ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಗಮನ ಸೆಳೆದ ಬಾಲಕಿಯ ಬೌಲಿಂಗ್: ವಿಡಿಯೋ ವೈರಲ್
ಅಶ್ವಸೂರ್ಯ/ಮುಂಬೈ: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ರಾಜಸ್ಥಾನಿ ಬಾಲಕಿಯ ಬೌಲಿಂಗ್ ಶೈಲಿಗೆ ಈಗ ಸ್ವತಃ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಮನ ಸೋತಿದ್ದಾರೆ.
ರಾಜಸ್ಥಾನದ 13 ವರ್ಷದ ಸುಶೀಲಾ ಮೀನಾ ಎಂಬ ಬಾಲಕಿಯ ಬೌಲಿಂಗ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಥೇಟ್ ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ಶೈಲಿಯಲ್ಲಿ ಸುಶೀಲಾ ಮೀನಾ ಕರಾರುವಾಕ್ ಆಗಿ ಬೌಲಿಂಗ್ ಮಾಡುತ್ತಾಳೆ.
ವೇಗದ ಜೊತೆಗೆ ಆಕೆಯ ಬೌಲಿಂಗ್ ಕೂಡಾ ನಿಖರವಾಗಿದೆ. ಈಕೆಯ ಬೌಲಿಂಗ್ ವಿಡಿಯೋ ನೋಡಿ ಅನೇಕರು ಮುಂದೊಂದು ದಿನ ಈಕೆ ಭಾರತ ತಂಡಕ್ಕೆ ಬರುವುದು ಖಂಡಿತಾ ಎಂದು ಭವಿಷ್ಯ ನುಡಿದಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿರುವ ಸಚಿನ್ ತೆಂಡುಲ್ಕರ್ ಅದ್ಭುತ ಬೌಲಿಂಗ್ ಎಂದು ಕೊಂಡಾಡಿರುವುದಲ್ಲದೆ,
ಜಹೀರ್ ಖಾನ್ ಗೂ ನೋಡುವಂತೆ ಸಲಹೆ ನೀಡಿದ್ದಾರೆ.
ಜಹೀರ್ ಕೂಡಾ ಬಾಲಕಿಯ ಬೌಲಿಂಗ್ ಆಕ್ಷನ್ ವೀಕ್ಷಿಸಿ ಕಾಮೆಂಟ್ ಮಾಡಿದ್ದಾರೆ. ಸಚಿನ್ ವಿಡಿಯೋಗೆ ಕಾಮೆಂಟ್ ಮಾಡಿರುವ ಜಹೀರ್ ‘ನಿಮ್ಮ ಗಮನ ಬಿದ್ದಿದೆ ಎಂದ ಮೇಲೆ ಎರಡು ಮಾತೇ ಇಲ್ಲ. ಬಾಲಕಿಯ ಬೌಲಿಂಗ್ ತುಂಬಾ ಸ್ಮೂತ್ ಮತ್ತು ಗಮನಸೆಳೆಯುವಂತಿದೆ. ಈಕೆ ಭವಿಷ್ಯದ ತಾರೆಯಾಗುತ್ತಾಳೆ ಎಂದಿದ್ದಾರೆ.