missing Cass: ನವ ಜೋಡಿ ಮಿಸ್ಸಿಂಗ್ ಕೇಸ್‌ನಲ್ಲಿ ಮಹತ್ವದ ಸುಳಿವು; ಆ ನಿರ್ಜನ ಪ್ರದೇಶದಲ್ಲಿ ಅವರ ಜೊತೆಗಿದ್ದ ಆ ತ್ರಿಮೂರ್ತಿ ವ್ಯಕ್ತಿಗಳು ಯಾರು.!?
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಇಂದೋರ್ : ಇಂದೋರ್ ದಂಪತಿ ನಾಪತ್ತೆ ಪ್ರಕರಣ ಮಹತ್ವ ಸುಳಿವು ಪತ್ತೆ
ಇಂದೋರ್ ನಿಂದ ಹನಿಮೂನ್‌ಗಾಗಿ (honeymoon) ಮೇಘಾಲಯಕ್ಕೆ (Meghalaya) ತೆರಳಿ ನವ ವಧು ವರರು ನಾಪತ್ತೆಯಾಗಿದ್ದರು.!? ಇಂದೋರ್ ಮೂಲದ ದಂಪತಿ ಕಾಣೆಯಾದ ದಿನದಂದು ಮೂವರು ವ್ಯಕ್ತಿಗಳೊಂದಿಗೆ ಇದ್ದರು ಎಂದು ಮೇಘಾಲಯ ಟೂರಿಸ್ಟ್ ಗೈಡ್ ಹೇಳಿದ್ದಾರೆ. ತನಿಖೆಯ ವೇಳೆ ಮಾವ್ಲಾಖಿಯಾತ್ ಗ್ರಾಮದ ಸ್ಥಳೀಯ ಮಾರ್ಗದರ್ಶಿ ಆಲ್ಬರ್ಟ್ ಪಿಡೆ ಅವರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಮೇ 23 ರಂದು ನಾಪತ್ತೆಯಾಗಿದ್ದ ಇಂದೋರ್‌ನ ರಾಜಾ ರಘುವಂಶಿ ಮತ್ತು ಸೋನಮ್ ದಂಪತಿಯನ್ನು ಕೊನೆಯ ಬಾರಿಗೆ ಮೂವರು ಅಪರಿಚಿತ ವ್ಯಕ್ತಿಗಳೊಂದಿಗೆ ನಾನು ನೋಡಿದ್ದಾಗಿ ಹೇಳಿಕೊಂಡಿದ್ದಾರೆ.

ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಹನಿಮೂನ್ ಪ್ರವಾಸದಲ್ಲಿದ್ದ ರಾಜಾ ರಘುವಂಶಿ ಮತ್ತು ಅವರ ಪತ್ನಿ ಸೋನಮ್ ಸೊಹ್ರಾದಲ್ಲಿ ನಾಪತ್ತೆಯಾಗಿದ್ದರು. ರಾಜಾ ರಘುವಂಶಿ ಅವರ ಶವ ಪತ್ತೆಯಾಗಿದ್ದು, ಸೋನಮ್ ಇನ್ನೂ ಕಾಣೆಯಾಗಿದ್ದಾರೆ. ಅವರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಮುಂದುವರಿದಿದ್ದು ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ.

ಈ ಕುರಿತು ಪೊಲೀಸರಿಗೆ ತನಿಖೆ ವೇಳೆ ಮಾಹಿತಿ ನೀಡಿದ ಮಾವ್ಲಾಖಿಯಾತ್ ಗ್ರಾಮದ ಸ್ಥಳೀಯ ಟೂರಿಸ್ಟ್ ಗೈಡ್ ಆಲ್ಬರ್ಟ್ ಪಿಡೆ, ಮೇ 23ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನೊಂಗ್ರಿಯಾತ್ ನಿಂದ ಮಾವ್ಲಾಖಿಯಾತ್ ಗೆ ತೆರಳಲು ಬಳಸುವ 3,000 ಮೆಟ್ಟಿಲುಗಳನ್ನು ಹತ್ತುತ್ತಿದ್ದಾಗ ತಾನು ರಾಜಾ ರಘುವಂಶಿ ದಂಪತಿಯನ್ನು ಮೂವರು ಅಪರಿಚಿತ ಪ್ರವಾಸಿಗರೊಂದಿಗೆ ನೋಡಿದ್ದೆ ಎಂದು ಪೊಲೀಸರ ಬಳಿ ಹೇಳಿದ್ದಾರೆ.! ದಂಪತಿಗಳಿಗೆ ಹಿಂದಿನ ದಿನ ತಾನೇ ಮಾರ್ಗದರ್ಶನ ನೀಡಿದ್ದೆ. ಆದರೆ ಮತ್ತೆ ನನ್ನ ಮಾರ್ಗದರ್ಶನ ಪಡೆಯಲು ಅವರು ನನ್ನನ್ನು ನಿರಾಕರಿಸಿ ಬೇರೊಬ್ಬರನ್ನು ನೇಮಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ.

ಆದ್ದರಿಂದ ನಾನು ಅವರನ್ನು ಮತ್ತೆ ನೋಡಿದಾಗ ಅವರನ್ನು ಗುರುತಿಸಿದೆ. ನಾಲ್ವರು ಪುರುಷರು ಒಟ್ಟಿಗೆ ಇದ್ದರು. ಮಹಿಳೆ ಹಿಂದೆ ನಡೆಯುತ್ತಿದ್ದರು. ಅವರೆಲ್ಲ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಅವರೇನು ಮಾತನಾಡುತ್ತಿದ್ದಾರೆ ಎಂದು ನಾನು ಕೇಳಿಸಿಕೊಳ್ಳಲಿಲ್ಲ. ಮಾವ್ಲಾಖಿಯಾತ್ ತಲುಪಿದಾಗ ದಂಪತಿಯ ಬಳಿ ಸ್ಕೂಟರ್ ಇರಲಿಲ್ಲ ಎಂದು ಹೇಳಿದ್ದಾರೆ.
ಈ ಮಾಹಿತಿಯನ್ನು ಸ್ಥಳೀಯ ಪೊಲೀಸರೊಂದಿಗೆ ಅವರು ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಸೋನಮ್ ಅವರ ಸಹೋದರ ಗೋವಿಂದ್, ತನಿಖೆಯ ನಿಧಾನವಾಗಿದೆ. ಮೇಘಾಲಯ ಸರ್ಕಾರವು ಈ ಪ್ರಕರಣದಲ್ಲಿ ನನ್ನ ಸಹೋದರಿ ಸೋನಮ್ ಕೂಡ ಸತ್ತಿದ್ದಾಳೆ ಎಂದು ಪರಿಗಣಿಸಿದ್ದಾರೆ ಎಂದು ಆರೋಪಿಸಿದರು.

ಆದರೆ ನಾವು ಸೋನಮ್ ಜೀವಂತವಾಗಿದ್ದಾಳೆ ಎಂದು ನಂಬುತ್ತೇವೆ. ಸಿಬಿಐ ಅಥವಾ ಯಾವುದೇ ಇತರ ಸಂಸ್ಥೆಯನ್ನು ಬೇಕಾದರೂ ಅವರು ಈ ಪ್ರಕರಣದ ತನಿಖೆಗೆ ನೆಮಿಸಲಿ.ನನ್ನ ಸಹೋದರಿ ಸೋನಮ್ ಅನ್ನು ಹುಡುಕಿ ಕೊಡಲಿ ಎಂದು ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ, ಕಾಣೆಯಾದ ಮಹಿಳೆಯನ್ನು ಪತ್ತೆಹಚ್ಚಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಈ ಕಾರ್ಯಾಚರಣೆಗೆ ಇಲ್ಲಿನ ಪರಿಸರ ವಾತಾವರಣ ಸವಾಲಾಗಿದೆ. ನಿರಂತರ ಮಳೆ ಮತ್ತು ಮಂಜು ಮಸುಕಾದ ಪರಿಸ್ಥಿತಿಯಿಂದ ಅಡ್ಡಿಯಾಗುತ್ತಿದೆ ಎಂದು ಹೇಳಿದರು.
ನಾವು ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ. ನಿರಂತರ ಹುಡುಕಾಟ ನಡೆಸುತ್ತಿರುವುದಾಗಿ ಪೂರ್ವ ಖಾಸಿ ಹಿಲ್ಸ್ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸೈಮ್ ತಿಳಿಸಿದ್ದಾರೆ.
ಒಂದು ಸಸ್ಪೆನ್ಸ್ ಚಿತ್ರದ ರೀತಿಯಲ್ಲಿ ಈ ಪ್ರಕರಣ ಸಾಗುತ್ತಿದ್ದು ರಾಜಾ ರಘುವಂಶಿ ಅವರ ಮೃತದೇಹ ಸಿಕ್ಕಿದ್ದು ಸೋನಮ್ ರಘುವಂಶಿ ಅವರ ಸುಳಿವು ಇದುವರೆಗೂ ಸಿಕ್ಕಿಲ್ಲ……!?


