ಗೆಳತಿಗೆ ಲೈಂಗಿಕ ಕಿರುಕುಳ ಕೊಲೆ ಬೆದರಿಕೆ; ಹೆಸರಾಂತ ಕಿರುತೆರೆ ನಟ ಚರಿತ್ ಬಾಳಪ್ಪ ಬಂಧನ.!
ಅಶ್ವಸೂರ್ಯ/ಬೆಂಗಳೂರು: ಲೈಂಗಿಕ ಕಿರುಕುಳ ಕೊಲೆ ಬೆದರಿಕೆ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಿರುತೆರೆ ನಟನೊಬ್ಬನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.!
ಚರಿತ್ ಬಾಳಪ್ಪ ಬಂಧಿತ ಕಿರುತೆರೆ ನಟ. ಕನ್ನಡದ ಜನಪ್ರಿಯ ಧಾರವಾಹಿ ʼಮುದ್ದುಲಕ್ಷ್ಮೀʼ ಸೇರಿದಂತೆ ತೆಲುಗಿನ ಹತ್ತು ಹಲವು ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ಲೋಕದಲ್ಲಿ ಗಮನ ಸೆಳೆದಿರುವ ಚರಿತ್ ಬಾಳಪ್ಪ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದ ಹಿನ್ನೆಲೆ ಅವರನ್ನು ಆರ್ಆರ್ ನಗರ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಪ್ರೀತಿಸುವ ನಾಟಕವಾಡಿ ಪರಿಚಯವಿರುವ ಗೆಳತಿಗೆ ಚರಿತ್ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಯುವತಿ ವಾಸಿಸುತ್ತಿದ್ದ ಮನೆಗೆ ನುಗ್ಗಿ ಆಕೆಯ ಜೋತೆಗೆ ಗಲಾಟೆಮಾಡಿರುವ ಚರಿತ್ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಯುವತಿ ಹೇಳಿದ್ದಾಳೆ.
ಇದಲ್ಲದೆ ಯುವತಿಯ ಬಳಿ ಚರಿತ್ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದಿದ್ದರೆ ಖಾಸಗಿ ವಿಡಿಯೋ, ಫೋಟೋಗಳನ್ನು ಹರಿಬಿಡುವ ಬೆದರಿಕೆಯನ್ನು ಚರಿತ್ ಹಾಕಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ ನೊಂದ ಯುವತಿ.
ಚರಿತ್ ವಿರುದ್ಧ ಲೈಂಗಿಕ ಕಿರುಕುಳ, ಹಲ್ಲೆ ಹಾಗೂ ಕೊಲೆಯ ಆರೋಪ ಕೇಳಿಬಂದಿದೆ. ಚರಿತ್ ಈಗಾಗಲೇ ಮದುವೆಯಾಗಿ ವಿಚ್ಚೇದನ ಪಡೆದಿದ್ದಾರೆ. ವಿಚ್ಚೇದನದ ಬಳಿಕವೂ ಮಾಜಿ ಪತ್ನಿಯ ಜತೆ ಹಲವು ಬಾರಿ ಚರಿತ್ ಕಿರಿಕ್ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಮಾಜಿ ಪತ್ನಿಯೂ ಚರಿತ್ ಮೇಲೆ ದೂರು ದಾಖಲಿಸಿದ್ದರು ಎನ್ನಲಾಗಿದೆ.
ವಿಚ್ಛೇದನ ಪರಿಹಾರ ಹಣಕ್ಕೆ ನೋಟಿಸ್ ಕಳುಹಿಸಿದ್ದಕ್ಕೆ ಮಾಜಿ ಪತ್ನಿಗೆ ಚರಿತ್ ಬೆದರಿಕೆ ಹಾಕಿದ್ದರು, ಈ ಹಿನ್ನೆಲೆಯಲ್ಲಿ ಚರಿತ್ ವಿರುದ್ಧ ಕಳೆದ ಜೂನ್ ತಿಂಗಳಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.