ನಮ್ಮ ಶಾಲೆ ನಮ್ಮ ಜವಾಬ್ದಾರಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ
ಅಶ್ವಸೂರ್ಯ/ಶಿವಮೊಗ್ಗ: ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರಿ ಶಾಲೆಗಳಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಎನ್ನುವ ವಿನೂತನ ಯೋಜನೆಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸೊರಬ ತಾಲೂಕಿನ ನೇರಲಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 2.5ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಧ್ವಜಸ್ತಂಭವನ್ನು ಉದ್ಘಾಟಿಸಿ, ಮಾನ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಶ್ರೀ ಎಸ್. ಮಧು ಬಂಗಾರಪ್ಪ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳ ಸುಧಾರಣೆಗೆ “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಯೋಜನೆಯು ವಿಶಿಷ್ಟ ಚಿಂತನೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಹಿರಿಯ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರದೊಂದಿಗೆ ಕೈ ಜೋಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ನಮ್ಮ ಸರಕಾರಿ ಶಾಲೆಗಳು ಸಾಕಷ್ಟು ಮಹಾನ್ ವ್ಯಕ್ತಿಗಳನ್ನು ರೂಪಿಸಿದೆ. ಸರ್ಕಾರಿ ಶಾಲೆಗಳಲ್ಲಿ ಓದಿದಂತಹ ಅನೇಕರು ಉದ್ಯಮಿಗಳಾಗಿದ್ದಾರೆ, ಉದ್ಯೋಗದಲ್ಲಿದ್ದಾರೆ, ಕೆಲವರು ವಿದೇಶಗಳಲ್ಲಿ ನೆಲೆಸಿದ್ದಾರೆ. ಅವರಿಗೆಲ್ಲ ತಾವು ಕಲಿತ ಶಾಲೆಗೆ ಏನನ್ನಾದರೂ ಕೊಡುಗೆ ಕೊಡಬೇಕು ಎನ್ನುವ ಆಸಕ್ತಿ ಇದ್ದರೂ ಯಾವ ರೀತಿ ಸಹಾಯ ಮಾಡಬೇಕು ಎನ್ನುವುದು ತಿಳಿದಿರುವುದಿಲ್ಲ. ಹಾಗಾಗಿ, ತಾವು ಓದಿದ ಶಾಲೆಯ ಸ್ಥಿತಿಗತಿ ತಿಳಿದು ಅದಕ್ಕೆ ಬೇಕಾದ ಪೂರಕ ಸಹಾಯವನ್ನು ಹಿರಿಯ ವಿದ್ಯಾರ್ಥಿಗಳು ಮಾಡುತ್ತಿದ್ದಾರೆ.
ಅದೇ ರೀತಿಯಲ್ಲಿ ನೇರಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಸಂಜೀವ ಕೆ.ಟಿ ಅವರು ವೃತ್ತಿಯಲ್ಲಿ ತರಕಾರಿ ವ್ಯಾಪಾರಿಯಾಗಿದ್ದು ಸುಮಾರು 2.5 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ತಾವು ಓದಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧ್ವಜಸ್ತಂಭವನ್ನು ನಿರ್ಮಾಣ ಮಾಡಿದ್ದಾರೆ. ಈ ಕಾರ್ಯಕ್ಕೆ ಅವರಿಗೆ ಅಭಿನಂದನೆ ಹಾಗೂ ಇದು ಎಲ್ಲರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.