
” ವೈದ್ಯೋ ನಾರಾಯಣ ಹರಿ” ವೈದ್ಯ ದಿನಾಚರಣೆಯ ಶುಭಾಶಯಗಳು…

news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಪ್ರತಿ ವರ್ಷ ಜುಲೈ 1 ರಂದು ನಾವು ವೈದ್ಯ ದಿನವನ್ನು ಆಚರಿಸುತ್ತೇವೆ. ನಮ್ಮ ವೈದ್ಯರುಗಳ ನಿಸ್ವಾರ್ಥ ಸೇವೆ, ಅಚಲ ಬದ್ಧತೆ ಮತ್ತು ಕಠಿಣ ಪರಿಶ್ರಮಕ್ಕೆ ಕೃತಜ್ಞತೆ ಸಲ್ಲಿಸುವ ದಿನವಿದು. ದಿನದ 24 ಗಂಟೆಯೂ, ವಾರದ ಏಳು ದಿನಗಳೂ ಅವರು ನಮ್ಮ ಆರೋಗ್ಯವನ್ನು ಕಾಪಾಡಲು ಶ್ರಮಿಸುತ್ತಾರೆ. ನಮ್ಮ ವೈಯಕ್ತಿಕ ಆರೋಗ್ಯದ ಜೊತೆಗೆ, ಸಮುದಾಯದ ಆರೋಗ್ಯವನ್ನು ಸುಧಾರಿಸುವಲ್ಲಿ ಅವರ ಪಾತ್ರ ಅಮೂಲ್ಯವಾದುದು. ಈ ವಿಶೇಷ ದಿನದಂದು, ನಮ್ಮೆಲ್ಲ ವೈದ್ಯರಿಗೆ ನಾವು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸೋಣ. ನಮ್ಮೆಲ್ಲರ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ಶ್ರಮಿಸುವ ವೈದ್ಯರ ಸೇವೆಗೆ ನಾವೆಲ್ಲರೂ ಚಿರಋಣಿ.
” ವೈದ್ಯೋ ನಾರಾಯಣ ಹರಿ”ಎಂದು ನಮ್ಮ ಶಾಸ್ತ್ರಗಳಲ್ಲಿ ವೈದ್ಯರನ್ನು ದೇವರಿಗೆ ಸಮಾನ ಎಂದು ಪರಿಗಣಿಸಿದೆ ನಿಜವಾಗಿಯೂ ವೈದ್ಯ ವೃತ್ತಿಯು ಅತ್ಯಂತ ಮಾನವೀಯ ಮೌಲ್ಯಗಳನ್ನು ಹೊಂದಿದ ತ್ಯಾಗ ಭರಿತವಾದ ಸೇವಾ ವೃತ್ತಿ ಹಾಗೂ ನಿಜ ಅರ್ಥದಲ್ಲಿ ಆರೋಗ್ಯವಂತ ಸಮಾಜವನ್ನು ನಿರ್ಮಿಸುವಲ್ಲಿ ವೈದ್ಯರ ಪಾತ್ರ ಅತ್ಯಂತ ಹಿರಿದಾದದು .
ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ರಂಗವೂ ತನ್ನದೇ ಆದಂತಹ ಸ್ವರೂಪ ಬದಲಾವಣೆಯನ್ನು ಹೊಂದುತ್ತಿದೆ ಈ ಹಿಂದೆ ಶಿವಮೊಗ್ಗದಿಂದ ಮಣಿಪಾಲ, ಮಂಗಳೂರು, ಬೆಂಗಳೂರು ನಗರಗಳಿಗೆ ಹೋದರೆ ಮಾತ್ರ ಸಿಗುತ್ತಿದ್ದ ವೈದ್ಯಕೀಯ ಸೇವೆಗಳನ್ನು ಸ್ಥಳೀಯವಾಗಿ ಸಿಗುವಂತೆ ಮಾಡಿ ಶಿವಮೊಗ್ಗ ನಗರವನ್ನು ಆರೋಗ್ಯ ರಂಗದಲ್ಲಿ ಉನ್ನತ ಹಾಗೂ ಉತ್ತಮ ಮಟ್ಟಕ್ಕೆ ಕೊಂಡೊಯ್ಯುವಂತಹ ಅನೇಕ ವೈದ್ಯರುಗಳು ಹಾಗೂ ವೈದ್ಯಕೀಯ ಸಂಸ್ಥೆಗಳು ಶಿವಮೊಗ್ಗ ನಗರದಲ್ಲಿ ಅತ್ಯಂತ ಪ್ರಮುಖವಾಗಿ ಚಾಲ್ತಿಯಲ್ಲಿದೆ.
ಪ್ರಮುಖವಾಗಿ ಮಲೆನಾಡಿನ ಡಾ. ಎಂದೇ ಪ್ರಸಿದ್ಧಿ ಪಡೆದಿದ್ದ ಡಾ. ವ್ಯಾಸರಾಯರು, ಡಾಕ್ಟರ್ ಅಶೋಕ್ ಪೈ, ಡಾಕ್ಟರ್ ನಿರ್ಮಲ ,ಡಾಕ್ಟರ್ ರಜನಿ ಪೈ,ಡಾಕ್ಟರ್ ಎನ್.ಎಲ್ .ನಾಯಕ್ ಡಾಕ್ಟರ್ ಬಿ.ನಾರಾಯಣ್ , ಡಾಕ್ಟರ್ ವೆಂಕಟರಾವ್, ಡಾ. ಶಿವರಾಮಕೃಷ್ಣ ರವರಂತಹ ಹಿರಿಯ ಪ್ರಾಮಾಣಿಕ ಜನಪರ ಹಾಗೂ ಸಮಾಜ ಮುಖಿಯಾದ ವೈದ್ಯರ ಮೇಲ್ಪಂಕ್ತಿ ಹೊಂದಿದ ಶಿವಮೊಗ್ಗ ನಗರವು ಇತ್ತೀಚಿನ ದಿನಗಳಲ್ಲಿ ಯುವ ವೈದ್ಯರುಗಳಾದ ಡಾಕ್ಟರ್ ಧನಂಜಯ್ ಸರ್ಜಿ,ಡಾಕ್ಟರ್ ಹೇಮಂತ್ , ಡಾಕ್ಟರ್ ತೇಜಸ್ವಿ ,ಡಾಕ್ಟರ್ ನಾಗೇಂದ್ರ, ಡಾಕ್ಟರ್ ಲತಾ ನಾಗೇಂದ್ರ,ಡಾಕ್ಟರ್ ಅರುಣ್, ಡಾಕ್ಟರ್ ರಮ್ಯಾ ಭಟ್, ಡಾಕ್ಟರ್ ಸಂಧ್ಯಾ,ಡಾಕ್ಟರ್ ಅವಿನಾಶ್, ಡಾಕ್ಟರ್ ಶಶಾಂಕ್, ಡಾಕ್ಟರ್ ವಾಮನ ಶ್ಯಾನುಭಾಗ್ ಡಾಕ್ಟರ್ ಸುಧೀಂದ್ರ,ದಂತ ವೈದ್ಯರುಗಳಾದ ಡಾ,ರವಿ ಕಿರಣ್,ಡಾ, ಉಮಾ ಶಂಕರ್ ,ಡಾ, ಶಿವಕುಮಾರ್ , ಜೆರ್ರಿ ಜೋಸೆಫ್ ರವರಂತಹ ಯುವ ಸಮಾಜಮುಖಿ ವೈದ್ಯರುಗಳಿಂದಾಗಿ ಶಿವಮೊಗ್ಗ ನಗರವು ಆರೋಗ್ಯ ರಂಗದಲ್ಲಿ ಕ್ರಾಂತಿಕಾರಕ ಮುನ್ನಡೆಯನ್ನು ಸಾಧಿಸಿದೆ.
ಈ ವೈದ್ಯರುಗಳ ನೇತೃತ್ವದಲ್ಲಿ ಸರ್ಜಿ ಆಸ್ಪತ್ರೆ, ಸಂಜೀವಿನಿ ಆಸ್ಪತ್ರೆ, ಮೆಟ್ರೋ ಆಸ್ಪತ್ರೆ,ಮ್ಯಾಕ್ಸ್ ಆಸ್ಪತ್ರೆ, ನಾರಾಯಣ ಹೃದಯಾಲಯ,ನಂಜಪ್ಪ ಆಸ್ಪತ್ರೆ, ಮಾನಸ ಆಸ್ಪತ್ರೆ, ನಂಜಪ್ಪ ಲೈಫ್ ಕೇರ್,ಭರತ್ ನ್ಯೂರೋ ಸುಬ್ಬಯ್ಯ ಮೆಡಿಕಲ್ ಕಾಲೇಜ್ , ಶಿವಮೊಗ್ಗ ಮೆಡಿಕಲ್ ಕಾಲೇಜ್,ಹಾಗೂ ಶರಾವತಿ ಡೆಂಟಲ್ ಕಾಲೇಜು ಆಸ್ಪತ್ರೆಗಳಲ್ಲಿ ಇಂದಿನ ನವೀನ ತಂತ್ರಜ್ಞಾನದ ಎಲ್ಲಾ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸಾ ಯಂತ್ರಗಳು ಹಾಗೂ ವೈದ್ಯರ ಸೇವೆಗಳು ಲಭ್ಯವಿದೆ.
ಕಾಲಕ್ಕೆ ತಕ್ಕಂತೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಕೂಡ ಶಿವಮೊಗ್ಗ ಮೆಡಿಕಲ್ ಕಾಲೇಜ್ ಆರಂಭಿಸಿದ ನಂತರ ಮೇಲ್ದರ್ಜೆಗೇರಿಸಲ್ಪಟ್ಟು ಡಾ. ಶ್ರೀಧರ್, ಡಾ. ತಿಮ್ಮಪ್ಪರಂತಹ ಉತ್ತಮ ವೈದ್ಯರುಗಳಿಂದಾಗಿ ಸುಲಭ ಹಾಗೂ ಸುಸಜ್ಜಿತ ಸೇವೆಯು ಶಿವಮೊಗ್ಗದ ಅತ್ಯಂತ ಕಡು ಬಡವರಿಗೂ ಕೂಡ ಸಿಗುವಂತಾಗಿದೆ
ಒಂದು ಕಾಲದಲ್ಲಿ ಆಯುರ್ವೇದ ಎಂದರೆ ಸಂಶಯಾತ್ಮಕವಾಗಿ ನೋಡುತ್ತಿದ್ದ ಜನರು ಕೂಡ ಇಂದು ಶಿವಮೊಗ್ಗದಲ್ಲಿ ಆಯುರ್ವೇದ ಆಸ್ಪತ್ರೆಗಳತ್ತ ಹಾಗೂ ಆಯುರ್ವೇದ ವೈದ್ಯರುಗಳ ಸೇವೆಗೆ ಮಾರುಹೋಗಿದ್ದಾರೆ ಶಿವಮೊಗ್ಗದ ಎಲ್ಲ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಆಯುರ್ವೇದ ವಿಭಾಗವು ಇದೆ ಹಾಗೂ ಶಿವಮೊಗ್ಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಆಯುರ್ವೇದ ಕಾಲೇಜು ಮೇಲ್ಪಂಕ್ತಿಯಾಗಿದೆ. ಇದಲ್ಲದೆ ಬಾಪೂಜಿ ಆಯುರ್ವೇದ ಕಾಲೇಜು ,ತಗ್ಗಿನ ಮಠದ ಆಯುರ್ವೇದ ಕಾಲೇಜಿನಂತಹ ಸಂಸ್ಥೆಗಳು ಆಯುರ್ವೇದದಲ್ಲಿ ಪಂಚಕರ್ಮ ಚಿಕಿತ್ಸೆ /ಲೋಹ ಭಸ್ಮ ಚಿಕಿತ್ಸೆ ನೀಡುತ್ತಿರುವ ಹೊರತಾಗಿ ಅನೇಕ ಖಾಸಗಿ ಆಯುರ್ವೇದ ವೈದ್ಯಕೀಯ ಸಂಸ್ಥೆಗಳು ಈಗಾಗಲೇ ಶಿವಮೊಗ್ಗದಲ್ಲಿ ಕಾರ್ಯ ಪ್ರವೃತ್ತವಾಗಿದೆ. ಈ ಹಿಂದೆ ಶಿವಮೊಗ್ಗದಲ್ಲಿ ವಿಶ್ವ ಭಾರತಿ ಸಂತೋಷ್ ಗುರೂಜಿಗಳು ಕೂಡ ಆಯುರ್ವೇದವನ್ನು ಯಶಸ್ವಿಯಾಗಿ ಜನರ ಬಳಿಗೆ ಕೊಂಡೊಯ್ದಿದ್ದಾರೆ.ಇಂದಿಗೂ ಕೂಡ ಶಿವಮೊಗ್ಗದ ಆಯುರ್ವೇದ ವೈದ್ಯರುಗಳಾದ ಡಾಕ್ಟರ್ ರಮೇಶ್ ಕೆ.ಪಿ, ಡಾಕ್ಟರ್ ಕಾಂತರಾಜ್,ಡಾಕ್ಟರ್ ಚಿತ್ರಲೇಖ , ಡಾ.ಲತಾ ರಮೇಶ್, ಡಾ,ಪ್ರಕೃತಿ ಮಂಚಾಲೆ, ಡಾಕ್ಟರ್ ತಾನಾಜಿ, ಡಾಕ್ಟರ್ ಶ್ರೀನಿವಾಸ ರೆಡ್ಡಿ ಮುಂತಾದವರು ಶಿವಮೊಗ್ಗ ನಗರದಲ್ಲಿ ಆಯುರ್ವೇದ ಚಿಕಿತ್ಸೆಯನ್ನು ಉತ್ತಮ ಗುಣಮಟ್ಟದಲ್ಲಿ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜನರು ಕೂಡ ಭಾರತೀಯ ವೈದ್ಯಶಾಸ್ತ್ರಕ್ಕೆ ಮಾರು ಹೋಗಿದ್ದಾರೆ.
ಸಾಮಾಜಿಕ ಸೇವೆಗಳಲ್ಲಿ ಅತ್ಯುತ್ತಮ ಸೇವೆಯಾದ ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಿರುವ ಎಲ್ಲಾ ವೈದ್ಯರುಗಳ ಕಾರಣ ಇಂದಿನ ಈ ವೇಗದ ಯುಗದಲ್ಲಿ ಕೂಡ ಜನರ ಆರೋಗ್ಯದ ಸಂರಕ್ಷಣೆಯಾಗಿದೆ ಹಾಗೂ ಭಾರತದ ಜನರ ಜೀವಿತಾವಧಿಯು ಕೂಡ ಹೆಚ್ಚಾಗಿದೆ .ಇದರಲ್ಲಿ ಅತ್ಯಂತ ಪ್ರಮುಖ ಪಾತ್ರ ವೈದ್ಯರುಗಳದ್ದು ಎಂದರೆ ತಪ್ಪಾಗಲಾರದು .

ಒಂದು ಕಾಲದಲ್ಲಿ ನಮ್ಮ ಪೂರ್ವಜರು ತಮ್ಮ ಆರೋಗ್ಯವನ್ನು ಆರೋಗ್ಯ ಪೂರ್ಣವಾದ ದೈಹಿಕ ಕಾಯಕ ಹಾಗೂ ಗುಣಮಟ್ಟದ ಆಹಾರ ಮತ್ತು ವಿಶ್ರಾಂತಿಗಳಿಂದ ಪಡೆಯುತ್ತಿದ್ದರು. ಆದರೆ ಇಂದಿನ ಜನರು ನಿತ್ಯ ಜೀವನ ಜಂಜಾಟದ ಭರದಲ್ಲಿ ಆರೋಗ್ಯದ ಬಗ್ಗೆ ಯಾವುದೇ ಗಮನ ಇಲ್ಲದೆ ತಮ್ಮ ದೈನಂದಿನ ಜೀವನವನ್ನು ಕಟ್ಟಿಕೊಳ್ಳಲಿಕ್ಕೆ ಮುನ್ನುಗುತ್ತಿರುವ ಈ ಕಾಲಘಟ್ಟದಲ್ಲಿ ಅವರುಗಳು ಆರೋಗ್ಯವನ್ನು ಸ್ಥಿರವಾಗಿ ಕಾಪಾಡಿಕೊಳ್ಳುವ ಬದಲು ಅನಾರೋಗ್ಯವಾದಾಗ ಮಾತ್ರ ವೈದ್ಯರುಗಳತ್ತಾ ಅಥವಾ ಆಸ್ಪತ್ರೆಗಳತ್ತ ಧಾವಿಸುವ ಒಂದು ವ್ಯವಸ್ಥೆ ನಮ್ಮ ಸಮಾಜದಲ್ಲಿ ಈಗ ರೂಪುಗೊಂಡಿದೆ.ಇಂತಹ ಸಂದರ್ಭದಲ್ಲಿ ತಮ್ಮ ಕುಟುಂಬ,ಜೀವನ ,ಜೀವ, ಹಗಲು,ರಾತ್ರಿ ಎನ್ನದೆ ಎಲ್ಲವನ್ನು ಮರೆತು ತನ್ನನ್ನು ಅರಸಿ ಬಂದಂತಹ ವ್ಯಕ್ತಿಯ ಆರೋಗ್ಯ ರಕ್ಷಣೆಗೆ ಧಾವಿಸುವಂತಹ ವೈದ್ಯ ಸಮೂಹವು ಇಂದು ಸಮಾಜದಲ್ಲಿ ಅತ್ಯಂತ ಮೇಲ್ಪಂಕ್ತಿಯಲ್ಲಿ ಗೌರವಿಸಲ್ಪಡಬೇಕಾದಂತಹ ಒಂದು ಸಮೂಹ.
ವೈದ್ಯರುಗಳೇ,ಈ ದಿನ ನಿಮಗಾಗಿ ಸಮರ್ಪಣೆ, ನಿಮ್ಮ ಸಹಾನುಭೂತಿ ಮತ್ತು ಸಮಾಜಕ್ಕೆ ನೀವು ನೀಡುವ ಅಮೂಲ್ಯ ಕೊಡುಗೆಗಳನ್ನು ಸ್ಮರಿಸುವ ದಿನ. ನೀವು ಪ್ರತಿ ದಿನವೂ ಜನರ ಜೀವ ಉಳಿಸಲು, ನೋವನ್ನು ನಿವಾರಿಸಲು ಮತ್ತು ಭರವಸೆಯನ್ನು ನೀಡಲು ಅಕ್ಷರಶಃ ನಿಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದೀರಿ. ಕೋವಿಡ್-19 ನಂತಹ ಸವಾಲಿನ ಸಮಯದಲ್ಲಿ ನಿಮ್ಮ ಅಚಲ ಬದ್ಧತೆ ಮತ್ತು ತ್ಯಾಗ ನಿಜಕ್ಕೂ ಶ್ಲಾಘನೀಯ. ವೈದ್ಯಕೀಯ ಕ್ಷೇತ್ರದಲ್ಲಿ ನೀವು ಕಲಿಯುವ, ಸಂಶೋಧಿಸುವ ಮತ್ತು ಸುಧಾರಣೆ ಮಾಡುವ ನಿರಂತರ ಪ್ರಯತ್ನಗಳು ನಮ್ಮ ಸಮಾಜದ ಆರೋಗ್ಯ ಭವಿಷ್ಯವನ್ನು ಉಜ್ವಲಗೊಳಿಸುತ್ತವೆ. ನಿಮ್ಮ ಅಸಾಧಾರಣ ಸೇವೆಗಾಗಿ ಇಡೀ ಸಮಾಜ ನಿಮ್ಮೊಂದಿಗೆ ಇದೆ ಮತ್ತು ನಿಮಗೆ ಕೃತಜ್ಞವಾಗಿದೆ. ನಿಮ್ಮ ಈ ಮಹತ್ತರ ಕಾರ್ಯ ಸದಾ ಮುಂದುವರೆಯಲಿ ಎಂದು ಹಾರೈಸುತ್ತಾ……
ನಿಸ್ವಾರ್ಥ ಸೇವೆ ಮತ್ತು ಅಚಲ ಬದ್ಧತೆಯಿಂದ ಜನರ ಆರೋಗ್ಯ ಕಾಪಾಡುವ ನಿಮ್ಮೆಲ್ಲರ ಶ್ರಮಕ್ಕೆ ಮತ್ತು ತ್ಯಾಗಕ್ಕೆ ನಾವು ಸದಾ ಚಿರಋಣಿ.ಆತ್ಮೀಯ ವೈದ್ಯರಾದ ನಿಮಗೆ ವೈದ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಹಾಗೂ ಹೃತ್ಪೂರ್ವಕ ನಮನಗಳು.
ಎನ್.ಡಿ.ಸತೀಶ್,
ಜಿಲ್ಲಾ ಕೋಶಾಧ್ಯಕ್ಷರು,
ಬಿಜೆಪಿ, ಶಿವಮೊಗ್ಗ.
9844005558


