ICC Champions Trophy 2025: ಪಾಕಿಸ್ತಾನ ಟೂರ್ನಿಯಿಂದ ಹೊರಕ್ಕೆ. 3 ವರ್ಷಗಳ ಶ್ರಮ ವ್ಯರ್ಥ.! PCBಗೆ ಮತ್ತೆ ಸಂಕಷ್ಟ..!
news.ashwasurya.com/Shivamogga
ಅಶ್ವಸೂರ್ಯ: ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಪಾಕಿಸ್ತಾನ ಭಾನುವಾರ ನಡೆದ ಸಾಂಪ್ರದಾಯಿತ ಎದುರಾಳಿ ಭಾರತ ತಂಡದ ವಿರುದ್ಧವೂ ಹೀನಾಯ ಸೋಲು ಕಾಣುವ ಮೂಲಕ ಟೂರ್ನಿಯಿಂದಲೇ ಹೊರಬಿದ್ದಿದೆ.
ಚಾಂಪಿಯನ್ಸ್ ಟ್ರೋಫಿ ಆರಂಭವಾದ ಐದೇ ದಿನಗಳಲ್ಲಿ ಪಾಕಿಸ್ತಾನ ತಂಡ ಟೂರ್ನಿಯಿಂದಲೇ ಹೊರಬಿದ್ದಿದ್ದು, ತನ್ನ ದೇಶದಲ್ಲೇ ಟೂರ್ನಿ ಆಯೋಜನೆಗಾಗಿ ಹರಸಾಹಸ ಪಟ್ಟಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದೆ.
ಹೌದು.. ಸತತ 29 ವರ್ಷಗಳ ಬಳಿಕ ಮೊದಲ ಬಾರಿಗೆ ಐಸಿಸಿ ಟೂರ್ನಿ ಆಯೋಜಿಸಲು ಹರಸಾಹಸ ಪಟ್ಟಿದ್ದ ಪಾಕಿಸ್ತಾನ ಕೊನೆಗೂ ತನ್ನ ದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಟೂರ್ನಿ ಆಯೋಜನೆಯಾದ ಕೇವಲ ಐದೇ ದಿನದಲ್ಲಿ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರಬಿದ್ದಿದ್ದು ಮತ್ತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಂಕಷ್ಟಕ್ಕೆ ಸಿಲುಕಿದೆ.ಮೊದಲೇ ಸಂಕಷ್ಟದಲ್ಲಿದ್ದ ಪಾಕ್ ಗೆ ಮತ್ತೆ ಸಂಕಷ್ಟ ಎದುರಾಗಿದ್ದು PCB ಮತ್ತೆ ಮೇಲೆಳದಂತಾಗಿದೆ.
ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಪಾಕಿಸ್ತಾನ ಭಾನುವಾರ ನಡೆದ ಸಾಂಪ್ರದಾಯಿಕ ಎದುರಾಳಿ ಭಾರತ ತಂಡದ ವಿರುದ್ಧವೂ ಹೀನಾಯ ಸೋಲು ಕಾಣುವ ಮೂಲಕ ಟೂರ್ನಿಯಿಂದಲೇ ಹೊರಬಿದ್ದಿದೆ. ಇದೀಗ ಪಾಕಿಸ್ತಾನದಲ್ಲಿ ಪಾಕಿಸ್ತಾನ ತಂಡವಿಲ್ಲದೇ ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿದ್ದು, ಕ್ರೀಡಾಂಗಣಗಳಲ್ಲಿ ಪ್ರೇಕ್ಷಕರಿಲ್ಲದೆ ಬಣಗುಡುತ್ತಿದೆ.
ಕನಿಷ್ಠ ಪಕ್ಷ ಭಾರತ ತಂಡವಿದಿದ್ದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕ್ರೀಡಾಂಗಣಕ್ಕೆ ಧಾವಿಸುತ್ತಿದ್ದರು. ಆದರೆ ಭದ್ರತೆ ಮತ್ತು ಉಭಯ ದೇಶಗಳ ರಾಜಕೀಯ ವೈರತ್ವದ ಕಾರಣದಿಂದಾಗಿ ಇದೀಗ ಭಾರತ ಕೂಡ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡುತ್ತಿಲ್ಲ. ಇದು ಪಾಕಿಸ್ತಾನಕ್ಕೆ ಮರ್ಮಾಘಾತವನ್ನೇ ನೀಡಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತಷ್ಟು ಆರ್ಥಿಕ ಮುಗ್ಗಟ್ಟಿಗೆ ಸಿಲುಕುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸುದೀರ್ಘ ಸಮಯಗಳ ಕಾಲ ತವರು ಟೂರ್ನಿಗಳಿಲ್ಲದೆ ಹೈರಾಣಾಗಿತ್ತು. ಶ್ರೀಲಂಕಾ ತಂಡದ ಮೇಲಿನ ಉಗ್ರರ ದಾಳಿ ಬಳಿಕ ಪಾಕಿಸ್ತಾನದಲ್ಲಿ ಕ್ರಿಕೆಟ್ ಸಂಪೂರ್ಣ ನೆಲ ಕಚ್ಟಿತ್ತು. ಕೆಲ ವರ್ಷಗಳಿಂದಷ್ಟೇ ಅಂತಾರಾಷ್ಟ್ರೀಯ ದ್ವಿಪಕ್ಷೀಯ ಟೂರ್ನಿಗಳ ಆಯೋಜನೆಯಾಗುತ್ತಿದೆ. ಇಂತಹ ಸಂದರ್ಭದಲ್ಲೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಪಟ್ಟು ಹಿಡಿದು, ಕೊನೆಗೂ ತನ್ನಲ್ಲಿಯೇ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಿತ್ತು. ಆದರೆ ಭಾರತ ತಂಡ ಪಾಕಿಸ್ತಾನಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ಐಸಿಸಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜನೆ ಮಾಡಿ ಭಾರತ ತಂಡದ ಪಂದ್ಯಗಳನ್ನು ದುಬೈನಲ್ಲಿ ಉಳಿದ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಯೋಜಿಸಿತ್ತು.
ಎಂಟು ತಂಡಗಳ ಚಾಂಪಿಯನ್ಸ್ ಟ್ರೋಫಿ 1996 ರ ವಿಶ್ವಕಪ್ ನಂತರ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಮೊದಲ ಐಸಿಸಿ ಕಾರ್ಯಕ್ರಮವಾಗಿದೆ ಮತ್ತು ತವರು ತಂಡವು ಉತ್ತಮ ಪ್ರದರ್ಶನ ನೀಡುತ್ತದೆ ಎಂಬ ಬಲವಾದ ನಿರೀಕ್ಷೆಗಳಿದ್ದವು. ಆದರೆ ಇದೀಗ ಅತಿಥೇಯ ತಂಡ ಪಾಕಿಸ್ತಾನವೇ ಟೂರ್ನಿಯಿಂದ ಹೊರಬಿದ್ದಿದ್ದು, ಭಾರತ ತಂಡದ ಅನುಪಸ್ಥಿತಿಯಲ್ಲಿ ಪಾಕಿಸ್ತಾನ ಕ್ರೀಡಾಂಗಣಗಳು ಪ್ರೇಕ್ಷಕರ ಕೊರತೆ ಎದುರಿಸುವ ಆತಂಕಕ್ಕೀಡಾಗಿದೆ. ಈಗಾಗಲೇ ಟೂರ್ನಿಗಾಗಿ ಸಾವಿರಾರು ಕೋಟಿ ರೂ ಸಾಲ ಮಾಡಿ ತನ್ನ ಕ್ರೀಡಾಂಗಣಗಳನ್ನು ಮೇಲ್ದರ್ಜೆಗೇರಿಸಿತ್ತು. ಇದೀಗ ಪಾಕಿಸ್ತಾನಕ್ಕೆ ಪ್ರೇಕ್ಷಕರ ಕೊರತೆ ಎದುರಾಗುತ್ತಿದ್ದು, ಪ್ರೇಕ್ಷಕರನ್ನೇ ನೆಚ್ಚಿಕೊಂಡು ಟೂರ್ನಿ ಆಯೋಜಿಸಿದ್ದ ಪಿಸಿಬಿಗೆ ಇದೀಗ ಗಂಭೀರ ಆರ್ಥಿಕ ಹೊರೆ ಎದುರಾಗುವ ಭೀತಿ ಎದುರಾಗಿದೆ.