Headlines

ಬರದ ನಾಡಾಗುತ್ತಿದೆಯಾ ಮಲೆನಾಡು.!? ಯಾಕಿಷ್ಟು ತಾಪಮಾನ ಏರಿಕೆ.!?

ಬರದ ನಾಡಾಗುತ್ತಿದೆಯಾ ಮಲೆನಾಡು.!? ಯಾಕಿಷ್ಟು ತಾಪಮಾನ ಏರಿಕೆ.!?

ಅಶ್ವಸೂರ್ಯ: ಫೆಬ್ರವರಿ ತಿಂಗಳ ಕೊನೆ ಹಂತಕ್ಕೆ ನಾವು ಸಮೀಪಿಸುತ್ತಿದ್ದೇವೆ ಪ್ರತಿ ವರ್ಷಕ್ಕಿಂತ ಈ ವರ್ಷ ಬಿಸಿಲಿನ ತಾಪಮಾನ ಇನ್ನೂ ಹೆಚ್ಚಿದೆ ಎನ್ನಬಹುದು. ದಿನೇ ದಿನೇ ಬಿಸಿಲಿನ ತಾಪಮಾನಕ್ಕೆ ಮಲ್ನಾಡಿನ ಜನ ಹೈರಣಾಗುತ್ತಿದ್ದಾರೆ. ಕಳೆದ ಬಾರಿ ಸಾಕಷ್ಟು ಮಳೆಯಾಗಿದ್ದರೂ ಕೂಡ ಈಗಾಗಲೇ ಮಲೆನಾಡಿನ ಹಳ್ಳ-ಕೊಳ್ಳಗಳು, ಕೆರೆಗಳು ಎಲ್ಲವೂ ಕೂಡ ಬತ್ತಿ ಹೋಗಿದ್ದು ಮಲೆನಾಡಿನ ರೈತರ ಸ್ಥಿತಿ ಈ ಬಾರಿ ಇನ್ನೂ ಚಿಂತಾಕ್ರಾಂತವಾಗಿದೆ. ಅತಿ ಹೆಚ್ಚಿನ ತಾಪಮಾನಕ್ಕೆ ಹೊಂದಿಕೊಳ್ಳುವ ಅಭ್ಯಾಸವಿಲ್ಲದೆ ಮಲೆನಾಡಿನ ರೈತರು ಸಮಸ್ಯೆಯನ್ನು ಅನುಭವಿಸುವಂತೆ ಆಗಿದೆ.
ನಾವು ಚಿಕ್ಕವರಿದ್ದಾಗ ನೋಡುತ್ತಿದ್ದ ದಟ್ಟ ಅರಣ್ಯಗಳು ಮಾಯವಾಗುತ್ತಿವೆ. ರೈತರ ದುರಾಸೆಗಳಿಗೆ ಅರಣ್ಯಗಳು ಬಲಿಯಾಗಿ ಅಡಿಕೆ ತೋಟಗಳಾಗಿ ಮಾರ್ಪಾಡಾಗುತ್ತಿದೆ. ಮಲೆನಾಡಿನ ದಟ್ಟ ಅರಣ್ಯಗಳು ಕುರುಚಲು ಅರಣ್ಯವಾಗಿ ಪರಿವರ್ತನೆಗೊಳ್ಳುತ್ತಿರುವುದು ಅತ್ಯಂತ ದುರಾದೃಷ್ಟಕರ ಸಂಗತಿಯಾಗಿದೆ.

ರೈತರಿಗೆ ಸಂಕಷ್ಟ: ದಿನೇ ದಿನೇ ಅಂತರ್ಜಲ ಮಟ್ಟ ಕುಸಿತ ಕಾಣುತ್ತಿದ್ದು ರೈತರಿಗೆ ನುಂಗಲಾರದ ತುತ್ತಾಗಿದೆ. ಈಗಾಗಲೇ ಕೆರೆ,ಹಳ್ಳ, ಹೊಳೆಗಳು ಬತ್ತಿ ಹೋಗಿದ್ದು ಕೃಷಿ ಚಟುವಟಿಕೆಗಳಿಗೆ ಮತ್ತು ಅಡಿಕೆ ತೋಟಕ್ಕೆ ನೀರಿಲ್ಲದೆ ಒಣಗುವ ಪರಿಸ್ಥಿತಿ ಬಂದಿದೆ. ಮಲೆನಾಡಿನ ಪ್ರಮುಖ ಬೆಳೆಯಾದ ಅಡಿಕೆಗೆ ಎಲೆಚುಕ್ಕಿ ರೋಗ, ವಿಪರೀತ ಮಳೆಯಿಂದ ಬೆಳೆ ನಾಶ ಹೀಗೆ ಈಗಾಗಲೇ ಬಹಳಷ್ಟು ಸಂಕಷ್ಟದಲ್ಲಿರುವ ರೈತರಿಗೆ ನೀರಿಲ್ಲದ ಅಡಿಕೆ ತೋಟ ಒಣಗುತ್ತಿರುವುದು ಕೂಡ ಒಂದು ಅತ್ಯಂತ ಪ್ರಮುಖ ಸಮಸ್ಯೆಯಾಗಿದೆ.

ಅಂತರ್ಜಲ ಮಟ್ಟ ಕುಸಿತ: ಮಲೆನಾಡು ದಿನದಿಂದ ದಿನಕ್ಕೆ ಬರನಾಡು ಆಗುತ್ತಿರುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ ಎನ್ನಬಹುದು. 200 ರಿಂದ 300 ಅಡಿಗೆ ಇದ್ದ ಅಂತರ್ಜಲ ಮಟ್ಟ ಇಂದು 600 ರಿಂದ 700 ಅಡಿ ಬೋರ್ವೆಲ್ ಕೊರಿಸಿದರೂ ಸಹ ನೀರು ಸಿಗದೇ ರೈತರು ಪರಿತಪಿಸುವಂತಾಗಿದೆ. ಹೀಗೆ ವಿಪರೀತ ಅರಣ್ಯ ನಾಶದಿಂದ ದಿನೇ ದಿನೇ ಮಲೆನಾಡಿನ ನೈಸರ್ಗಿಕ ಅಂಶಗಳು ಅಸ್ತಿತ್ವ ಕಳೆದುಕೊಳ್ಳುತ್ತಿರುವುದು ದುರಂತದ ಸಂಗತಿಯಾಗಿದೆ

ಅರಣ್ಯ ನಾಶವೇ ಇದಕ್ಕೆಲ್ಲಾ ಕಾರಣ: ಮನುಷ್ಯ ತನ್ನ ದುರಾಸೆಗಾಗಿ ಮಲೆನಾಡಿನ ದಟ್ಟ ಅರಣ್ಯಗಳನ್ನು ಕಡಿದು ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಬಹುದು. ಇದರ ಪರಿಣಾಮ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತದೆ ಹೊರತು ಕಡಿಮೆಯಾಗುವುದಿಲ್ಲ. ಇದು ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಪ್ರಮುಖ ದಾರಿ ಮಾಡಿಕೊಡುತ್ತದೆ. ಕಾಡಿನಲ್ಲಿರುವ ಅನೇಕ ಪ್ರಾಣಿಗಳು ಅತಿಯಾದ ಬಿಸಿಲಿನಿಂದ ಮತ್ತು ಬಿಸಿಲಿಗೆ ಒಗ್ಗಿಕೊಳ್ಳಲು ಆಗದೆ ಪ್ರಾಣ ಬಿಡುತ್ತವೆ. ಸ್ಥಳೀಯ ಸಸ್ಯ ವೈವಿಧ್ಯಗಳು ನಾಶವಾಗುತ್ತವೆ. ಮಣ್ಣಿನ ಸವಕಳಿ ಉಂಟಾಗಿ ಮಣ್ಣಿನ ಗುಣಮಟ್ಟ ಕುಸಿಯುತ್ತದೆ.

ಕಾಡ್ಗಿಚ್ಚಿನ ಪರಿಣಾಮ: ಮಲೆನಾಡಿನ ನೈಸರ್ಗಿಕ ಅರಣ್ಯಗಳು ಕಾಡ್ಗಿಚ್ಚಿಗೆ ಬಲಿಯಾಗುತ್ತಿರುದು ವಿಷಾದಕರ ಸಂಗತಿಯಾಗಿದ್ದು ಇದರಲ್ಲಿ ಶೇಕಡ 95 ಭಾಗ ಮಾನವ ಪ್ರೇರಿತ ಬೆಂಕಿ ಅನಾಹುತಕ್ಕೆ ತುತ್ತಾಗುತ್ತಿವೆ. ಇದು ಮಲೆನಾಡಿನ ಮೇಲೆ ಅತ್ಯಂತ ಭೀಕರ ಪರಿಣಾಮವನ್ನು ಬೀರುವ ಇನ್ನೊಂದು ಪ್ರಮುಖ ಅಂಶ. ಕಾಡಿನಲ್ಲಿರುವ ಹಕ್ಕಿಗಳ ಗೂಡು, ಮೊಟ್ಟೆ, ಮರಿಗಳು ವಿಪರೀತ ಶಾಖದಿಂದ ಸತ್ತು ಹೋಗುತ್ತವೆ ಅಲ್ಲಿ ವಾಸಿಸುವ ಸಣ್ಣ ಸಣ್ಣ ಪ್ರಾಣಿಗಳು ಕಾಡ್ಗಿಚ್ಚಿನ ಶಾಖ ಸಹಿಸಲಾಗದೆ ನಾಶವಾಗುತ್ತವೆ. ಅದಲ್ಲದೆ ಸ್ಥಳೀಯ ಸಸ್ಯ ಪ್ರಭೇದಗಳು ಹಾಗೂ ಕಾಡಿನಲ್ಲಿರುವ ಶುದ್ಧ ನೀರು ಕೂಡ ಕಾಡ್ಗಿಚ್ಚಿನ ಪರಿಣಾಮವಾಗಿ ವಿಷಕಾರಿಯಾಗಿ ಪರಿವರ್ತಿತವಾಗಿ ಕಾಡುಪ್ರಾಣಿಗಳಿಗೆ ಸರಿಯಾದ ಸಮಯಕ್ಕೆ ಕುಡಿಯಲು ನೀರು ಸಿಗದೇ ಅವುಗಳ ಸಾವಿಗೆ ಕಾರಣವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ವಿಪರೀತ ಅರಣ್ಯ ನಾಶದಿಂದ ಕಾಡು ಪ್ರಾಣಿಗಳು ತಮ್ಮ ಅವಾಸ ಸ್ಥಾನವನ್ನು ಬದಲಿಸಲು ಹಳ್ಳಿಗಳತ್ತ ಮುಖ ಮಾಡುತ್ತವೆ ಇದರಿಂದ ರೈತರ ಬೆಳೆಗಳಿಗೆ ಅಪಾರವಾದ ಹಾನಿಯನ್ನು ಉಂಟು ಮಾಡುತ್ತದೆ ಮತ್ತು ಮಾನವ ಹಾಗೂ ಅರಣ್ಯ ಪ್ರಾಣಿಗಳ ಸಂಘರ್ಷಕ್ಕೆ ಇದು ಕಾರಣವಾಗುತ್ತದೆ.

Leave a Reply

Your email address will not be published. Required fields are marked *

Optimized by Optimole
error: Content is protected !!