ಮಂಗಳೂರು : ಕರಾವಳಿ ನೆಲದಿಂದ ಗಡಿಪಾರಿಗೆ ಸಿದ್ಧವಾಯ್ತಾ 36 ಜನರ ಲಿಸ್ಟ್ .!!

ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಗೆ ನೂತನವಾಗಿ ಅಧಿಕಾರ ಸ್ವೀಕರಿಸಿರುವ ಎಸ್ಪಿ ಹಾಗೂ ಮಂಗಳೂರು ಪೊಲೀಸ್ ಕಮಿಷನರ್ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗಿದ್ದಾರೆ. ಅಕ್ರಮ ಚಟುವಟಿಕೆ,ಕೋಮು ಪ್ರಚೋದನೆ ಮಾಡುವಂತವರ ವಿರುದ್ಧ ಸಿಡಿದೆದ್ದಿದ್ದಾರೆ. ಜಿಲ್ಲೆಯಲ್ಲಿರುವ ಅಪರಾಧ ಕೃತ್ಯ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸೇರಿಕೊಂಡಿರುವ ವ್ಯಕ್ತಿಗಳ ಲಿಸ್ಟ್ ತಯಾರಿಸಿ ಅವರ ಗಡಿಪಾರು ಮಾಡಲು ಮುಂದಿನ ಕ್ರಮಕೈಗೊಂಡಿದ್ದಾರೆ.

ಸದ್ಯ ಪೊಲೀಸರು ಬಿಡುಗಡೆ ಮಾಡಿರುವ ಲಿಸ್ಟ್ನಲ್ಲಿರುವ ಹೆಸರನ್ನು ನೋಡಿದ ಕರಾವಳಿ ಸರಹದ್ದು ಒಮ್ಮೆ ಕಂಪಿಸಿದೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹೊಸದಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಈಗಾಗಲೇ ಇಬ್ಬರು ಐಪಿಎಸ್ ಅಧಿಕಾರಿಗಳು, ಜಿಲ್ಲೆಯ ಕಾನೂನು ಸುವ್ಯವಸ್ಥೆ ಸರಿದಾರಿಗೆ ತರಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ 36 ಮಂದಿಯ ಪಟ್ಟಿಯನ್ನು ಸಿದ್ಧಮಾಡಿಕೊಂಡಿರುವ ಪೋಲಿಸರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಒಟ್ಟು 36 ಮಂದಿಯನ್ನು ದಕ್ಷಿಣಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲು ಪೊಲೀಸ್ ಪಟ್ಟಿ ರೆಡಿಯಾಗಿದೆ. ರೌಡಿ ಹಿನ್ನೆಲೆಯಿರುವ ವ್ಯಕ್ತಿಗಳು, ಸೌಜನ್ಯಾ ಪರ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ, ಪ್ರಬಲ ಹಿಂದುತ್ವ ಹೋರಾಟಗಾರ ಅರುಣ್ ಪುತ್ತಿಲ ಸೇರಿದಂತೆ ಬಂಟ್ವಾಳ, ಪುತ್ತೂರು ವ್ಯಾಪ್ತಿಯ 36 ಮಂದಿಯನ್ನು ಜಿಲ್ಲೆಯಿಂದ ಗಡೀಪಾರು ಮಾಡಲು ಕ್ರಮ ಕೈಗೊಂಡಿದ್ದಾರೆ.
ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ಸುಳ್ಯ ಬೆಳ್ಳಾರೆ ವಿಟ್ಲ, ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಬೆಳ್ತಂಗಡಿ, ಠಾಣೆ ವ್ಯಾಪ್ತಿಯ ಹಳೆ ಪ್ರಕರಣಗಳಲ್ಲಿರುವ ಹಿಂದು ಮತ್ತು ಮುಸ್ಲಿಂ ಸಂಘಟನೆ ಕಾರ್ಯಕರ್ತರು, ಬಿಜೆಪಿಯಲ್ಲಿ ಗುರುತಿಸಿಕೊಂಡವರ ಪಟ್ಟಿ ರೆಡಿ ಮಾಡಿದ್ದು ಗಡೀಪಾರು ಮಾಡಲು ಕಾನೂನು ಪ್ರಕ್ರಿಯೆ ಆರಂಭಿಸಿದೆ.


ಈ ಪಟ್ಟಿಯಲ್ಲಿ ಒಟ್ಟು 36 ಮಂದಿ ಇದ್ದರೆ, ಇವರಲ್ಲಿ 13 ಮಂದಿ ಮುಸ್ಲಿಮರಿದ್ದಾರೆ.
ವಿಶ್ವ ಹಿಂದೂ ಪರಿಷತ್ ಮುಖಂಡ ಭರತ್ ಕುಮ್ಡೇಲು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಹಲವರ ಹೆಸರು ಈ ಪಟ್ಟಿಯಲ್ಲಿದೆ. ಗಡಿಪಾರಿಗೆ ಪೋಲೀಸರು ಸಿದ್ಧಪಡಿಸಿದ ಪಟ್ಟಿಯನ್ನು ಪೋಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಸಹಾಯಕ ಆಯುಕ್ತರ ಮೂಲಕ ಈಗಾಗಲೇ ಪಟ್ಟಿಯಲ್ಲಿರುವವರಿಗೆ ನೋಟೀಸ್ ನೀಡಲಾಗಿದ್ದು ಖುದ್ದು ಹಾಜರಾಗಲು ತಿಳಿಸಿದ್ದಾರೆ.


