Headlines

ಪಾರ್ವತಮ್ಮ ರಾಜ್‍ಕುಮಾರ್ ಅವರ ಕನಸಿನ ಕೂಸು ಶ್ರೀ ವಜ್ರೇಶ್ವರಿ ಕಂಬೈನ್ಸ್‌‌ಗೆ 50 ವರ್ಷದ ಸಂಭ್ರಮ : ವಿಶೇಷ ವಿಡಿಯೋ ಹಂಚಿಕೊಂಡ ಅಶ್ವಿನಿ ಪುನೀತ್‌ ರಾಜ್‌ಕುಮಾರ್.

ಅಶ್ವಸೂರ್ಯ/ಬೆಂಗಳೂರು: ಶ್ರೀ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯ ಭವ್ಯ ಪರಂಪರೆಗೆ 50 ವರ್ಷ ತುಂಬಿದೆ.! ಪಾರ್ವತಮ್ಮ ರಾಜ್‌ಕುಮಾರ್ ಅವರ ಕನಸಿನ ಕೂಸು ಶ್ರೀ ವಜ್ರೇಶ್ವರಿ ಕಂಬೈನ್ಸ್ ಯಶಸ್ವಿ ಕನ್ನಡ ಚಿತ್ರಗಳನ್ನು ಕನ್ನಡ ಸಿನಿ ಪ್ರೇಕ್ಷಕರಿಗೆ‌ ನೀಡುತ್ತಾ ಸಂಸ್ಥೆ 50 ವರ್ಷ ಪೂರೈಸಿದೆ.

ಪಾರ್ವತಮ್ಮ ಅವರ ಅಗಲಿಕೆಯ ಬಳಿಕ ಪುತ್ರರಾದ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಇದರ ಜವಾಬ್ದಾರಿ ಹೊತ್ತಿದ್ದರು. ಇದರದ್ದೇ ನೆರಳಲ್ಲಿ ಚಿಗುರಿದ ಪಿಆರ್‌ಕೆ ಫಿಲಂಸ್ ಬ್ಯಾನರ್‌ನಡಿ ಇದೀಗ ಎಕ್ಕ ಸಿನಿಮಾ ನಿರ್ಮಾಣವಾಗಿದೆ. ʼಶ್ರೀ ವಜ್ರೇಶ್ವರಿ ಕಂಬೈನ್ಸ್ʼ 50 ವರ್ಷ ಪೂರೈಸಿರುವ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಶ್ರೀ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯ ಭವ್ಯ ಪರಂಪರೆಗೆ 50 ವರ್ಷಗಳ ಸಂಭ್ರಮಾಚರಣೆ. ಈ ಪಯಣದ ಪ್ರತಿಯೊಂದು ನೆನಪು, ಪ್ರತಿಯೊಂದು ಮೈಲುಗಲ್ಲೂ… ಇಂದಿಗೂ ಜೀವಂತವಾಗಿದೆ ಎಂದು ಅಶ್ವಿನಿ ಪುನೀತ್‌ ರಾಜ್‌ಕುಮಾರ್ ತಮ್ಮದೆ ಧ್ವನಿಯಲ್ಲಿ ಹೇಳಿದ್ದಾರೆ.

ವಿಡಿಯೋದ ಆರಂಭದಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಮಾತುಗಳನ್ನು ನೋಡಬಹುದು. “ನನ್ನ 5 ಜನ ಮಕ್ಕಳು ನನಗೆ 5 ಕಣ್ಣುಗಳು ಇದ್ದ ಹಾಗೆ. ನನಗೆ 4 ಮಕ್ಕಳು ಹುಟ್ಟಿದ ಬಳಿಕ ಸಂಸ್ಥೆ ಚಿತ್ರ ನಿರ್ಮಾಣಕ್ಕೆ ಬಂದೆ. ಪುನೀತ್ 25 ದಿನದ ಮಗುವಾಗಿದ್ದಾಗ ಅವನಿಂದಲೇ ಕ್ಯಾಮೆರಾ ಸ್ವಿಚ್ ಆನ್ ಮಾಡಿಸಿದ್ದೆ” ಎಂದು ಪಾರ್ವತಮ್ಮ ಹೇಳಿರುವುದನ್ನು ನೋಡಬಹುದು.

ಬಳಿಕ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾತನಾಡಿದ್ದು, ಅಮ್ಮ, ಅಪ್ಪಾಜಿ ಕೇವಲ ಸಿನಿಮಾಗಳನ್ನು ನಿರ್ಮಾಣ ಮಾಡಲಿಲ್ಲ. ಚಂದನವನದ ಪರಂಪರೆ ಎತ್ತಿ ಹಿಡಿದರು. ನಿರ್ಮಿಸಿದ 86 ಸಿನಿಮಾಗಳಲ್ಲಿ 75 ಹಿಟ್‌ ಸಿನಿಮಾಗಳು ‘ಆನಂದ್’ ಆಗಿ ಬಂದ ಶಿವಣ್ಣ, ‘ಚಿರಂಜೀವಿ ಸುಧಾಕರ’ ಆಗಿ ಬಂದ ರಾಘಣ್ಣ, ‘ಅಪ್ಪು’ ಆಗಿ ಬಂದ ನನ್ನ ಅಪ್ಪು. ಸಿನಿಮಾಗಳು ಇತಿಹಾಸ ಆಯ್ತು. ಜತೆಗೆ ಹೆಸರುಗಳು ಶಾಶ್ವತವಾಗಿ ಅಚ್ಚಳಿಯದೇ ಉಳಿಯಿತು. ‘ಸಿದ್ದಾರ್ಥ’ ಆಗಿ ವಿನಯ್, ಈಗ ಎಕ್ಕ ಆಗಿ ‘ಯುವ’, ವಜೇಶ್ವರಿ ಬರೀ ನಮ್ಮ ಸಂಸ್ಥೆಯ ಪರಿವಾರ ಮಾತ್ರವಲ್ಲ, ಎಲ್ಲಾ ಕಲಾವಿದರು, ಅಭಿಮಾನಿಗಳು, ತಂತ್ರಜ್ಞರು ಕಟ್ಟಿರುವ ಕನಸಿನ ಅರಮನೆ ವಜೇಶ್ವರಿ ಕಂಬೈನ್ಸ್” ಎಂದು ಹೇಳಿದ್ದಾರೆ.

1975ರಲ್ಲಿ ಡಾ.ರಾಜ್‌ಕುಮಾರ್ ಅವರ ನಟನೆಯಲ್ಲಿ ತ್ರಿಮೂರ್ತಿ ಸಿನಿಮಾ ನಿರ್ಮಾಣ ಮಾಡುವ ಮೂಲಕ ವಜ್ರೇಶ್ವರಿ ಕಂಬೈನ್ಸ್ ತಮ್ಮ ಮೊದಲ ಹೆಜ್ಜೆಯನ್ನು ಹೆಮ್ಮೆಯಿಂದ ಇಟ್ಟಿತ್ತು. ಮೊದಲ ಚಿತ್ರವೇ ಭರ್ಜರಿ ಯಶಸ್ಸನ್ನು ಕಂಡಿತು.

ಅಲ್ಲಿಂದ ಕಷ್ಟ ನಷ್ಟಗಳನ್ನ ಮೆಟ್ಟಿನಿಂತು ರಾಜ್‌ಕುಮಾರ್ ಅವರ ದಿಟ್ಟ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಪತಿಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬಂದಿದ್ದರು. ಪಾರ್ವತಮ್ಮ ಅವರ ಅಗಲಿಕೆಯ ಬಳಿಕ ಪುತ್ರರಾದ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅದರ ಜವಾಬ್ದಾರಿ ಹೊತ್ತಿದ್ದರು.ಕನ್ನಡ ಚಿತ್ರರಂಗದ ಸೂಪರ್ ಹಿಟ್ ಚಿತ್ರಗಳಾದ

“ಶಂಕ‌ರ್ ಗುರು” ‘ಜೀವನಚೈತ್ರ’, ‘ಓಂ’, ‘ನಂಜುಂಡಿ ಕಲ್ಯಾಣ’, ‘ಅಪ್ಪು’, ‘ಆಕಾಶ್’, ‘ಆನಂದ್‌’, ‘ಮೃತ್ಯುಂಜಯ’, ‘ಯಾರೇ ಕೂಗಾಡಲಿ’, ‘ದೇವತಾ ಮನುಷ್ಯ’, ‘ಆಕಸ್ಮಿಕ’, ‘ಹಾಲು ಜೇನು’ ಸೇರಿ ಹಲವು ಸೂಪರ್ ಹಿಟ್ ಸಿನಿಮಾಗಳು ಈ ಸಂಸ್ಥೆಯಲ್ಲಿ ನಿರ್ಮಾಣವಾಗಿದ್ದವು. ವಜೇಶ್ವರಿ ಕಂಬೈನ್ಸ್‌ ಪರಿವಾರದ ಪಿಆರ್‌ಕೆ ಪ್ರೊಡಕ್ಷನ್ 8 ವರ್ಷಗಳ ಹಿಂದೆ ಹುಟ್ಟಿತ್ತು.

ಪುನೀತ್ ರಾಜ್‌ಕುಮಾರ್ ಸಂಸ್ಥೆ ಹುಟ್ಟುಹಾಕಿ ಚಿತ್ರ ನಿರ್ಮಾಣ ಆರಂಭಿಸಿದ್ದರು.
ಸದ್ಯ ವಜ್ರೇಶ್ವರಿ ಸಂಸ್ಥೆಯನ್ನು ರಾಘವೇಂದ್ರ ರಾಜ್‌ಕುಮಾರ್ ಹಾಗೂ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ನೋಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!