Headlines

ODI: ಶುಭಮನ್‌ ಗಿಲ್‌ ಅಬ್ಬರಕ್ಕೆ ಮಂಡಿ ಊರಿದ ಆಂಗ್ಲರ ಪಡೆ: ಭಾರತಕ್ಕೆ ಭರ್ಜರಿ ಗೆಲುವು

ಅಶ್ವಸೂರ್ಯ/ನಾಗ್ಪುರ :ಭಾರತ ಕ್ರಿಕೆಟ್ ತಂಡದ ಉಪನಾಯಕ ಶುಭಮನ್‌ ಗಿಲ್‌ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಭಾರತ ಕ್ರಿಕೆಟ್‌ ತಂಡ ಗುರುವಾರ ನಾಗ್ಪುರದಲ್ಲಿ ನಡೆದ ಆಂಗ್ಲರ ವಿರುದ್ಧದ ಏಕದಿನ ಪಂದ್ಯದ ಸರಣಿಯ ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್‌ ಅಂತರದ ಗೆಲುವು ಸಾಧಿಸಿದೆ.

ನಾಗ್ಪುರರದ ವಿದರ್ಭ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಂಗ್ಲರ ಪಡೆ 47.4 ಓವರ್‌ಗಳಲ್ಲಿ 248 ರನ್‌ ಗಳಿಸಿ ಉತ್ತಮ ಮೊತ್ತ ಕಲೆಹಾಕಿ ಆಲೌಟ್‌ ಆಯಿತು.ಆಂಗ್ಲರು ಒಡ್ಡಿದ 248 ರನ್ ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾದ ಆಟಗಾರರು ಇನ್ನೂ 68 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗೆ 251 ರನ್ ಗಳಿಸಿ ವಿಜಯದ ಕಹಳೆ ಮೊಳಗಿಸಿದರು .

ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಏಕದಿನ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಪಂದ್ಯವಾಡಿದ ಯಶಸ್ವಿ ಜೈಸ್ವಾಲ್‌ ಜೊತೆ ಇನಿಂಗ್ಸ್‌ ಆರಂಭಿಸಿದ ನಾಯಕ ರೋಹಿತ್‌ ಶರ್ಮಾ ಕೇವಲ 2 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಜೈಸ್ವಾಲ್‌ ಕೂಡ 15 ರನ್‌ ಗಳಿಸಿ ನಾಯಕನ ಹಾದಿಯನ್ನೆ ಹಿಡಿದರು.

ಭಾರತ ತಂಡ ತನ್ನ ಎರಡು ಅಮೂಲ್ಯವಾದ ವಿಕೆಟ್ ಕಳೆದುಕೊಂಡ ಸಂಕಷ್ಟದ ಸಮಯದಲ್ಲಿ ಭರವಸೆಯ ಬ್ಯಾಟ್ಸ್‌ಮನ್ ಗಳಾದ ಶುಭಮನ್‌ ಗಿಲ್‌ ಮತ್ತು ಶ್ರೇಯಸ್‌ ಅಯ್ಯರ್‌, 3ನೇ ವಿಕೆಟ್‌ ಜೋತೆಯಾಟದಲ್ಲಿ 94 ರನ್‌ ಸೇರಿಸಿದರು. 59 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಅಯ್ಯರ್‌ ಔಟಾದ ನಂತರವೂ ತನ್ನ ಉತ್ತಮ ಬ್ಯಾಟಿಂಗ್ ಮುಂದುವರಿಸಿದ ಶುಭಮನ್ ಗಿಲ್‌, ಬಳಿಕ ಬಂದ ಅಕ್ಷರ್ ಪಟೇಲ್‌ (52 ರನ್‌) ಜೊತೆಗೂಡಿ 108 ರನ್ ಸೇರಿಸಿದರು.ಅಕ್ಷರ್ ಪಟೇಲ್ ಕೂಡ ಉತ್ತಮವಾಗಿ ಆಡಿ 52 ರನ್ ಗಳಿಸಿ ಔಟ್ ಅದರು. ನಂತರ ಕ್ರೀಸ್‌ಗೆ ಬಂದ ಕೆ.ಎಲ್‌.ರಾಹುಲ್ ಆಟ ಆಂಗ್ಲರ ಬೌಲರ್ ಗಳ ಮುಂದೆ ನಡೆಯಲಿಲ್ಲ. ರಾಹುಲ್ ಕೇವಲ 2 ರನ್ ಗಳಿಸಿ ಪೆವಿಲಿಯನ್‌ ಕಡೆ ಹೆಜ್ಜೆಹಾಕಿದರು.

ಗೆಲುವಿಗೆ ಇನಿಂಗ್ಸ್‌ ನ ಉತ್ತಮ ಮೊತ್ತ ಕಲೆಹಾಕಿದ ಶುಭಮನ್ ಗಿಲ್‌, ಶತಕದ ಹೊಸ್ತಿಲಲ್ಲಿ ವಿಕೆಟ್ ಒಪ್ಪಿಸಿ 96 ಎಸೆತಗಳನ್ನು ಎದುರಿಸಿದ ಅವರು 87 ರನ್ ಗಳಿಸಿ ಔಟಾದರು. ಅವರ ಇನಿಂಗ್ಸ್‌ನಲ್ಲಿ 14 ಬೌಂಡರಿಗಳಿದ್ದವು.ಪಂದ್ಯದ ಕೊನೆಯಲ್ಲಿ ಹಾರ್ದಿಕ್‌ ಪಾಂಡ್ಯ 9 ರನ್‌ ಮತ್ತು ರವೀಂದ್ರ ಜಡೇಜ 12 ರನ್‌ ಗೆಲುವಿನ ದಡ ಸೇರಿಸಿದರು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಜಾಸ್‌ ಬಟ್ಲರ್‌ ಬಳಗಕ್ಕೆ, ಆರಂಭಿಕ ಬ್ಯಾಟರ್‌ಗಳು ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ, ಟೀಂ ಇಂಡಿಯಾ ಬೌಲರ್‌ಗಳ ಮುಂದೆ ಆಂಗ್ಲರ ಬ್ಯಾಟ್ಸ್‌ಮನ್ ಗಳು ರನ್‌ ಕಲೆಹಾಕಲು ಪರದಾಡಿದರು.
ಇನಿಂಗ್ಸ್‌ ಆರಂಭಿಸಿದ ಫಿಲ್‌ ಸಾಲ್ಟ್‌ 26 ಎಸೆತಗಳಲ್ಲಿ 43 ರನ್ ಹಾಗೂ ಬೆನ್‌ ಡಕೆಟ್‌ 29 ಎಸೆತಗಳಲ್ಲಿ 32 ರನ್ ಕಲೆಹಾಕಿದರು.ಈ ಜೋಡಿ ಬಿರುಸಿನ ಬ್ಯಾಟಿಂಗ್‌ ಮೂಲಕ ಮೊದಲ ವಿಕೆಟ್‌ಗೆ ಪಾಲುದಾರಿಕೆಯಲ್ಲಿ 8.5 ಓವರ್‌ಗಳಲ್ಲೇ 75 ರನ್‌ ಬಾರಿಸಿದರು.

ಈ ಹಂತದಲ್ಲಿ ಸಾಲ್ಟ್‌ ರನೌಟ್‌ ಆದರು. ಬೆನ್‌ ಡಕೆಟ್‌ ಸಹ ಅವರ ಹಿಂದೆಯೇ ಪೆವಿಲಿಯನ್ ಗೆ ಹೊರಟರು. ನಂತರ ಬಂದ ಹ್ಯಾರಿ ಬ್ರೂಕ್‌ ಖಾತೆಯನ್ನೇ ತೆರೆಯಲಿಲ್ಲ. ಕೇವಲ 2 ರನ್‌ ಅಂತರದಲ್ಲಿ ಆಂಗ್ಲರ ಪ್ರಮುಖ ಮೂರು ವಿಕೆಟ್‌ಗಳು ಪತನಗೊಂಡಿದ್ದು ಆಂಗ್ಲರು ಉತ್ತಮ ಮೊತ್ತ ಕಲೆಹಾಕಲು ಸಾಧ್ಯವಾಗದೇ ರನ್‌ ಗಳಿಕೆ ವೇಗವು ಕುಸಿಯಿತು.
ನಂತರ ನಾಯಕ ಬಟ್ಲರ್‌ ಅವರು, ಜೋ ರೂಟ್‌ (31 ಎಸೆತಗಳಲ್ಲಿ 19 ರನ್) ಮತ್ತು ಜೇಕಬ್‌ ಬೆಥಲ್‌ ಅವರೊಂದಿಗೆ ಎರಡು ಉಪಯುಕ್ತ ಜೊತೆಯಾಟಗಳಲ್ಲಿ ಪಾಲ್ಗೊಂಡರು. ರೂಟ್‌ ಜೊತೆ 4ನೇ ವಿಕೆಟ್‌ಗೆ 44 ರನ್ ಕೂಡಿಸಿದ ಅವರು, ಬೆಥಲ್‌ ಜೊತೆ 5ನೇ ವಿಕೆಟ್‌ಗೆ 59 ರನ್‌ ಸೇರಿಸಿದರು.
67 ಎಸೆತಗಳಲ್ಲಿ 52 ರನ್‌ ಗಳಿಸಿದ್ದ ಬಟ್ಲರ್‌, ಅರ್ಧಶತಕದ ಬೆನ್ನಲ್ಲೇ ಪೆವಿಲಿಯನ್‌ ಸೇರಿಕೊಂಡರು. 64 ಎಸೆತಗಳಲ್ಲಿ 51 ರನ್‌ ಕಲೆಹಾಕಿದ್ದ ಬೆಥೆಲ್‌ ಸಹ ನಾಯಕನ ಹಾದಿಯನ್ನೆ ಹಿಡಿದರು. ಲಿಯಾಮ್‌ ಲಿವಿಂಗ್ಟ್‌ಸ್ಟೋನ್‌ ಆಟ ಕೇವಲ 5 ರನ್‌ ಗಳಿಗೆ ಕೊನೆಯಾಯಿತು.

ಕೊನೆಯಲ್ಲಿ ಓವರ್ ಗಳಲ್ಲಿ ಬಿರುಸಿನ ಆಟಕ್ಕೆ ಮುಂದಾದ ಜೋಫ್ರಾ ಆರ್ಚರ್‌ ಅಜೇಯ 21 ರನ್‌ ಗಳಿಸಿ ತಮ್ಮ ತಂಡದ ಮೊತ್ತವನ್ನು 250ರ ಸಮೀಪಕ್ಕ ಕೊಂಡೊಯ್ದರು.
ಭಾರತ ತಂಡದ ಪರ ಪಾದಾರ್ಪಣೆ ಪಂದ್ಯವಾಡಿದ ಹರ್ಷಿತ್ ರಾಣಾ ಮೊದಲ ಪಂದ್ಯದಲ್ಲೆ ಮೂರು ವಿಕೆಟ್‌ಗಳನ್ನು ಕಿತ್ತು ಉತ್ತಮ ಬೌಲರ್ ಎನಿಸಿಕೊಂಡರು. ಇವರು 7 ಓವರ್‌ಗಳಲ್ಲಿ 53 ರನ್‌ ಕೊಟ್ಟು ದುಬಾರಿಯಾದರೂ,ಇಂಗ್ಲೆಂಡ್ ತಂಡದ ಬೆನ್‌ ಡಕೆಟ್‌, ಹ್ಯಾರಿ ಬ್ರೂಕ್‌ ಮತ್ತು ಲಿಯಾಮ್‌ ಲಿವಿಂಗ್‌ಸ್ಟೋನ್‌ ಮೂರು ಪ್ರಮುಖ ವಿಕೆಟ್ ಕಿತ್ತು ಆಂಗ್ಲರ ರನ್ ಗಳಿಕೆಗೆ ಬ್ರೇಕ್ ಹಾಕಿದರು.

ಅವರಿಗೆ ಉತ್ತಮ ಸಹಕಾರ ನೀಡಿದ ರವೀಂದ್ರ ಜಡೇಜ ಸಹ 3 ವಿಕೆಟ್‌ ಪಡೆದರು. 9 ಓವರ್‌ಗಳಲ್ಲಿ ಕೇವಲ 26 ರನ್‌ ನೀಡಿದ ಅವರು, ಜೋ ರೂಟ್‌, ಜೇಕಬ್‌ ಬೆಥೆಲ್‌, ಆದಿಲ್‌ ರಶೀದ್‌ ಅವರನ್ನು ಔಟ್‌ ಮಾಡಿದರು. ಮೊಹಮ್ಮದ್‌ ಶಮಿ, ಅಕ್ಷರ್‌ ಪಟೇಲ್‌ ಮತ್ತು ಕುಲದೀಪ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಹಂಚಿಕೊಂಡರು.

ಛಾಯಾಚಿತ್ರ ಸ್ಟಾರ್ ಸ್ಪೋರ್ಟ್ಸ್ ಕೃಪೆ


Leave a Reply

Your email address will not be published. Required fields are marked *

Optimized by Optimole
error: Content is protected !!