
ಹಾಸನ: 6 ವರ್ಷದ ಮಗಳನ್ನೇ ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಂದ ತಾಯಿ.!
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಹಾಸನ: ನೀರಿನ ತೊಟ್ಟಿಯಲ್ಲಿ ಮುಳುಗಿಸಿ 6 ವರ್ಷದ ಮಗಳನ್ನೇ ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಹೆತ್ತ ತಾಯಿಯೆ ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜಿನ್ನೇನಹಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕಿಯ ಹೆಸರು ಸಾನ್ವಿ (6) ತಾಯಿಯಿಂದಲೇ ಕೊಲೆಯಾದ ದುರ್ದೈವಿ ಮಗು.ಆರೋಪಿ ಶ್ವೇತಾ (36) ಮಗಳನ್ನೇ ಕೊಂದ ಪಾಪಿ.!

ಕಳೆದ ಏಳು ವರ್ಷಗಳ ಹಿಂದೆ ಶಿವಮೊಗ್ಗದ ರಘು ಎಂಬವರ ಜೊತೆ ಶ್ವೇತಾ ವಿವಾಹವಾಗಿದ್ದಳು.ಮದುವೆಯಾದ ದಿನದಿಂದಲೂ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತಂತೆ. ಕಳೆದ ನಾಲ್ಕು ವರ್ಷಗಳಿಂದ ಮಗಳು ಸಾನ್ವಿಯನ್ನು ರಘು ಪೋಷಕರೆ ಸಾಕುತ್ತಿದ್ದರಂತೆ. ಗಂಡನಿಂದ ದೂರವಾಗಿ ಶ್ವೇತಾ ಕಳೆದ ಐದು ವರ್ಷಗಳಿಂದ ತವರು ಮನೆಯಲ್ಲಿದ್ದರು. ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದರು. ಕುಟುಂಬಸ್ಥರು ಹಲವು ಬಾರಿ ರಾಜಿ ಸಂಧಾನ ಮಾಡಿದ್ದರು.ಗಂಡ-ಹೆಂಡತಿ ನಡುವೆ ಮತ್ತೆ ಒಟ್ಟಿಗೆ ಬಾಳುವ ಒಮ್ಮತ ಮೂಡಿರಲಿಲ್ಲ.
ಹಲವು ವರ್ಷಗಳಿಂದ ನೆಲಮಂಗಲದಲ್ಲಿ ರಘು ಕೆಲಸ ಮಾಡುತ್ತಿದ್ದರು. ಶನಿವಾರ ಬೆಂಗಳೂರಿನ ನೆಲಮಂಗಲದಿಂದ ಮಗಳು ಸಾನ್ವಿಯನ್ನು ಕರೆದುಕೊಂಡು ಶ್ವೇತಾ ತವರು ಮನೆಗೆ ಬಂದಿದ್ದರು. ಮನೆ ಕೀ ಇಲ್ಲದ ಕಾರಣ ಪಕ್ಕದ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಬೆಳಗ್ಗೆ ಒಂಬತ್ತು ಗಂಟೆ ಸಮಯದಲ್ಲಿ ಜಮೀನು ಕಡೆಗೆ ಹೋಗುತ್ತೇನೆಂದು ಪುತ್ರಿಯನ್ನು ಕರೆದುಕೊಂಡು ಹೋಗಿದ್ದರು. ತಮ್ಮ ಜಮೀನಿನ ಪಕ್ಕದಲ್ಲಿದ್ದ ಕಟ್ಟೆಯಲ್ಲಿ ಮಗಳನ್ನು ಮುಳುಗಿಸಿದ್ದಾರೆ.

ಮಗು ಕಿರುಚಾಡುತ್ತಿದ್ದನ್ನು ಕೇಳಿ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಓಡಿಬಂದಿದ್ದಾರೆ. ಕೂಡಲೇ ವರಸೆ ಬದಲಿಸಿ ನಾನು ಮಗು ಇಬ್ಬರೂ ಸಾಯಲು ಪ್ರಯತ್ನಿಸಿದ್ದೆವು ಎಂದು ಗ್ರಾಮಸ್ಥರಿಗೆ ಶ್ವೇತಾ ಹೇಳಿಕೊಂಡಿದ್ದಾರೆ. ತಕ್ಷಣವೇ ಬಾಲಕಿಯನ್ನು ಎತ್ತಿಕೊಂಡು ಗ್ರಾಮಸ್ಥರು ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಹಿರಿಸಾವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


