ಮುಂದಿನ ಪೀಳಿಗೆಗೆ ಉಳಿಯುವುದೇ ಕುವೆಂಪು ವಿಚಾರಗಳು
Ashwasurya/Shivamogga
ಅಶ್ವಸೂರ್ಯ/ಶಿವಮೊಗ್ಗ: ಒಬ್ಬ ವ್ಯಕ್ತಿ ತನ್ನ ಜೀವನದುದ್ದಕ್ಕೂ ಸಾರಿರುವ ವಿಚಾರಗಳು ತತ್ವಗಳನ್ನು ನಾವುಗಳು ಅನುಸರಿಸುವ ಮೂಲಕ ಆ ವ್ಯಕ್ತಿಯು ನಂತರದ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. ಅಂತ ಒಬ್ಬ ಶ್ರೇಷ್ಠ ವ್ಯಕ್ತಿ ಮತ್ತು ವ್ಯಕ್ತಿತ್ವ ಕುವೆಂಪುರವರದು.
ತನ್ನ ಜೀವನವನ್ನೇ ಕನ್ನಡ ಸಾಹಿತ್ಯಕ್ಕೆ ಮೀಸಲಿಟ್ಟ ಮತ್ತು ಮಲೆನಾಡಿನ ಜನಜೀವನವನ್ನು ಕಥೆಗಳಲ್ಲಿ ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ ಕುವೆಂಪುರವರು ಕೇವಲ ಕವಿಯಾಗಿರದೆ ತನ್ನ ಜೀವನದುದ್ದಕ್ಕೂ ಅನೇಕ ತತ್ವ ಮತ್ತು ವಿಚಾರಧಾರೆಗಳನ್ನು ಪಾಲಿಸಿದವರು.ಇಂತಹ ವಿಚಾರಧಾರೆಗಳಲ್ಲಿ ಒಂದು ಮಂತ್ರ ಮಾಂಗಲ್ಯ ಎನ್ನುವ ಸರಳ ವಿವಾಹ ಪದ್ಧತಿ. ವರದಕ್ಷಿಣೆ, ಅರ್ಥವಿಲ್ಲದ ಆಚರಣೆ, ಗುಡ್ಡ ಸಂಪ್ರದಾಯ ಮತ್ತು ಆಡಂಬರಗಳನ್ನೊಳಗೊಂಡ ಮದುವೆಗಳಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು 1960ರ ದಶಕದಲ್ಲಿ ಆರಂಭಿಸಿದ ಸಾಮಾಜಿಕ ಕ್ರಾಂತಿಯೇ ಮಂತ್ರ ಮಾಂಗಲ್ಯ.
ಆದರೆ ಮೊನ್ನೆ ದಿನ ಕುಪ್ಪಳ್ಳಿಯಲ್ಲಿ ನಡೆದ ಶ್ರೀಮಂತರ ಮಂತ್ರ ಮಾಂಗಲ್ಯ ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಏಕೆಂದರೆ ಅದು ಕೇವಲ ಮಂತ್ರ ಮಾಂಗಲ್ಯ ವಿವಾಹವಾಗಿರದೆ ಕುವೆಂಪು ಅವರ ವಿಚಾರಧಾರೆಗೆ ವಿರುದ್ಧವಾದ ಗುಂಡು ತುಂಡಿನ ಮೋಜು – ಮಸ್ತಿನ ಪಾರ್ಟಿಯಾಗಿತ್ತು.
ಕುವೆಂಪು ವಿರೋಧಿಸಿದ ಚಟುವಟಿಕೆಗಳನ್ನು ಅವರ ವಿಚಾರಧಾರೆಯಾದ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಅದು ಕೂಡ ಕುಪ್ಪಳ್ಳಿಯಲ್ಲಿ ಮಾಡಿದ್ದು ಎಷ್ಟರಮಟ್ಟಿಗೆ ಸರಿ? ಇದರಿಂದ ಮುಂದಿನ ಪೀಳಿಗೆಗೆ ನಾವು ನೀಡುತ್ತಿರುವ ಸಂದೇಶ ಏನು? ಒಬ್ಬ ವ್ಯಕ್ತಿಯ ವಿಚಾರಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಆ ವ್ಯಕ್ತಿಗೆ ಅವಮಾನ ಮಾಡಿದಂತೆ ಆಗುವುದಿಲ್ಲವೇ? ಹೀಗೆ ಹಲವಾರು ವಿಚಾರಗಳು ನಮ್ಮಲ್ಲಿ ಕಾಡುತ್ತವೆ.
ಅದೇ ರೀತಿ ಕುವೆಂಪುರ ಪ್ರತಿಷ್ಠಾನ ವತಿಯಿಂದ ಪ್ರತಿ ವರ್ಷ ನೀಡುವ “ಕುವೆಂಪು ರಾಷ್ಟ್ರೀಯ ಪುರಸ್ಕಾರ” ಪ್ರತಿ ವರ್ಷ ನಡೆಯುತ್ತಿದ್ದ ಕುವೆಂಪುರವರ ಹುಟ್ಟೂರಾದ ಕುಪ್ಪಳ್ಳಿಯಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿದೆ. ಇದು ಮಲೆನಾಡಿಗರ ಆಕ್ರೋಶಕ್ಕೆ ಕಾರಣವಾಗಿದೆ ಮಲೆನಾಡಿನ ಸಾಹಿತ್ಯಾಸಕ್ತರ ನೆಚ್ಚಿನ ಕಾರ್ಯಕ್ರಮ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದು ಅತ್ಯಂತ ಬೇಸರದ ಸಂಗತಿಯಾಗಿದ್ದು ಹೇಗೆ ವರ್ಷದಿಂದ ವರ್ಷಕ್ಕೆ ಕುಪ್ಪಳ್ಳಿಯ ಸಾಂಸ್ಕೃತಿಕ ಅಸ್ಮಿತೆಗೆ ಧಕ್ಕೆ ತರುವ ಕೆಲಸದಿಂದ ಕುವೆಂಪುರವರ ವಿಚಾರಗಳಿಗೆ ಧಕ್ಕೆ ಉಂಟಾಗದೇ ಇರದು.
ಕೇವಲ ಅವರ ಕತೆ ಕಾದಂಬರಿಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಸುವ ಮೂಲಕ ಮಾತ್ರವಲ್ಲದೇ ದಿನನಿತ್ಯದ ಜೀವನದಲ್ಲಿ ಅವರನ್ನು ಅನುಸರಿವುದು ಅವಶ್ಯಕ. ನಮ್ಮಿಂದ ಮುಂದಿನ ಪೀಳಿಗೆಗೆ ಅವರ ಅನಂತ ವಿಚಾರಗಳು, ವಿಷಯಗಳನ್ನು ವರ್ಗಾಯಿಸುವ ಕೆಲಸವಾಗಲಿ. ಕೊನೇ ಪಕ್ಷ ಅವರ ವಿಚಾರಗಳ ಉಳಿಸುವ ಕೆಲಸಕ್ಕೆ ಕೈ ಜೋಡಿಸಲು ಆಗದೇ ಇದ್ದರೂ ಅವರ ಘನತೆ ಗೌರವಕ್ಕೆ ಧಕ್ಕೆ ಬರದಂತೆ ಮುಂದಿನ ಪೀಳಿಗೆಗೆ ಅವರ ವಿಚಾರಧಾರೆಗಳು ತಪ್ಪಾದ ರೀತಿಯಲ್ಲಿ ವರ್ಗವಾಗದೇ ಇರುವಂತೆ ನೋಡಿಕೊಳ್ಳುವುದು ಅವಶ್ಯಕ.
ಹೀಗೆ ಇತ್ತೀಚಿನ ದಿನಗಳಲ್ಲಿ ಆಗಾಗಿ ಸುದ್ದಿಯಲ್ಲಿರುವ ಕುವೆಂಪು ಪ್ರತಿಷ್ಠಾನವು ಪ್ರಶಸ್ತಿ ಪ್ರಧಾನ ಸಮಾರಂಭವನ್ನು ತೀರ್ಥಳ್ಳಿಯ ಕುಪ್ಪಳ್ಳಿಯಲ್ಲಿ ನಡೆಸಲಿ. ಕಟ್ಟುನಿಟ್ಟಿನ ಮತ್ತು ಕುವೆಂಪು ವಿಚಾರಗಳಿಗೆ ಧಕ್ಕೆ ಬರದಂತೆ ಮಂತ್ರ ಮಾಂಗಲ್ಯ ಪದ್ಧತಿಯನ್ನು ಅನುಸರಿಸುವ ಮೂಲಕ ಕುವೆಂಪುರವರ ವಿಚಾರಗಳು ಮುಂದಿನ ಪೀಳಿಗೆಗೆ ಉಳಿಯುವಂತೆ ಮಾಡಲಿ.