ಹನಿಟ್ರ್ಯಾಪ್ ಸೂತ್ರಧಾರಿ ಯಾರು.? ಸುಳಿವು ಸಿಕ್ಕಿತಾ : ಕಾಂಗ್ರೆಸ್‌ನಲ್ಲಿ ಬಿರುಗಾಳಿ.!?
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ನಿನ್ನೆ ಹನಿಟ್ರ್ಯಾಪ್ ಕುರಿತು ಜೋರಾಗಿಯೆ ಚರ್ಚೆ ನಡೆದ ಬೆನ್ನಲ್ಲಿಯೆ ಹನಿಟ್ರ್ಯಾಪ್‌ನ ರೂವಾರಿ ಯಾರು ಮತ್ತು ಯಾರಿಗೆಲ್ಲ ಹನಿಟ್ರ್ಯಾಪ್ ಬಲೆ ಹೆಣೆಯಲಾಗಿತ್ತು ಎಂಬ ಮಾಹಿತಿಗಳು ಹೊರ ಬಿಳತೊಡಗಿವೆ. ವಿಧಾನಸಭೆ ಅಧಿವೇಶನದಲ್ಲಿ ನಿನ್ನೆ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ತನ್ನನ್ನೂ ಸೇರಿಸಿ ರಾಜ್ಯ ಮತ್ತು ಕೇಂದ್ರದ 48 ರಾಜಕಾರಣಿಗಳನ್ನು ಹನಿಟ್ರ್ಯಾಪ್ ಜಾಲಕ್ಕೆ ಬೀಳಿಸಲಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದರು. ಶಾಸಕ ಸುನಿಲ್ ಕುಮಾರ್ ಕೂಡ ಹನಿಟ್ರ್ಯಾಪ್ ಕುರಿತಂತೆ ಸರಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದರ ಬೆನ್ನಿಗೆ ಹನಿಟ್ರ್ಯಾಪ್ ಜಾಲದ ಸೂತ್ರಧಾರನ ಸುಳಿವು ಹೊರಬರವ ಸಾಧ್ಯತೆ ಇದ್ದು.! ಕಾಂಗ್ರೆಸ್‌ನ ಓರ್ವ ಪ್ರಭಾವಿ ಸಚಿವನೇ ಈ ಹನಿಟ್ರ್ಯಾಪ್ ಜಾಲದ ಸೂತ್ರಧಾರ ಎನ್ನುವ ಮಾತು ಕೇಳಿಬಂದಿದೆ.? ಮತ್ತು ಹನಿಟ್ರ್ಯಾಪ್ ಜಾಲಕ್ಕೆ ಬಿದ್ದವರೆಲ್ಲ ಅವರ ವಿರೋಧಿ ಬಣದಲ್ಲಿರುವ ನಾಯಕರು ಎಂಬ ಮಾಹಿತಿ ಹರಿದಾಡುತ್ತಿದ್ದು ಸದ್ಯಕ್ಕೆ ಸಚಿವ ಕೆ.ಎನ್.ರಾಜಣ್ಣ ಸೇರಿ ರಾಜ್ಯದ ನಾಲ್ವರು ಸಚಿವರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಲು ಕೆಲವು ದಿನಗಳಿಂದ ಶತ ಪ್ರಯತ್ನ ನಡೆದಿದೆ ಎನ್ನುವ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು ಇದು ಕಾಂಗ್ರೆಸ್ ಪಕ್ಷದಲ್ಲಿ ಬಿರುಗಾಳಿ ಎಬ್ಬಿಸಿದೆ.
ಬೆಂಗಳೂರಿನ ಇಬ್ಬರು ಸಚಿವರು ಮತ್ತು ಮುಂಬಯಿ-ಕರ್ನಾಟಕ ಭಾಗದ ಪ್ರಭಾವಿ ಸಚಿವರೊಬ್ಬರನ್ನು ಖೆಡ್ಡಾಗೆ ಕೆಡವಲು ಯತ್ನ ನಡೆದಿತ್ತು. ಈ ಹನಿಟ್ರ್ಯಾಪ್ ಸುಳಿವು ಸಿಗುತ್ತಿದ್ದಂತೆಯೇ ಎಚ್ಚೆತ್ತ ಬೆಂಗಳೂರಿನ ಓರ್ವ ಸಚಿವರು ಹನಿಟ್ರ್ಯಾಪ್ ಮಾಡಲು ಬಂದ ತಂಡವನ್ನು ಟ್ರ್ಯಾಪ್ ಮಾಡಿ ತಮ್ಮ ಖೆಡ್ಡಕ್ಕೆ ಕೆಡವಿಕೊಂಡಿದ್ದಾರೆ. ಹನಿಟ್ರ್ಯಾಪ್ ಮಾಡಲು ಬಂದಿದ್ದವರನ್ನೇ ಟ್ರ್ಯಾಪ್ ಮಾಡಿ ಸರಿಯಾಗಿ ಒದ್ದು ಈ ಕೃತ್ಯದ ಹಿಂದಿರುವವರು ಯಾರೆಂದು ಬಾಯಿ ಬಿಡಿಸುವಲ್ಲಿ ಸಚಿವ ರಾಜಣ್ಣ ಯಶಸ್ವಿಯಾಗಿದ್ದಾರೆ ಎನ್ನುವುದು ಕಾಂಗ್ರೆಸ್ ವಲಯದಲ್ಲಿ ಭರ್ಜರಿ ಚರ್ಚೆಯಾಗುತ್ತಿದೆ.
ಖೆಡ್ಡಕ್ಕೆ ಬಿದ್ದವರಿಗೆ ಸರಿಯಾದ ಒದೆ ಬೀಳುತ್ತಿದ್ದಂತೆಯೇ ಕಂಗಾಲಾದ ಹನಿಟ್ರ್ಯಾಪ್ ತಂಡ ತಮ್ಮ ಹಿಂದೆ ಯಾರಿದ್ದಾರೆಂದು ಬಾಯಿ ಬಿಟ್ಟಿದ್ದಾರಂತೆ.! ಸಚಿವರು ಹನಿಟ್ರ್ಯಾಪ್ ಗ್ಯಾಂಗ್ ಬಾಯಿಂದಲೇ ಇದರ ಸೂತ್ರಧಾರ ಯಾರೆಂಬ ಬಗ್ಗೆ ಎಲ್ಲ ವಿವರ ಪಡೆದುಕೊಂಡಿದ್ದಾರೆ. ಹನಿಟ್ರ್ಯಾಪ್ ತಂಡ ಬಿಚ್ಚಿಟ್ಟ ಮಾಹಿತಿಯನ್ನು ಸಂಪೂರ್ಣವಾಗಿ ವೀಡಿಯೊ ರೆಕಾರ್ಡ್ ಮಾಡಿಕೊಂಡಿದ್ದಾರೆ. ತಮ್ಮಂತೆಯೇ ಇನ್ನೂ ಯಾರ್ಯಾರನ್ನು ಈ ಹನಿಟ್ರ್ಯಾಪ್ ಬಲೆಗೆ ಬೀಳಿಸುವ ಯತ್ನ ನಡೆದಿದೆ ಎಂದು ಗ್ಯಾಂಗ್ನಿಂದ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ. ಆಗ ರಾಜಣ್ಣ ಮಾತ್ರವಲ್ಲ ಇನ್ನುಳಿದ ಮೂವರು ಸಚಿವರಿಗೂ ಸಹ ಬಲೆ ಬೀಸಲಾಗಿತ್ತು ಎನ್ನುವ ಸ್ಫೋಟಕ ಮಾಹಿತಿಯನ್ನು ಹನಿಟ್ರ್ಯಾಪ್ ತಂಡ ಬಾಯ್ಬಿಟ್ಟಿದೆ. ಹೀಗೆ ಹನಿಟ್ರ್ಯಾಪ್ ತಂಡದಿಂದ ಇಂಚಿಚೂ ಮಾಹಿತಿ ಪಡೆದುಕೊಂಡ ಸಚಿವರು ವೀಡಿಯೊ ಸಮೇತ ಇತರ ಮೂವರು ಸಚಿವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಈ ಬಗ್ಗೆ ದೂರು ನೀಡಿ ಈ ಕುರಿತು ಪಕ್ಷದ ಹೈಕಮಾಂಡ್ ಗಮನಕ್ಕೆ ತರುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.!?
ಸಂಪುಟದ ನಾಲ್ವರು ಸದಸ್ಯರ ಒತ್ತಾಯವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಮಂಡಲ ಅಧಿವೇಶನ ಮುಗಿದ ನಂತರ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಹನಿಟ್ರ್ಯಾಪ್ ಕುರಿತು ವಿವರ ನೀಡಲು ಸಜ್ಜಾಗಿದ್ದರು ಅಷ್ಟರೊಳಗೆ ಸದನದಲ್ಲಿ ಸ್ವತಃ ರಾಜಣ್ಣ ತಮ್ಮನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸುವ ಪ್ರಯತ್ನ ನಡೆದಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಹನಿಟ್ರ್ಯಾಪ್ ಗ್ಯಾಂಗನ್ನು ಹಿಡಿದಿದ್ದ ಸಚಿವ ಇನ್ನೂ ಮೂವರು ಸಹೋದ್ಯೋಗಿ ಸಚಿವರನ್ನು ಕರೆದು ಸಭೆ ನಡೆಸಿದ್ದಾರೆ. ಈ ಎಲ್ಲ ಸಚಿವರು ಸಿದ್ದರಾಮಯ್ಯನವರ ಬಣದವರೇ ಎನ್ನುವುದು ಗಮನಾರ್ಹ. ಹನಿಟ್ರ್ಯಾಪ್ ಯತ್ನ ಹಾಗೂ ಈ ಹನಿಟ್ರ್ಯಾಪ್ ಹಿಂದಿರುವವರ ಕೈವಾಡ ಬಗ್ಗೆ ಚರ್ಚಿಸಿದ್ದಾರೆ. ಇದನ್ನೆಲ್ಲ ಕೇಳಿ ಸಚಿವರು ಹನಿಟ್ರ್ಯಾಪ್ ಸೂತ್ರಧಾರನ ವಿರುದ್ಧ ಕೆಂಡವಾಗಿದ್ದಾರೆ. ಬಳಿಕ ಒಟ್ಟಿಗೆ ಹೋಗಿ ಸಿಎಂಗೆ ಈ ಬಗ್ಗೆ ದೂರು ನೀಡಿದ್ದಾರೆ. ತಮ್ಮನ್ನು ಇಂತಹ ನೀಚ ಕೃತ್ಯಕ್ಕೆ ಕೆಡವಲು ಯತ್ನಿಸಿದವರಿಗೆ ತಕ್ಕ ಪಾಠ ಕಲಿಸಲೇಬೇಕೆಂದು ದಿಲ್ಲಿಗೆ ತೆರಳಿ ಹೈಕಮಾಂಡ್ ನಾಯಕರ ಗಮನಕ್ಕೆ ಈ ಹನಿಟ್ರ್ಯಾಪ್ ವಿಚಾರವನ್ನು ತಿಳಿಸಿದ್ದಾರೆ. ಕಳೆದೊಂದು ತಿಂಗಳಿನಿಂದ ಯಾವ್ಯಾವ ಸಚಿವರು ದೆಹಲಿಗೆ ಹೋಗಿಬಂದಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.
ಶಾಸಕ ಸುನಿಲ್ ಕುಮಾರ್ ಸದನದಲ್ಲಿ ಸಚಿವರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸುವ ಯತ್ನ ನಡೆದಿದೆ ಎನ್ನುವುದನ್ನು ಪ್ರಸ್ತಾಪಿಸಿದ್ದರು. ಬಳಿಕ ಅದು ಜಗಜ್ಜಾಹೀರಾಯಿತು. ಸಚಿವರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಚರ್ಚೆ ಕಾಂಗ್ರೆಸ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಇಷ್ಟು ದಿನ ರೆಕ್ಕೆಪುಕ್ಕ ಕಟ್ಟಿಕೊಂಡು ಹರಿದಾಡುತ್ತಿದ್ದ ಈ ಸುದ್ದಿಗೆ ಮೊದಲು ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ ಹನಿಟ್ರ್ಯಾಪ್ ಯತ್ನ ನಡೆದಿರುವುದನ್ನು ಖಚಿತಪಡಿಸಿದರು. ಇದಾದ ಮೇಲೆ ಸದನದಲ್ಲಿ ಹನಿಟ್ರ್ಯಾಪ್ ಬಿರುಗಾಳಿ ಎದ್ದಿದೆ.!