ಬೆಂಗಳೂರು : ಅತ್ಯಾಚಾರ ಪ್ರಕರಣ ಪ್ರಜ್ವಲ್ ರೇವಣ್ಣನಿಗೆ ಜೀವಾವಧಿ ಶಿಕ್ಷೆ, 5 ಲಕ್ಷ ದಂಡ! ಜೀವನ ಪರ್ಯಂತ ಸೆರೆವಾಸ.

news.ashwasurya.in
ಅಶ್ವಸೂರ್ಯ/ಶಿವಮೊಗ್ಗ :ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಆರೋಪದ ಮೇಲೆ ಪ್ರಜ್ವಲ್ ರೇವಣ್ಣರನ್ನು ಪೊಲೀಸರು ಬಂಧಿಸಿದ್ದರು. ಇದೀಗ 14 ತಿಂಗಳ ಬಳಿಕ ಜನಪ್ರತಿನಿಧಿಗಳ ವಿಷೇಶ ನ್ಯಾಯಾಲಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ್ದು ಆರೋಪಿಯಾಗಿದ್ದ ಪ್ರಜ್ವಲ್ ರೇವಣ್ಣನಿಗೆ ಶನಿವಾರ (01.08.2025) ದೂಷಿ ಎಂದು ಹೇಳಿತ್ತು ಇಂದಿಗೆ(02.08.2025) ಕಾಯ್ದಿರಿಸಿದ ತೀರ್ಪನ್ನು ಆದೇಶಿಸಿದ ನ್ಯಾಯಾಧೀಶರು ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ ಜೋತೆಗೆ
5 ಲಕ್ಷ ರೂಪಾಯಿ ದಂಡವನ್ನು ವಿಧಿಸಿದ್ದಾರೆ.
ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಕೋರ್ಟ್ನಲ್ಲಿ ಕಣ್ಣೀರು ಹಾಕಿದ್ದಾರೆ ಪ್ರಜ್ವಲ್!
ಬೆಳಗ್ಗೆ ಈ ಪ್ರಕರಣದ ವಿಚಾರಣೆಯ ವೇಳೆ ಪ್ರಜ್ವಲ್ ರೇವಣ್ಣ ಕಣ್ಣೀರಿಟ್ಟು ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡುವಂತೆ ಮನವಿ ಮಾಡಿದ ಘಟನೆ ಕೂಡ ನಡೆದಿತ್ತು. ಪ್ರಜ್ವಲ್ ರೇವಣ್ಣ ಅವರು ನ್ಯಾಯಾಧೀಶರ ಮುಂದೆ ತಮ್ಮ ಕುಟುಂಬದ ಪರಿಸ್ಥಿತಿಯನ್ನು ವಿವರಿಸಿದ್ದರು. “ನನಗೆ ಕುಟುಂಬವಿದೆ,ನನ್ನ ಅಜ್ಜ ಅಜ್ಜಿಗೆ ವಯಸ್ಸಾಗಿದೆ ನಾನು ಪ್ರತಿದಿನ ಕೋರ್ಟ್‌ಗೆ ಬಂದಿದ್ದೇನೆ.ನನ್ನ ಹೆತ್ತವರನ್ನು ಕಳೆದ ಒಂದು ವರ್ಷದಿಂದ ನೋಡಲು ಸಾಧ್ಯವಾಗಿಲ್ಲ. ಕಡಿಮೆ ಶಿಕ್ಷೆ ನೀಡುವಂತೆ ಕೇಳಿಕೊಳ್ಳುತ್ತೇನೆ,” ಎಂದು ಭಾವನಾತ್ಮಕವಾಗಿ ಮನವಿ ಮಾಡಿ ಕಣ್ಣೀರಿಟ್ಟ ಪ್ರಜ್ವಲ್, ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ, ನ್ಯಾಯಾಧೀಶರು ಪ್ರಜ್ವಲ್‌ನ ಶಿಕ್ಷಣದ ಕುರಿತು ಪ್ರಶ್ನಿಸಿದಾಗ, “ನಾನು ಮೆಕಾನಿಕಲ್ ಇಂಜಿನಿಯರಿಂಗ್ ಓದಿದ್ದೇನೆ,” ಎಂದು ಉತ್ತರಿಸಿದರು.

ಪ್ರಜ್ವಲ್ ತಮ್ಮ ಮೇಲಿನ ಆರೋಪಗಳ ಕುರಿತು ಜಡ್ಜ್ ಮುಂದೆ ವಾದ ಮಾಡಿದ್ದು, “ಆಕೆ (ದೂರುದಾರರು) ಆರಂಭದಲ್ಲಿ ದೂರು ಕೊಟ್ಟಿರಲಿಲ್ಲ, ವಿಡಿಯೊ ಬಂದ ಬಳಿಕವೇ ದೂರು ಸಲ್ಲಿಸಿದ್ದಾಳೆ,” ಎಂದು ವಾದಿಸಿದರು.
ರಾಜಕೀಯದಲ್ಲಿ ನಾನು ಬೇಗ ಬೆಳೆದಿದ್ದು, ನನಗೆ ಮುಳುವಾಯಿತು.ಚುನಾವಣೆಯ ಸಂಧರ್ಭದಲ್ಲಿಯೆ ಈ ವಿಡಿಯೋ ಹರಿದಾಡಿರುವುದು. ಮಾಧ್ಯಮಗಳ ವಿರುದ್ಧ ನಾನು ಆರೋಪ ಮಾಡುವುದಿಲ್ಲ. ನಾನು ಅತ್ಯಾಚಾರಿ ಅಲ್ಲ, ನನಗೆ ಕಡಿಮೆ ಶಿಕ್ಷೆ ಕೊಡಿ, ಎಂದು ನ್ಯಾಯಾಧೀಶರ ಮುಂದೆ ಪ್ರಜ್ವಲ್ ಕಣ್ಣೀರಾಕಿದ್ದರು.
ಏನಿದು ಪ್ರಜ್ವಲ್ ರೇವಣ್ಣನ ಅತ್ಯಾಚಾರ ಪ್ರಕರಣ.?
ಹೊಳೆನರಸೀಪುರದ 47 ವರ್ಷದ ಮನೆಯ ಕೆಲಸದ ಮಹಿಳೆಯೊಬ್ಬರು ಏಪ್ರಿಲ್ 28, 2024 ರಂದು ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರದ ಆರೋಪದಡಿ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಗೆ ವಹಿಸಿಕೊಂಡಿತು. ಬಳಿಕ, ಸಿಐಡಿ ಸೈಬರ್ ಕ್ರೈಮ್ ಠಾಣೆಯಲ್ಲಿ ಲೈಂಗಿಕ ಕಿರುಕುಳ, ಕ್ರಿಮಿನಲ್ ಬೆದರಿಕೆ, ಮತ್ತು ಐಟಿ ಕಾಯಿದೆಯಡಿ ಖಾಸಗಿತನ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣ ದಾಖಲಾಯಿತು. 2024 ರ ಮೇ 31 ರಂದು ಪ್ರಜ್ವಲ್‌ನನ್ನು ಬಂಧಿಸಲಾಯಿತು, ಮತ್ತು ಕಳೆದ 14 ತಿಂಗಳಿಂದ ಅವರು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ.



