Headlines

ಸೇವಾ ಬಡ್ತಿ ನೀಡುವಂತೆ ಐಪಿಎಸ್‌ ಅಧಿಕಾರಿ ಡಿ.ರೂಪಾ ಮನವಿ ಪರಿಗಣಿಸಲು ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ.

ಅಶ್ವಸೂರ್ಯ/ಬೆಂಗಳೂರು: ಹಿರಿಯ ಪೊಲೀಸ್‌ ಅಧಿಕಾರಿ ಡಿ ರೂಪಾ ಮೌದ್ಗಿಲ್‌ (Roopa Moudgil) ಹಾಗೂ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ನಡುವೆ ಕಾನೂನು ಹೋರಾಟ ನಡೆಯುತ್ತಿರುವ ನಡುವೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರ (ಎಡಿಜಿಪಿ) ಹುದ್ದೆಗೆ ಬಡ್ತಿಗೆ ಸಂಬಂಧಿಸಿದಂತೆ ಡಿ ರೂಪಾ ಮೌದ್ಗಿಲ್‌ ಅವರು ಹೈಕೋರ್ಟ್‌ಗೆ ಸಲ್ಲಿಸಿರುವ ಮನವಿಯನ್ನು ಕಾನೂನಿನ ಅನ್ವಯ ಎರಡು ತಿಂಗಳಲ್ಲಿ ಡಿ ರೂಪ ಬಡ್ತಿಯನ್ನು ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.‌ ಇದೇ ವೇಳೆ ಬಡ್ತಿ ವಿಚಾರ ಹೊಸದಾಗಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಡಿ ರೂಪಾ ಮೌದ್ಗಿಲ್‌ ಅವರಿಗೆ ಉಚ್ಚ ನ್ಯಾಯಾಲಯ ಸೂಚಿಸಿದೆ.

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಹೂಡಿರುವ ಕ್ರಿಮಿನಲ್‌ ಮಾನಹಾನಿ ಪ್ರಕರಣವು ಖಾಸಗಿ ದಾವೆಯಾಗಿದ್ದು, ಅದನ್ನು ಗಣನೆಗೆ ತೆಗೆದುಕೊಳ್ಳದೇ ನ್ಯಾಯಯುತವಾಗಿ ತನಗೆ ದೊರೆಯಬೇಕಾದ ಬಡ್ತಿ ನೀಡಲು ರಾಜ್ಯ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ (ಡಿಒಪಿಟಿ) ನಿರ್ದೇಶನ ಕೋರಿ ರೂಪಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿದೆ.

ರೂಪಾ ಪರ ವಕೀಲರಾದ ಬಿಪಿನ್‌ ಹೆಗ್ಡೆ ಅವರು, ರೋಹಿಣಿ ದೂರು ದಾಖಲಿಸಿದ್ದು, ತನಿಖೆ ನಡೆದು ಅದನ್ನು ಕೈಬಿಡಲಾಗಿದೆ. ತನಿಖೆ ಕೈಬಿಟ್ಟ ಮೇಲೂ ಬಡ್ತಿ ನೀಡುತ್ತಿಲ್ಲ. ಅಡ್ವೊಕೇಟ್‌ ಜನರಲ್‌ ಮತ್ತು ಕಾನೂನು ಇಲಾಖೆಯು ತಮ್ಮ ಮತ್ತು ರೋಹಿಣಿ ನಡುವಿನ ದಾವೆಗಳು ಖಾಸಗಿ ಪ್ರಕರಣ ಎಂದು ಹೇಳಿದೆ. ಇದು ಸೇವಾ ಷರತ್ತು ಮತ್ತು ನಿಯಮಗಳಿಗೆ ಅನ್ವಯಿಸುವುದಿಲ್ಲ ಎಂದರು.
ರೋಹಿಣಿ ಸಿಂಧೂರಿ ಪರ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ.ಎನ್‌. ಫಣೀಂದ್ರ ಅವರು, ರೂಪಾ ವಿರುದ್ಧ ಹೂಡಿರುವ ಕ್ರಿಮಿನಲ್‌ ಮಾನಹಾನಿ ಪ್ರಕರಣದಲ್ಲಿ ರೋಹಿಣಿ ಅವರು ದೂರುದಾರೆಯಾಗಿದ್ದಾರೆ. ಹೀಗಾಗಿ, ಪ್ರಕರಣದಲ್ಲಿ ಮಧ್ಯಪ್ರವೇಶಿಕೆ ಕೋರಿ ಅರ್ಜಿ ಸಲ್ಲಿಸಿದ್ದೇವೆ. ಬಡ್ತಿ ವಿಚಾರವು ಡಿಒಪಿಟಿ ನಿಯಮದ ಪ್ರಕಾರ ಇದು ಮುಚ್ಚಿದ ಲಕೋಟೆಯ ಪ್ರಕ್ರಿಯೆಯಾಗಿದೆ ಎಂದರು.

ವಾದ-ಪ್ರತಿವಾದ ಆಲಿಸಿದ ಪೀಠವು, ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಸಲ್ಲಿಸಿರುವ ಮಧ್ಯಪ್ರವೇಶ ಕೋರಿಕೆ ಅರ್ಜಿಯು ಸೂಕ್ತವಾಗಿಲ್ಲ. ಅವರು ಅಗತ್ಯ ಪಕ್ಷಕಾರರಾಗಿಲ್ಲ. ಇನ್ನು, ರೂಪಾ ಅವರು ಹೊಸದಾಗಿ ಡಿಒಪಿಟಿಗೆ ಮನವಿ ಸಲ್ಲಿಸಬೇಕು. ಮನವಿಯ ಸಂಬಂಧ ಸಕ್ಷಮ ಪ್ರಾಧಿಕಾರವು ಎಂಟು ವಾರಗಳಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ನ್ಯಾಯಾಲಯ ಅರ್ಜಿ ಇತ್ಯರ್ಥಪಡಿಸಿದೆ.
ಈ ವೇಳೆ ಪೀಠವು, ರೋಹಿಣಿ ಅವರು ಇದರಲ್ಲಿ ಅಗತ್ಯ ಪಕ್ಷಕಾರರಲ್ಲ. ಇದು ಡಿಒಪಿಟಿ ಮತ್ತು ರೂಪಾ ಅವರಿಗೆ ಸಂಬಂಧಿಸಿದ ವಿಚಾರ. ಇದರಲ್ಲಿ ರೋಹಿಣಿ ಅವರು ಆತಂಕಗೊಳ್ಳುವುದು ಏನಿದೆ? ನೀವು ಕೇಡರ್‌ ಅಲ್ಲವೇ ಅಲ್ಲ. ಬೇರೆ ಕಾರಣಕ್ಕೆ ಅರ್ಜಿ ಸಲ್ಲಿಸಬಾರದು ಎಂದು ಮೌಖಿಕವಗಿ ಹೇಳಿ ಅರ್ಜಿ ಇತ್ಯರ್ಥಪಡಿಸಿತು.
ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ರೂಪಾ ಮೌದ್ಗಿಲ್​ ಹಾಗೂ ರೋಹಿಣಿ ಸಿಂಧೂರಿ ವಿರುದ್ಧ ದೂರು, ಪ್ರತಿದೂರು ದಾಖಲಾಗಿತ್ತು. ಈ ಕಾರಣಕ್ಕೆ ರಾಜ್ಯ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಬಡ್ತಿ ತಡೆಹಿಡಿದಿದೆ. ಹೀಗಾಗಿ ತಮಗೆ ಸಲ್ಲಬೇಕಾದ ಬಡ್ತಿ ತಡೆಹಿಡಿದಿರುವುದನ್ನು ಪ್ರಶ್ನಿಸಿ ರೂಪಾ ಮೌದ್ಗಿಲ್ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ ರೂಪಾ ಮೌದ್ಗಿಲ್ ಅರ್ಜಿಗೆ ಆಕ್ಷೇಪಿಸಿ ರೋಹಿಣಿ ಸಿಂಧೂರಿ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಇದೀಗ ಎರಡು ತಿಂಗಳಲ್ಲಿ ಡಿ.ರೂಪಾ ಅವರ ಮನವಿಯನ್ನು ಕಾನೂನಿನ ಅನ್ವಯ ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!