕಾರಣ ಮೀನಿನ ಕೊರತೆ ನಿವಾರಣೆಯ ಜತೆಗೆ ಮೀನುಪ್ರಿಯರ ಸಮಸ್ಯೆಯನ್ನು ಪರಿಹರಿಸಿದೆ. ಓಮನ್ ದೇಶದ ಮೀನುಗಳು ಕೂಡಾ ರೂ 400 ರಿಂದ 450 ದರ ನಿಗದಿಯಾಗಿದ್ದು ಹೇಗೋ ಜನ ಖರೀದಿಸಲು ಮುಂದಾಗಿದ್ದಾರೆ.
ಅದರಲ್ಲೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೀನಿನ ಹೋಟೆಲ್ಗಳದ್ದೆ ಕಾರುಬಾರು
ಜಿಲ್ಲೆಯಲ್ಲಿ ಮೀನಿನ ಖಾದ್ಯಗಳ ಹೊಟೇಲ್ಗಳು ಸಾಕಷ್ಟಿವೆ. ಈ ಹೋಟೆಲ್ ಗಳಲ್ಲಿ ಮೀನಿನ ಕೊರತೆಯ ಕಾರಣ ಹಾಗೂ ದುಬಾರಿ ಬೆಲೆಯಿಂದಾಗಿ ವ್ಯವಹಾರಕ್ಕೆ ಸಮಸ್ಯೆಯಾಗಿತ್ತು. ಇದರ ಜೊತೆಗೆ ಹೋಟೆಲ್ಗಳಿಗೆ ಸಾಮಾನ್ಯವಾಗಿ ದೊಡ್ಡ ಗಾತ್ರದ ಬಂಗುಡೆ ಹಾಗೂ ಬೂತಾಯಿಗಳು ಹೆಚ್ಚು ಆಕರ್ಷಣೆ. ಈ ಓಮನ್ ದೇಶದ ಮೀನುಗಳು ಮೀನಿನ ಹೋಟೆಲ್ ಗಳಿಗೆ ಗಾತ್ರದಲ್ಲಿ ಹೇಳಿ ಮಾಡಿಸಿದಂತಿವೆ. ರುಚಿಯಲ್ಲೂ ಕಡಿಮೆ ಇಲ್ಲದ ಈ ಮೀನುಗಳು ಮತ್ತೆ ಹೋಟೆಲ್ ಗಳಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿವೆ. ಒಂದರ್ಥದಲ್ಲಿ ಈ ಮೀನಿನ ಹೋಟೆಲ್ ಗಳಿಗೆ ಓಮನ್ ಮೀನುಗಳು ಸುಗ್ಗಿ ತಂದಿವೆ.
ಅರಬ್ಬೀ ಸಮುದ್ರದಲ್ಲಿ ಸಿಗುವ ಮೀನುಗಳ ರುಚಿಯಷ್ಟು ಬಂಗಾಳಕೊಲ್ಲಿಯ ಮೀನುಗಳಲ್ಲಿ ರುಚಿಯಿಲ್ಲ. ಹಾಗಾಗಿ ತಮಿಳುನಾಡು,ಆಂಧ್ರದಿಂದ ಬರುವ ಮೀನುಗಳಿಗೆ ಹೆಚ್ಚಿನ ಬೇಡಿಕೆ ಇಲ್ಲ. ಆದರೆ ಈಗ ಕರಾವಳಿಗೆ ಬಂದಿರುವ ಈ ಓಮನ್ ದೇಶದ ಬಂಗುಡೆ ಹಾಗೂ ಬೂತಾಯಿ ಮೀನುಗಳಿಗೆ ಭಾರೀ ಬೇಡಿಕೆ ಉಂಟಾಗಿದೆ. ಪ್ರತೀ ದಿನ ಒಮನ್ ನಿಂದ ಗೋವಾ ಮೂಲಕ ಮಲ್ಪೆಗೆ ಎರಡು ಕಂಟೈನರ್ ಬೂತಾಯಿ ಬರುತ್ತಿದೆ. ಮಂಗಳೂರು, ರತ್ನಗಿರಿ ಪಾಂಡಿಚೇರಿ ಕೇರಳ ರಾಜ್ಯಗಳಿಗೂ ಈ ಒಮನ್ ದೇಶದ ಮೀನುಗಳು ಸರಬರಾಜುಗೊಳ್ಳುತ್ತಿವೆ. ಒಮನ್ ಮತ್ತು ಭಾರತ ಒಂದೇ ಸಮುದ್ರದ ಎರಡು ಭಾಗಗಳಲ್ಲಿರುವ ದೇಶಗಳು. ಒಂದೇ ಸಮುದ್ರದ ಎರಡು ಬದಿಗಳಲ್ಲಿ ಸಿಗುವ ಒಂದೇ ಮೀನುಗಳು ಗಾತ್ರದಲ್ಲಿ ಬದಲಾವಣೆ ಹೊಂದಿರುವುದು ಅಚ್ಚರಿಯ ವಿಚಾರವಾಗಿದೆ. ಆದರೆ ರುಚಿಯಲ್ಲಿ ಮಾತ್ರ ಯಾವುದೇ ವ್ಯತ್ಯಾಸ ಇಲ್ಲ ಎನ್ನುವುದು ಮೀನು ವ್ಯಾಪಾರಿಗಳ ಅಭಿಪ್ರಾಯವಾಗಿದೆ…


