ಸೊರಬ : ಹದಗೆಟ್ಟ ಕ್ಯಾಸನೂರು – ನಿಸರಾಣಿ ಸಂಪರ್ಕ ರಸ್ತೆ. ಜನರ ಜೀವಕ್ಕೆ ಕುತ್ತು.
news.ashwasurya.in
ಅಶ್ವಸೂರ್ಯ/ಸೊರಬ: ತಾಲ್ಲೂಕಿನ ಗಡಿಭಾಗದ ಕ್ಯಾಸನೂರು ಗ್ರಾಮದಿಂದ ನಿಸರಾಣಿ ಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು ದಿನನಿತ್ಯ ಇಲ್ಲಿನ ಸ್ಥಳೀಯರಿಗೆ ಸಾವಿನ ದವಡೆಯ ಮೇಲೆ ಸಂಚಾರ ಎಂಬಂತಾಗಿದೆ. ನಿಸರಾಣಿ ಗ್ರಾಮದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ದಿನನಿತ್ಯ 30 ರಿಂದ 40 ವಿದ್ಯಾರ್ಥಿಗಳು ಈ ರಸ್ತೆಯ ಮೂಲಕವೇ ಹಾದುಹೋಗಬೇಕು. ಇವರ ಪರಿಸ್ಥಿತಿ ಈ ಜೋರಾದ ಮಳೆಗಾಲದಲ್ಲಿ ಹೇಳತೀರದು. ನಿಸರಾಣಿ, ಬನದಕೊಪ್ಪ, ಕೆರೆಕೊಪ್ಪ ಸೇರಿದಂತೆ ಹಲವು ಗ್ರಾಮಗಳ ಜನರಿಗೆ ಸಾಗರ ತೆರಳಲು ಇದುವೇ ಪ್ರಮುಖ ರಸ್ತೆಯಾಗಿದೆ. ಹಾಳಾದ ರಸ್ತೆ ಹಲವು ಅಪಘಾತಗಳಿಗೆ ಆಹ್ವಾನ ನೀಡುತ್ತಿದ್ದು ಇಷ್ಟಾದರೂ ಕೂಡ ಸ್ಥಳೀಯ ಪಂಚಾಯತ್ ಯಾಗಲಿ, ತಾಲ್ಲೂಕು ಆಡಳಿತವಾಗಲಿ ಇದರ ಬಗ್ಗೆ ಇನ್ನೂ ಗಮನ ಹರಿಸದೇ ಇರುವುದು ತೀರಾ ನಾಚಿಕೆಗೇಡಿನ ಸಂಗತಿಯಾಗಿದೆ.
ರಸ್ತೆ ಸಂಪೂರ್ಣ ಹಾಳಾಗಿದ್ದು ಪ್ರತಿವರ್ಷ ಅದನ್ನು ಸರಿಪಡಿಸುವ ಬದಲು ಈಗಿರುವ ರಸ್ತೆಯನ್ನು ಸಂಪೂರ್ಣ ತೆಗೆದು ಹೊಸ ರಸ್ತೆಯನ್ನು ನಿರ್ಮಿಸಬೇಕು. ಈ ಮಾರ್ಗದಲ್ಲಿ ಯಾವುದೇ ಅನಾಹುತವಾದರೇ ಸರ್ಕಾರವೇ ಅದರ ಸಂಪೂರ್ಣ ಜವಾಬ್ದಾರಿ ಹೊರಬೇಕಾಗುತ್ತದೆ. ಅಂತಹ ಘಟನೆಗೆ ಅವಕಾಶ ಮಾಡಿಕೊಡದೇ ಶೀಘ್ರವೇ ರಸ್ತೆಯ ಮರು ನಿರ್ಮಾಣಕ್ಕೆ ಸಂಬಂಧಿಸಿದ ಇಲಾಖೆಯು ಕಾರ್ಯ ಪ್ರವೃತ್ತವಾಗಬೇಕು.
ವರದಿ : ವಿಕಾಸ್ ಕ್ಯಾಸನೂರು

