
ಶಿವಮೊಗ್ಗ : ದೆವ್ವ ಬಿಡಿಸಲು ಕೋಲಿನಿಂದ ಹೊಡೆತ ಮಹಿಳೆ ಸಾವು.!
news.ashwasurya.in
ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗದಲ್ಲಿ ಮಹಿಳೆಗೆ ದೆವ್ವ ಹಿಡಿದಿದೆ ಎಂದು ಅದನ್ನು ಆಕೆಯ ದೇಹದಿಂದ ಬಿಡಿಸುವ ನೆಪದಲ್ಲಿ ಮಹಿಳೆಯೊಬ್ಬರನ್ನು ಕೋಲಿನಿಂದ ಮನಸ್ಸೊ ಇಚ್ಚೆ ಥಳಿಸಿ ಹತ್ಯೆ ಮಾಡಲಾಗಿದೆ.ಶಿವಮೊಗ್ಗ ಜಿಲ್ಲೆಯ ಹೊಸ ಜಂಬರಘಟ್ಟದಲ್ಲಿ ನಡೆದ ಈ ಘಟನೆಯಲ್ಲಿ ಗೀತಾ ಎಂಬ ಮಹಿಳೆ ನರರಾಕ್ಷಸರ ಕೈಗೆ ಸಿಲುಕಿ ಬಲಿಯಾಗಿದ್ದಾರೆ.! ಮೂಢನಂಬಿಕೆಯಿಂದ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.
ಇಂತಹ ಮೂಢನಂಬಿಕೆಗಳು ರಾಜ್ಯದ ಕೇಲವು ಸ್ಥಳಗಳಲ್ಲಿ ನೆಡೆಯುತ್ತಿದ್ದು ಸಾಕಷ್ಟು ಸಾವುನೋವುಗಳು ಸಂಭವಿಸಿವೆ. ಈಗ ಇಂತಹ ಮೂಢ ನಂಬಿಕೆಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.! ಮೃತ ಮಹಿಳೆಯ ಮೇಲೆ ದೆವ್ವ ಹಿಡಿದಿದೆ ಅದನ್ನು ಆಕೆಯ ಮೈಯಿಂದ ಬಿಡಿಸುವ ಬಲಪ್ರಯೋಗದ ನಡುವೆ 45 ವರ್ಷದ ಮಹಿಳೆಗೆ ಕೋಲುಗಳಿಂದ ಸತತವಾಗಿ ಬೀಳುತ್ತಿದ್ದ ಬಲವಾದ ಏಟುಗಳ ಹೊಡೆತಕ್ಕೆ ದಾರುಣವಾಗಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸ ಜಂಬರಘಟ್ಟದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಹಳೆ ಜಂಬರಘಟ್ಟ ನಿವಾಸಿ ಗೀತಾ ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಶಾಂತಮ್ಮ ಎಂಬ ಮಹಿಳೆ ಗೀತಾಳ ಮೈ ಮೇಲೆ ‘ದೆವ್ವ ಬರುತ್ತದೆ. ಅವಳಿಗೆ ದೆವ್ವ ಹಿಡಿದಿದೆ’ ಎಂಬ ಮೂಢ ನಂಬಿಕೆಯನ್ನು ನಂಬಿದ್ದಳು. ಹೀಗಾಗಿ ದೆವ್ವ ಬಿಡಿಸುವ ನಿಟ್ಟಿನಲ್ಲಿ ಹೊಸ ಜಂಬರಘಟ್ಟಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ದೆವ್ವ ಬಿಡಿಸುವ ಪ್ರಹಸನದ ವೇಳೆ ಗೀತಾಳಿಗೆ ನಿರಂತರವಾಗಿ ಕೋಲಿನಿಂದ ಹೊಡೆಯಲಾಗಿದೆ. ಗೀತಾ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮಹಿಳೆಯ ಸಾವಿನ ನಂತರ ಗ್ರಾಮದಲ್ಲಿ ಪಂಚಾಯತಿ ನಡೆದಿದ್ದು, ಇದು ವಿಫಲವಾದ ಹಿನ್ನಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ಗೀತಾಳ ಮೃತದೇಹವನ್ನು ಹೊಳೆಹೊನ್ನೂರು ಸಮುದಾಯ ಭವನದಲ್ಲಿ ಇಡಲಾಗಿದ್ದು, ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಂಬರಗಟ್ಟೆಯ ನಿವಾಸಿ ಆಶಾ ತಮ್ಮ ಮೇಲೆ ಗ್ರಾಮದೇವತೆ ಚೌಡೇಶ್ವರಿ ಬಂದಿದ್ದಾಳೆ ಎಂದು ಕಳೆದ 15 ದಿನಗಳಿಂದ ಊರಿನವರನ್ನು ನಂಬಿಸಿದ್ದಳು. ಹೀಗಾಗಿ ತನ್ನ ತಾಯಿಯ ಮೈಮೇಲೆ ಆಗಾಗ ದೆವ್ವ ಬರುತ್ತದೆ ಎಂದು ಗೀತಾ ಅವರನ್ನು ಪುತ್ರ ಸಂಜಯ ರಾತ್ರಿ 9.15ರ ವೇಳೆಗೆ ಆಶಾ ಮನೆಗೆ ಕರೆದೊಯ್ದಿದ್ದರು.
ಗೀತಮ್ಮನ ಮೈಯಲ್ಲಿ ಆತ್ಮವೊಂದು ಹೊಕ್ಕಿದೆ. ಪೂಜೆ ಮಾಡಿ ಅದನ್ನು ಹೊರ ಹಾಕುತ್ತೇನೆ ಎಂದು ಆಶಾ ತಿಳಿಸಿದ್ದರು. ಹೀಗಾಗಿ ಅವರ ಮನೆಗೆ ಕರೆದೊಯ್ದಿದ್ದೆವು. ಮೊದಲಿಗೆ ದೇವರ ಪೂಜೆ ಮಾಡಿದ್ದರು. ನಂತರ ದೆವ್ವ ಓಡಿಸುವೆ ಎಂದು ತಲೆ ಮೇಲೆ ಕಲ್ಲು ಹೊರಿಸಿ ಗ್ರಾಮದ ಹೊರಗಿನ ಮರವೊಂದರ ಬಳಿಗೆ ಕರೆದೊಯ್ದರು. ಮರದ ಟೊಂಗೆಯೊಂದನ್ನು ಕಿತ್ತುಕೊಂಡು ಅಲ್ಲಿ ಮನಬಂದಂತೆ ಥಳಿಸಿದರು. ತಲೆ ಮೇಲೆ ದೊಡ್ಡ ಗಾತ್ರದ ಕಲ್ಲು ಹೊರಿಸಿ ಪಕ್ಕದ ಕಾಲುವೆಯಲ್ಲಿದ್ದ ತಣ್ಣೀರು ಎರಚಿದರು. ಚಳಿ ತಾಳಲಾಗದೇ ನಡುಗುತ್ತಿದ್ದ ಅಮ್ಮ ಕುಸಿದು ಬಿದ್ದರು’ ಎಂದು ಸಂಜಯ್ ಹೊಳೆಹೊನ್ನೂರು ಠಾಣೆ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಾರೆ.

ಜಂಬರಗಟ್ಟೆ ಗ್ರಾಮದ ಗೀತಮ್ಮ (45) ಮೃತ ಮಹಿಳೆ. ದೆವ್ವ ಬಿಡಿಸುವ ನೆಪದಲ್ಲಿ ಹಲ್ಲೆ ನಡೆಸಿದ ಅದೇ ಗ್ರಾಮದ ಆಶಾ (35), ಆಕೆಯ ಪತಿ ಸಂತೋಷಕುಮಾರ್ (37) ಹಾಗೂ ತಾಯಿಯನ್ನು ಅಲ್ಲಿಗೆ ಕರೆದೊಯ್ದಿದ್ದ ಗೀತಮ್ಮ ಅವರ ಪುತ್ರ ಸಂಜಯ್ (20) ಅವರನ್ನು ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.ಸ್ಥಳೀಯರು, ಸಾಮಾಜಿಕ ಕಾರ್ಯಕರ್ತರು ಈ ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಇಂತಹ ಮೂಢನಂಬಿಕೆಯನ್ನು ಮಟ್ಟಹಾಕಬೇಕು. ವೈದ್ಯಕೀಯ ಚಿಕಿತ್ಸೆ ಮತ್ತು ವೈಜ್ಞಾನಿಕ ದೃಷ್ಟಿಕೋನದಲ್ಲಿ ಸಮಾಜ ಮುಂದುವರಿಬೇಕು ಎಂಬ ಬಲವಾದ ಮಾತು ಕೇಳಿ ಬರುತ್ತಿದೆ.


