ಚಿತ್ರದುರ್ಗ: ಪಿಎಸ್‌ಐ-ಬಿಜೆಪಿ ಮಧುಗಿರಿ ಜಿಲ್ಲಾಧ್ಯಕ್ಷ ಪರಸ್ಪರ ಹೊಡೆದಾಟ!
ASHWASURYA/SHIVAMOGGA
news.ashwasurya.in
ವೈರಲ್ ಅಯ್ತು ಹೊಡೆದಾಡಿದ ವಿಡಿಯೋ.!? ಜವಬ್ದಾರಿಯುತ ಸ್ಥಾನದಲ್ಲಿದ್ದ ಇಬ್ಬರೂ ಆಸ್ಪತ್ರೆಗೆ ದಾಖಲು,! ಪಿಎಸ್‌ಐ ಮೇಲೆ ಇಲಾಖಾ ವಿಚಾರಣೆಗೆ ಸಂಸದ ಕಾರಜೋಳ ಆಗ್ರಹ.
ಅಶ್ವಸೂರ್ಯ/ಶಿವಮೊಗ್ಗ: ಪಿಎಸ್‌ಐ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಪರಸ್ಪರ ಹೊಡೆದಾಡಿಕೊಂಡ ವಿಡಿಯೋ ವೈರಲ್ ಆಗಿದೆ .
ಚಿತ್ರದುರ್ಗದಲ್ಲಿ ರಾತ್ರಿ ಗಸ್ತಿನಲ್ಲಿದ್ದ ನಗರ ಪೊಲೀಸ್ ಠಾಣೆ ಪಿಎಸ್‌ಐ ಗಾದಿಲಿಂಗ ಗೌಡರ್ ಮೇಲೆ ಬಿಜೆಪಿ ಮಧುಗಿರಿ (ಸಂಘಟನಾತ್ಮಕ) ಜಿಲ್ಲೆ ಅಧ್ಯಕ್ಷ ಹನುಮಂತೇಗೌಡ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ. ಇದೇ ವೇಳೆ ಪಿಎಸ್‌ಐ ಕೂಡ ಹಲ್ಲೆ ನಡೆಸಿದ್ದು ಕ್ರಮಕೈಗೊಳ್ಳುವಂತೆ ಸಂಸದ ಗೋವಿಂದ ಕಾರಜೋಳ ಹಾಗೂ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.
ಶುಕ್ರವಾರ ತಡರಾತ್ರಿ ನಗರದ ಹೋಟೆಲ್ ಪಕ್ಕದ ರಸ್ತೆಯಲ್ಲಿ ಬಿಜೆಪಿ ಮುಖಂಡ ಹನುಮಂತೇಗೌಡ ಹಾಗೂ ಸ್ನೇಹಿತರು ನಿಂತಿದ್ದರು. ಪಿಎಸ್‌ಐ ಗಾದಿಲಿಂಗ ಗೌಡರ್ ಮನೆಗೆ ತೆರಳಲು ಸೂಚಿಸಿದ್ದಾರೆ. ಮಾತಿಗೆ ಮಾತು ಬೆಳೆದು ಪಿಎಸ್‌ಐ ಮೇಲೆ ಹನುಮಂತೇಗೌಡ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ತಡರಾತ್ರಿಯೇ ಹನುಮಂತೇಗೌಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಬೆಳಗ್ಗೆ ಗಲಾಟೆಯ ವಿಡಿಯೋ ವೈರಲ್ ಆಗಿದೆ. ಅ ವಿಡಿಯೋ ಗಮನಿಸಿದರೆ ಮೊದಲು ಪಿಎಸ್‌ಐ ಗಾದಿಲಿಂಗ ಗೌಡರ್ ಮೇಲೆ ಹಲ್ಲೆ ನಡೆಸಿದ್ದು, ನಂತರ ಹನುಮಂತೇಗೌಡ ಕೂಡ ಪಿಎಸ್‌ಐಗೆ ಹೊಡೆದಿರುವುದು ಕಂಡು ಬಂದಿದೆ.
ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ಎಸ್ಪಿ ಕಚೇರಿಗೆ ತೆರಳಿದ ಬಿಜೆಪಿ ಮುಖಂಡರು, ಪಿಎಸ್‌ಐ ಮೇಲೆ ಎಫ್‌ಐಆರ್ ದಾಖಲಿಸಬೇಕು. ಇಲಾಖಾ ವಿಚಾರಣೆ ನಡೆಸಿ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಎಫ್‌ಐಆರ್ ದಾಖಲಿಸಿ:
ಈ ವೇಳೆ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ಬ್ರಿಟಿಷರ ಆಡಳಿತದಲ್ಲೂ ಇಷ್ಟು ಕ್ರೂರವಾಗಿ ನಡೆದುಕೊಂಡಿಲ್ಲ. ಹಲ್ಲೆ ನಡೆಸಿರುವ ಪಿಎಸ್‌ಐ ಮೇಲೆ ದೂರು ದಾಖಲಿಸಿ ಇಲಾಖಾ ವಿಚಾರಣೆ ನಡೆಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಮಧುಗಿರಿ ಜಿಲ್ಲೆಯ ಜವಾಬ್ದಾರಿ ಹೊಂದಿರುವ ಹನುಮಂತೇಗೌಡರು ಚಿತ್ರದುರ್ಗದಲ್ಲಿ ವಾಸವಾಗಿದ್ದಾರೆ. ತಡರಾತ್ರಿಯಾದ್ದರಿಂದ ಊಟಕ್ಕೆ ಹೋಟೆಲ್‌ಗೆ ಹೋಗಿ ಹೊರಗೆ ಬಂದು ನಿಂತಿದ್ದರು. ಆಗ ಪಿಎಸ್‌ಐ ಆವಾಚ್ಯವಾಗಿ ನಿಂದಿಸಿದ್ದಾರೆ. ಈ ಬಗ್ಗೆ ಸೂಕ್ತ ತೀರ್ಮಾನ ಆಗಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಹಲ್ಲೆ ಮಾಡಿದ ಪಿಎಸ್‌ಐ ಐಸಿಯುಗೆ ದಾಖಲಾಗಿದ್ದಾರೆ. ಹಲ್ಲೆಗೊಳಗಾದ ಹನುಮಂತೇಗೌಡರನ್ನು ಜನರಲ್ ವಾರ್ಡ್‌ಗೆ ಸೇರಿಸಿದ್ದಾರೆ. ಪೊಲೀಸರು ಬಿಜೆಪಿ ಜಿಲ್ಲಾಧ್ಯಕ್ಷರ ಜೊತೆಗೆ ಹೀಗೆ ನಡೆದುಕೊಂಡರೆ ಸಾಮಾನ್ಯ ಜನರ ಸ್ಥಿತಿಯೇನು ಎಂದು ಪ್ರಶ್ನಿಸಿದರು.
ಬೂಟುಗಾಲಿನಿಂದ ಹಲ್ಲೆ ನಡೆಸಿದ್ದು, ಹನುಮಂತೇಗೌಡರ ಎದೆ, ಹೊಟ್ಟೆಯ ಭಾಗಕ್ಕೆ ನೋವಾಗಿದೆ. ಮುಖಕ್ಕೆ ಗಾಯವಾಗಿದೆ. ಪೊಲೀಸ್ ಜೀಪ್ ಕೀಲಿ ಕಿತ್ತುಕೊಂಡು ಹೋದವರನ್ನು ಬಿಟ್ಟು ಕಳಿಸುವ ಪೊಲೀಸರು, ಕಾನೂನು ಗೌರವಿಸುವ ನಮ್ಮ ಕಾರ್ಯಕರ್ತರ ಜೊತೆಗೆ ಹೀಗೆ ನಡೆದುಕೊಳ್ಳುವುದು ಸರಿಯಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ ಗೌಡ, ಮಾಜಿ ಶಾಸಕ ತಿಮ್ಮರಾಯಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಜಯ್ಯಣ್ಣ, ಮುಖಂಡರಾದ ಕೆ.ಟಿ. ಕುಮಾರಸ್ವಾಮಿ, ಅನಿಲ್‌ಕುಮಾರ್, ಗಿರೀಶ್, ಶಂಕರಮೂರ್ತಿ, ಜಿಲ್ಲಾಧ್ಯಕ್ಷ ಎ. ಮುರುಳಿ, ಮೋಹನ್ ಮತ್ತಿತರರು ಇದ್ದರು. ಪಿಎಸ್‌ಐ ವಿರುದ್ಧ ಬಿಜೆಪಿ ಮುಖಂಡ ಹನುಮಂತೇಗೌಡ ನೀಡಿರುವ ಮನವಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ವೀಕರಿಸಿದ್ದು, ಪರಿಶೀಲಿಸಿ ಇಲಾಖಾ ವಿಚಾರಣೆ ನಡೆಸಲಾಗುವುದು ಎಂದು ಸಂಸದರ ನೇತೃತ್ವದ ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಪ್ರತ್ಯಕ್ಷದರ್ಶಿಯಾದ ಹನುಮಂತೇಗೌಡರ ಕಾರಿನ ಚಾಲಕ ರಂಗಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಊಟ ಮುಗಿಸಿ ಹೊರಡುವ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸರು ನಮ್ಮ ಸಾಹೇಬರನ್ನು ಏಕವಚನ ಹಾಗೂ ಅವಾಚ್ಯ ಶಬ್ದದಿಂದ ನಿಂದಿಸಿದರು. ಆಗ ಪಿಎಸ್‌ಐಗೆ ನಮ್ಮ ಸಾಹೇಬರು ಕೂಡ ನಿಂದಿಸಿದ್ದು, ಪರಸ್ಪರ ಹಲ್ಲೆ ನಡೆಸಿದ ಪರಿಣಾಮ ಘಟನೆ ನಡೆಯಿತೆಂದು ತಿಳಿಸಿದ್ದಾರೆ. ಚಿತ್ರದುರ್ಗ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ
ಇಲ್ಲಿ ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಕೂಡ ಕಟ್ಟದಾಗಿ ಮಾತನಾಡಿರುವ ಸಾಧ್ಯತೆ ಇರಬಹುದು.? ಈ ಕಾರಣಕ್ಕೆ ಕರ್ತವ್ಯ ನಿರತ ಪಿಎಸ್‌ಐ ಆವರ ವಿರುದ್ಧ ಸಿಡಿದೆದ್ದಿರ ಬಹುದು ಕೆಲವು ರಾಜಕಾರಣಿಗಳಿಗೆ ರಾಜಕಾರಣದ ಮದ ನೆತ್ತಿಗಿರುತ್ತದೆ.. ಇನ್ನೂ ಕೆಲವು ಅಧಿಕಾರಿಗಳಿಗೂ ನಾನೊಬ್ಬ ಅಧಿಕಾರಿ ಎನ್ನುವ ಅಹಂ ತಲೆಗಿರುತ್ತದೆ ಈ ಕಾರಣದಿಂದಲೇ ಇಂತಹ ಘಟನೆಗಳು ನೆಡೆಯುತ್ತವೆ ಅನ್ನೊದು ಸತ್ಯ..
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿರಂತರ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಪ್ರಕರಣಗಳು ನಿರಂತರ ಘಟಿಸುತ್ತಿವೆ. ಜನಸಾಮಾನ್ಯರಿಗೆ ಸುರಕ್ಷತೆ ಒದಗಿಸಲಾಗದ ಸ್ಥಿತಿ ನಿರ್ಮಾಣವಾಗಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ, ಇದರ ನಡುವೆ ಕೆಲವು ಕೆಳಹಂತದ ಪೊಲೀಸ್ ಅಧಿಕಾರಿಗಳು ಸಾಮಾನ್ಯರು ಹಾಗೂ ಜವಾಬ್ದಾರಿಯುತ ನಾಗರಿಕರ ಮೇಲೆ ಪೊಲೀಸ್ ದಬ್ಬಾಳಿಕೆ ನಡೆಸಿ ದೈಹಿಕ ಹಲ್ಲೆಗೂ ಮುಂದಾಗುತ್ತಿದ್ದಾರೆ. ಚಿತ್ರದುರ್ಗದಲ್ಲಿ ನಮ್ಮ ಪಕ್ಷದ ಮಧುಗಿರಿ (ಸಂಘಟನಾತ್ಮಕ ಜಿಲ್ಲೆ) ಜಿಲ್ಲಾಧ್ಯಕ್ಷರಾದ ಹನುಮಂತೇಗೌಡ ಅವರ ಮೇಲೆ ಪಿಎಸ್ಐ ಗಾದಿಲಿಂಗಪ್ಪ ಹಲ್ಲೆ ನಡೆಸಿ ಗೂಂಡಾಗಿರಿ ಪ್ರದರ್ಶಿಸಿದ್ದು ಇದನ್ನು
ಅತ್ಯುಗ್ರವಾಗಿ ಖಂಡಿಸುತ್ತದೆ. ನಾಗರಿಕ ಸಮಾಜದಲ್ಲಿ ಶಾಂತಿ ಸಂರಕ್ಷಿಸಲಾಗದ ಅಧಿಕಾರಿಗಳು ಮಧ್ಯರಾತ್ರಿಯಲ್ಲಿ ತಮ್ಮ ಪೊಲೀಸ್ ರೌದ್ರಾವತಾರ ಪ್ರದರ್ಶಿಸಲು ಹೊರಟಿದ್ದಾರೆ. ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸುವ ಮುನ್ನ ಅವರ ಸಾಮಾಜಿಕ ಸ್ಥಾನಮಾನವನ್ನೂ ಲೆಕ್ಕಿಸದೆ ಗೂಂಡಾಗಿರಿ ಪ್ರದರ್ಶಿಸುವುದು ಪೋಲಿಸ್ ಇಲಾಖೆಯ ದಕ್ಷತೆಯ ಘನತೆಯನ್ನು ಕಳೆದಂತೆ. ಕಾಂಗ್ರೆಸ್ ಪ್ರಭಾವಿಗಳಿಂದ ಆಯಾ ಕಟ್ಟಿನ ಸ್ಥಾನದಲ್ಲಿ ಕುಳಿತುಕೊಂಡಿರುವ ಕೆಲವು ಪೊಲೀಸ್ ಅಧಿಕಾರಿಗಳು ತಮಗೆ ಯಾರೂ ಏನೂ ಮಾಡಲಾಗದು ಎಂಬ ಮನಸ್ಥಿತಿಯನ್ನು ಮೈಗೂಡಿಸಿಕೊಂಡಿದ್ದು ಎಲ್ಲೆಂದರಲ್ಲಿ ತಮ್ಮ ದರ್ಪ ಪ್ರದರ್ಶಿಸುತ್ತಿದ್ದಾರೆ. ಚಿತ್ರದುರ್ಗದ ಘಟನೆಯ ಹಿಂದೆ ರಾಜಕಾರಣದ ಪ್ರಚೋದನೆ ಇರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು, ಅಧಿಕಾರಸ್ತ ರಾಜಕಾರಣಿಗಳ ಕೈಗೊಂಬೆಯಂತೆ ವರ್ತಿಸುತ್ತಿರುವ ಪೊಲೀಸರು ಇಲಾಖೆಯ ಗೌರವ ಕಳೆಯುತ್ತಿದ್ದಾರೆ. ಚಿತ್ರದುರ್ಗದ ಪಿಎಸ್ಐ ಗಾದಿಲಿಂಗಪ್ಪ ಅವರನ್ನು ಈ ಕೂಡಲೇ ಪೊಲೀಸ್ ಮಹಾನಿರ್ದೇಶಕರು ಅಮಾನತ್ತಿನಲ್ಲಿಡದಿದ್ದರೆ ಬಿಜೆಪಿಯು ನಾಗರಿಕರೊಡಗೂಡಿ ಹೋರಾಟ ನಡೆಸುವುದು ಅನಿವಾರ್ಯವಾದೀತು ಎಂದು ಎಚ್ಚರಿಸುತ್ತೇನೆ. ತಮ್ಮ X ಖಾತೆಯಲ್ಲಿ ಬಿ ವೈ ವಿಜಯೇಂದ್ರ ಅವರು ಹೀಗ ಬರೆದು ಪಿಎಸ್‌ಐ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
- ಬಿ ವೈ ವಿಜಯೇಂದ್ರ ಯಡಿಯೂರಪ್ಪ , ಬಿಜೆಪಿ ರಾಜ್ಯಾಧ್ಯಕ್ಷರು ,