ಸ್ವಾಮೀಜಿ ಕಾಲಿಗೆ ಬಿದ್ದು ಕಾಣಿಕೆ ಪಡೆದ ಪೊಲೀಸರ ವಿರುದ್ಧ ಶಿಸ್ತು ಕ್ರಮ – ಬೇರೆ ಬೇರೆ ಠಾಣೆಗೆ ವರ್ಗಾವಣೆ.!
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಬಾಗಲಕೋಟೆ: ಹುನಗುಂದ ತಾಲೂಕಿನ ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿ ಅವರ ಕಾಲಿಗೆ ಬಿದ್ದ ಪೊಲೀಸರ ವಿರುದ್ಧ ಗೃಹ ಇಲಾಖೆ ಶಿಸ್ತು ಕ್ರಮ ಕೈಗೊಂಡಿದೆ.
ಗುರುವಾರ ಶಿವಕುಮಾರ ಸ್ವಾಮೀಜಿ ಬಾದಾಮಿಗೆ ಆಗಮಿಸಿದ ವೇಳೆ ಬಾದಾಮಿ ಠಾಣೆಯ ಪೊಲೀಸ್ ಸಿಬ್ಬಂದಿ ಸ್ವಾಮೀಜಿ ಕಾಲಿಗೆ ಅಡ್ಡ ಬಿದ್ದಿದ್ದರು. ಈ ವೇಳೆ ಸ್ವಾಮೀಜಿ ಭಕ್ತರಿಗೆ ಆಶೀರ್ವಾದ ಮಾಡುವಂತೆ ಪೊಲೀಸ್ ಸಿಬ್ಬಂದಿಗೆ ದುಡ್ಡು ನೀಡಿ ಆಶೀರ್ವಾದ ಮಾಡಿದ್ದರು.
ಈ ಸಂದರ್ಭದಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ಯಾವುದೇ ಸ್ವಾಮೀಜಿಗೆ ಕಾಲಿಗೆ ಬೀಳಬಾರದು ಬದಲಾಗಿ ಸೆಲ್ಯೂಟ್ ಹೊಡಿಯಬೇಕು ಎಂದು ಸ್ವಾಮೀಜಿ ಹೇಳಿದ್ದರು. ಸ್ವಾಮೀಜಿ ಹಾಗೂ ಪೊಲೀಸರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಬಾಗಲಕೋಟೆ ಎಸ್.ಪಿ ಅಮರನಾಥ್ ರೆಡ್ಡಿ ಸಮವಸ್ತ್ರದಲ್ಲಿ ಸ್ವಾಮೀಜಿ ಕಾಲಿಗೆ ನಮಸ್ಕಾರ ಮಾಡಿ, ಆಶೀರ್ವಾದ ರೂಪದಲ್ಲಿ ನೀಡಿದ ಹಣ ಪಡೆದ ಕಾನ್ಸ್ಟೇಬಲ್ ಗಳ ಮೇಲೆ ಶಿಸ್ತು ಕ್ರಮಕ್ಕೆ ಆದೇಶಿಸಿದ್ದಾರೆ. ಆರು ಜನರ ಮೇಲೆ ಶಿಸ್ತು ಕ್ರಮ ಹಾಗೂ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಬಾದಾಮಿಯ ಎಎಸ್ಐ ಜಿ.ಬಿ ದಳವಾಯಿಯನ್ನು ಹುನಗುಂದ ಠಾಣೆಗೆ, ಡಿ.ಜೆ ಶಿವಪುರ ಅವರನ್ನು ಬಾಗಲಕೋಟೆ ಗ್ರಾಮೀಣ ಠಾಣೆಗೆ, ಪೇದೆಗಳಾದ ನಾಗರಾಜ ಅಂಕೋಲೆಯನ್ನು ಬೀಳಗಿ ಠಾಣೆಗೆ, ಜಿ.ಬಿ ಅಂಗಡಿಯನ್ನು ಇಳಕಲ್ ನಗರ ಠಾಣೆಗೆ, ರಮೇಶ್ ಈಳಗೇರ ಅವರನ್ನು ಬಾಗಲಕೋಟೆ ಗ್ರಾಮೀಣ ಠಾಣೆಗೆ ಹಾಗೂ ರಮೇಶ್ ಹುಲ್ಲೂರ್ ಅವರನ್ನು ಬಾಗಲಕೋಡೆ ಜಿಲ್ಲಾ ಪೊಲೀಸ್ ಕಚೇರಿಗೆ ವರ್ಗಾವಣೆ ಮಾಡಿದೆ.
ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದ್ದು ವರ್ಗಾವಣೆಯಾದ ಸಿಬ್ಬಂದಿ ಸದ್ಯ ವಾಸವಿರುವ ವಸತಿಗೃಹವನ್ನು ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ.