Headlines

ರಿಕ್ಕಿ ರೈ ಮೇಲೆ ಶೂಟೌಟ್‌ ಪ್ರಕರಣ : ಮುತ್ತಪ್ಪ ರೈ ಎರಡನೇ ಹೆಂಡತಿ ಅನುರಾಧ ಸೇರಿ ನಾಲ್ವರ ವಿರುದ್ಧ FIR ದಾಖಲು

ಅಶ್ವಸೂರ್ಯ/ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಮಾಜಿ ಅಂಡರ್ ವರ್ಲ್ಡ್‌ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನೆಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಪ್ಪ ರೈನ ಎರಡನೇ ಹೆಂಡತಿ ಅನುರಾಧಾ ಸೇರಿದಂತೆ ನಾಲ್ವರ ವಿರುದ್ಧ ಬಿಡದಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ರಾಕೇಶ್‌ಮಲ್ಲಿ ಮತ್ತು ಮುತ್ತಪ್ಪ ರೈ ಪತ್ನಿ ಅನುರಾಧ ಹಾಗೂ ನಿತೇಶ್ ಶೆಟ್ಟಿ, ವೈದ್ಯನಾಥನ್ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 173 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ರಿಕ್ಕಿ ರೈ ಮೇಲೆ ಎರಡು ಬಾರಿ ದಾಳಿ ನಡೆದಿರೋದು ದೃಢಪಟ್ಟಿದೆ.
ರಿಕ್ಕಿ ರೈ ಮೇಲೆ 2 ಬಾರಿ ಗುಂಡಿನ ದಾಳಿ ನಡೆದಿರುವುದು ಪೊಲೀಸ್‌ ತನಿಖೆ ವೇಳೆ ತಿಳಿದುಬಂದಿದೆ. ಬಿಡದಿ ಮನೆಯಿಂದ ಸದಾಶಿವ ನಗರದಲ್ಲಿರುವ ಮನೆಗೆ ಹೊರಟಿದ್ದ ರಾತ್ರಿ 11 ಗಂಟೆ ಹೊತ್ತಿಗೆ ಫೈರಿಂಗ್ ನಡೆದಿದೆ. ಅದೃಷ್ಟವಶಾತ್ ಈ ವೇಳೆ ಕಾರಿಗೆ ಅಥವಾ ರಿಕ್ಕಿ ರೈಗೆ ಯಾವುದೇ ಗುಂಡು ತಾಗಿಲ್ಲ. ಶಬ್ಧ ಕೇಳಿ ಚಾಲಕ ಬಸವರಾಜು ಕೆಳಗೆ ಇಳಿದು ನೋಡಿದ್ದಾರೆ, ಬಳಿಕ ಪರ್ಸ್‌ ಮರೆತು ಬಂದಿರುವುದಾಗಿ ರಿಕ್ಕಿಗೆ ತಿಳಿಸಿ ಮತ್ತೆ ಮನೆಗೆ ಹೋಗಿದ್ದಾರೆ. ಬಳಿಕ ಬೆಂಗಳೂರಿಗೆ ಹೊರಡಲು ಮುಂದಾದಾಗ ರಾತ್ರಿ 12:50ರ ಸುಮಾರಿಗೆ ಮತ್ತೆ ಗುಂಡಿನ ದಾಳಿ ನಡೆದಿದೆ. ಪೊಲೀಸರು ಪರಿಶೀಲನೆ ನಡೆಸಿದಾಗ 2 ಬುಲೆಟ್‌ಗಳು ಪತ್ತೆಯಾಗಿವೆ.

ಪ್ರಕರಣದ ಹಿನ್ನಲೆ.?
ರಿಕ್ಕಿ ರೈ ತಮ್ಮ ಫಾರ್ಚೂನರ್ ಕಾರಿನಲ್ಲಿ ಡ್ರೈವರ್ ಮತ್ತು ಗನ್‌ಮ್ಯಾನ್ ಜೊತೆಗೆ ಬಿಡದಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ 12:50ರ ಸುಮಾರಿಗೆ 2 ಸುತ್ತಿನ ಗುಂಡಿನ ದಾಳಿ ನಡೆದಿದೆ. ಮನೆಯ ಕಾಂಪೌಂಡ್ ಬಳಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ರಿಕ್ಕಿ ರೈ ಅವರಿಗೆ ಗಾಯಗಳಾಗಿವೆ. ತಕ್ಷಣವೇ ಅವರನ್ನು ಬಿಡದಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಡ್ರೈವಿಂಗ್ ಸೀಟ್ ಟಾರ್ಗೆಟ್ ಮಾಡಿ ಫೈರಿಂಗ್:
ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ನಡೆದ ಶೂಟೌಟ್‌ನಲ್ಲಿ ದುಷ್ಕರ್ಮಿಗಳು ಡ್ರೈವಿಂಗ್ ಸೀಟ್‌ನನ್ನೇ ಗುರಿಯಾಗಿಸಿ ಮೂರು ಸುತ್ತು ಗುಂಡುಗಳನ್ನು ಹಾರಿಸಿದ್ದಾರೆ. ರಿಕ್ಕಿ ರೈ ಸಾಮಾನ್ಯವಾಗಿ ತಾನೇ ಕಾರು ಚಾಲನೆ ಮಾಡುತ್ತಿದ್ದ ಕಾರಣ, ದಾಳಿಕೋರರು ಡ್ರೈವಿಂಗ್ ಸೀಟ್‌ನ ಮೇಲೆ ಗುರಿ ಇಟ್ಟಿದ್ದರು. ಆದರೆ, ಈ ಬಾರಿ ಕಾರನ್ನು ಚಾಲಕ ರಾಜು ಚಲಾಯಿಸುತ್ತಿದ್ದು, ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಪಕ್ಕದ ಸೀಟ್‌ನಲ್ಲಿದ್ದ ರಿಕ್ಕಿ ರೈ ಅವರ ಮೂಗು ಮತ್ತು ಕೈಗೆ ಗುಂಡು ತಾಕಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ನೆಡೆದ ಸ್ಥಳಕ್ಕೆ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಮತ್ತು ಡಿವೈಎಸ್‌ಪಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ದಾಳಿಯ ಹಿಂದಿನ ಕಾರಣ, ದುಷ್ಕರ್ಮಿಗಳ ಗುರುತು ಮತ್ತು ಈ ಘಟನೆಯ ಹಿನ್ನೆಲೆಯನ್ನು ಪತ್ತೆಹಚ್ಚಲು ತೀವ್ರ ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!