ತೀರ್ಥಹಳ್ಳಿಯ ಒಡಲಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ.!
– ಭಾಗ > 2
ASHWASURYA/SHIVAMOGGA
ಅಶ್ವಸೂರ್ಯ/ತೀರ್ಥಹಳ್ಳಿ: ಹೆಸರು ಮೆಗ್ಗರ್ ಬ್ಲಾಸ್ಟಿಂಗ್ ಅಂತ.! ಒಂದೊಮ್ಮೆ ಸಿಡಿದರೆ ಲೋಡುಗಟ್ಟಲೆ ಕಲ್ಲು ಚೂರುಗಳನ್ನು ಮೈಲುಗಟ್ಟಲೆ ದೂರಕ್ಕೆ ಚಿಮ್ಮಿಸಿ, ಉಸಿರುಗಟ್ಟಿಸುವಷ್ಟು ಧೂಳು ಮತ್ತು ಎದೆ ನಡುಗಿಸುವಷ್ಟು ಶಬ್ದ ಹೊಮ್ಮಿಸುವ ಭಯಾನಕ ಸ್ಫೋಟಕವಿದು. ಇಂತಹ ಅಪಾಯಕಾರಿ ಸ್ಫೋಟಕವನ್ನು ಬಳಸಿ ಗಣಿಗಾರಿಕೆ ನಡೆಸಲು ವಿಶೇಷ ಪರವಾನಗಿ ಬೇಕು. ಅಸಲಿಗೆ ಈ ಸ್ಪೋಟಕವನ್ನು ಬಳಸುವ ಮುನ್ನ ನೆರೆಹೊರೆಯ ಜನ, ಜಾನುವಾರುಗಳಿಗೆ ಮತ್ತು ಹತ್ತಿರ ಕಾಡು ಪ್ರಾಣಿಗಳಿಗೆ ತೊಂದರೆಯಾಗದಂತೆ ಸಾಕಷ್ಟು ಎಚ್ಚರಿಕೆ ವಹಿಸಬೇಕು.
ಸ್ಫೋಟಕ ಬಳಸುವ ಪ್ರದೇಶ ಜನವಸತಿ ಪ್ರದೇಶಕ್ಕಿಂತ ಕನಿಷ್ಟ ದೂರದಲ್ಲಾದರೂ ಇರಬೇಕು. ಆದರೆ ತೀರ್ಥಹಳ್ಳಿಯ ಮತಿಗೆಟ್ಟ ಕಲ್ಲುಗಣಿ ದಂಧೆಕೋರರಿಗೆ ಈ ಯಾವುದೇ ನಿಯಮಗಳು ಅನ್ವಯವಾಗುವುದಿಲ್ಲ.! ಹೊತ್ತಲ್ಲದ ಹೊತ್ತಿನಲ್ಲಿ ಮೆಗ್ಗರ್ ಬ್ಲಾಸ್ಟಿಂಗ್ ಸ್ಫೋಟದ ಸದ್ದು ಮತ್ತು ಕಲ್ಲು ಚೂರುಮಿಶ್ರಿತ ದೂಳು ಊರಿನ ಜನರ ನೆಮ್ಮದಿಗೆ ಬೆಂಕಿ ಹಾಕುತ್ತಿವೆ. ಮಾತ್ರವಲ್ಲ ಕಾಡು ಪ್ರದೇಶದ ವನ್ಯಜೀವಿಗಳಿಗೆ ಜೀವ ಭಯವನ್ನುಂಟು ಮಾಡಿ ಅವುಗಳು ಜನವಸತಿ ಪ್ರದೇಶದತ್ತ ದಿಕ್ಕೆಟ್ಟು ಲಗ್ಗೆ ಹಾಕುತ್ತಿವೆ. ಆದರೆ ಇದನ್ನೆಲ್ಲಾ ತಡೆಯಬೇಕಾದ ತೀರ್ಥಹಳ್ಳಿಯ ತಹಶೀಲ್ದಾರ್, ಮತ್ತು ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿ ಬಿಟ್ಟಿದ್ದಾರೆ!ಅದರಲ್ಲೂ ಭೂ ಮತ್ತು ಗಣಿ ಇಲಾಖೆಯ ಕೆಲವು ಅಧಿಕಾರಿಗಳು ಮೇಲಿನ ಕುರುವಳ್ಳಿಯ ಕಲ್ಲು ಬಂಡೆಯನ್ನೆ ನುಂಗಿ ನೀರು ಕುಡಿಯುವಷ್ಟರ ಮಟ್ಟುಗೆ ಹಸಿದು ಕುಳಿತಿದ್ದಾರೆ.! ಇಲ್ಲಿಗೆ ಬರುವ ಯಾವುದೇ ಭೂ ಮತ್ತು ಗಣಿ ವಿಜ್ಞಾನ ಅಧಿಕಾರಿಗಳೆಗೆ ಅದ್ಯಾರು ಜಿಲೇಟಿನ್ ಕಡ್ಡಿ ತಿನ್ನಿಸುತ್ತಾರೋ ತುಂಗೆಯ ದಡದಲ್ಲಿ ಎಲ್ಲವನ್ನೂ ನೋಡುತ್ತಾ ಕುಳಿತಿರುವ ರಾಮೇಶ್ವರ ದೈವನಿಗೆ ಗೋತ್ತು.?
ಹಾಗೆ ನೋಡಿದರೆ ಶಿವಮೊಗ್ಗ ಜಿಲ್ಲೆಯ ಅಷ್ಟೂ ತಾಲ್ಲೂಕುಗಳ ಪೈಕಿ ಹೆಚ್ಚು ಪ್ರಮಾಣದಲ್ಲಿ
ಕಪ್ಪು ಕಲ್ಲಿನ ಯೋಗ್ಯ ಗುಣಮಟ್ಟದ ಬೆಟ್ಟ ಸಾಲು ತೀರ್ಥಹಳ್ಳಿಯ ಮೇಲಿನ ಕುರುವಳ್ಳಿಯಲ್ಲಿದೆ. ಇಲ್ಲಿಯ ನೆಲದಲ್ಲಿ ಅಂತಹ ಕಲ್ಲು ನಿಕ್ಷೇಪವಿರುವುದರಿಂದಲೇ ಇವತ್ತು ತೀರ್ಥಹಳ್ಳಿ ಪಟ್ಟಣ, ಮತ್ತದರ ಅಸುಪಾಸಿನ ಹಳ್ಳಿಗಾಡಿನ ಜನ ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ದುರಂತವೆಂದರೆ ನಿತ್ಯವೂ ಇಲ್ಲಿಯ ಜನರಲ್ಲಿ ಭೂಕಂಪದ ಭೀತಿ ಹುಟ್ಟಿಸಿ, ಜೀವಭಯದಿಂದ ತತ್ತರಿಸುವಂತೆ ಮಾಡಿರುವ ಭಯಾನಕ ಕಲ್ಲು ಗಣಿಗಾರಿಕೆ ಇವತ್ತು ನಿನ್ನೆಯಿಂದೇನು ಬಿಗಡಾಯಿಸಿದ್ದಲ್ಲ, ಕಳೆದ ನಲವತ್ತು, ಐವತ್ತು ವರ್ಷಗಳಿಂದ ಇಲ್ಲಿ ನಿರಂತರ ಕ್ವಾರಿಯಲ್ಲಿ ಕಲ್ಲು ತೆಗೆಯುವ ಕಾರ್ಯ ಭರದಿಂದ ನಡೆದು ಬಂದಿದೆ. ಹಿಂದೆಲ್ಲಾ ಮನುಷ್ಯರೇ ಹ್ಯಾಂಡ್ಗನ್ಗಳಿಂದ ಚಪ್ಪಡಿ ಒಡೆದು ಕಲ್ಲು ಉತ್ಪಾದಿಸುತ್ತಿದ್ದರು. ಆಗ ಕಲ್ಲು ಗಣಿಗಾರಿಕೆಯಿಂದ ತೀರ್ಥಹಳ್ಳಿಯ ನೆಲಕೊಳ್ಳೆ ಹೋಗುತ್ತಿದೆ ಎಂಬುವುದನ್ನು ಬಿಟ್ಟರೆ ಬೇರಾವ ತೊಂದರೆಗಳು ಇರಲಿಲ್ಲ.
ಕ್ರಮೇಣ ಈ ದಂಧೆ ಉದ್ಯಮದ ರೂಪ ಪಡೆಯುತ್ತಾ ಬಂದಾಗ ಮನುಷ್ಯರ ಬದಲಿಗೆ ಜಿಲೇಟಿನ್ ಕಡ್ಡಿಗಳನ್ನು ಸ್ಫೋಟಿಸಿ ಕಲ್ಲು ತೆಗೆಯುವ ಅಕ್ರಮ ದಂಧೆ ಶುರುವಾಯಿತು. ಆಗಲೂ ಜನಸಾಮಾನ್ಯರಿಗೆ ಮತ್ತು ಕಾಡುಪ್ರದೇಶದ ವನ್ಯಮೃಗಗಳಿಗೆ ಇದರಿಂದ ಹೇಳಿಕೊಳ್ಳುವಂತಹ ತೊಂದರೆಯಾಗಲಿಲ್ಲ. ಆದರೆ ಕೆಲವು ಧನದಾಹಿ ಕ್ವಾರಿ ಮಾಲೀಕರು ಯಾವಾಗ ಮೆಗ್ಗರ್ ಬ್ಲಾಸ್ಟಿಂಗ್ ಬಳಸತೊಡಗಿದರೋ ಅಲ್ಲಿಗೆ ಕಲ್ಲು ಕ್ವಾರಿ ದಂಧೆ ಜನರ ನೆಮ್ಮದಿ ಕೊಲ್ಲುವ ಪೀಡೆಯಾಗಿ ಪರಿಣಮಿಸಿತು. ಈ ಸ್ಫೋಟಕವನ್ನು ಅದೆಲ್ಲಿಂದ ತರುತ್ತಾರೆ, ಯಾವ ದಾಖಲೆ ಸೃಷ್ಟಿಸಿ, ಯಾವ ಕಾರಣ ಹೇಳಿ ತರುತ್ತಾರೆ ಎಂಬುದು ನಿಗೂಢ. ಈ ಬಗ್ಗೆ ಸ್ಥಳೀಯ ಶಾಸಕರು ಮತ್ತು ತಹಸೀಲ್ದಾರ್ ಅವರಿಗೆ ಸುತಾರಾಂ ಮಾಹಿತಿ ಇಲ್ಲವೇನು ಎಂದು ಭಾಸವಾಗುತ್ತದೆ.! ಕಲ್ಲು ಕ್ವಾರಿ ಧಣಿಗಳು ಕಲ್ಲು ಕ್ವಾರಿಯ ಅಕ್ರಮಗಳನ್ನೆಲ್ಲಾ ಸಕ್ರಮವಾಗಿ ಮಾಡಿದರೆ ತಾನೆ ಶಾಸಕರಿಗೆ, ತಹಶೀಲ್ದಾರ್‌ಗೆ ಮಾಹಿತಿ ಸಿಗಲು ಸಾಧ್ಯ.!? ಇವತ್ತು ಮೇಲಿನ ಕುರುವಳ್ಳಿಯಲ್ಲಿರುವ ಸರಿಯಾದ ಲೆಕ್ಕವಿಲ್ಲದಷ್ಟು ಸಂಖ್ಯೆಯ ಕಲ್ಲು ಕ್ವಾರಿಗಳಲ್ಲಿ ಅನೇಕ ಕ್ವಾರಿಗಳಿಗೆ ಅಸಲಿ ಪರವಾನಿಗೆಯೇ ಇಲ್ಲವಂತೆ.! ಪರವಾನಗಿ ಇರುವ ಕೆಲವರು, ನಿಗಧಿತ ಪ್ರದೇಶದಿಂದ ಸುತ್ತಮುತ್ತಲಿನ ಪ್ರದೇಶವನ್ನೂ ಒತ್ತುವರಿ ಮಾಡಿಕೊಂಡಿದ್ದಾರೆ. ಸರ್ಕಾರಕ್ಕೆ ಕಟ್ಟುವ ರಾಯಲ್ಟಿ ಹಣವನ್ನೂ ಸರಿಯಾಗಿ ಕಟ್ಟಸೆ ಮೋಸ ನಡೆಯುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಅಕ್ರಮ ಮತ್ತು ಒತ್ತುವರಿ ಗಣಿಗಾರಿಕೆಯಿಂದ ಒಂದು ಕಡೆ ಅಮೂಲ್ಯ ಸಂಪತ್ತು ಲೂಟಿಯಾಗುತ್ತಿದ್ದರೆ, ಇನ್ನೊಂದು ಕಡೆ ಗಣಿಗಾರಿಕೆಯ ಮೇಲಿನ ಕುರುವಳ್ಳಿಯ ಆಸುಪಾಸಿನ ಪ್ರದೇಶಗಳಲ್ಲಿ ವಿವಿಧ ಭೀಕರ ತೊಂದರೆಗಳು ಬಿಗಡಾಯಿಸಿಕೊಂಡಿವೆ. ಈ ಸಂಬಂಧ ಜನ ರೊಚ್ಚಿಗೆದ್ದು ಹೋರಾಟ ಮಾಡಿದಾಗ ಮಾತ್ರ ಒಂದೆರಡು ದಿನ ಸ್ಥಗಿತಗೊಂಡಂತೆ ನಡೆಯುವ ವ್ಯವಹಾರ ಪುನಃ ಮತ್ತದೆ ಅಬ್ಬರ, ಜೀವ ಕಂಟಕ ಖದರ್ ನೊಂದಿಗೆ ಪುನರಾರಂಭಗೊಳ್ಳುತ್ತದೆ. ಇಲ್ಲಿಗೆ ಬಂದು ಹೋದ ತಹಶೀಲ್ದಾರ್‌ರರು, ಶಾಸಕರು ಎಲ್ಲರೂ ಈ ಕ್ವಾರಿ ದೂಳು ತಿಂದ ರೂಮರುಗಳಿವೆ. ಹಾಗಾಗಿಯೇ ಜನ ನೆಮ್ಮದಿಗೆ ಕಂಟಕಪ್ರಾಯವಾಗಿರುವ ಮತಿಗೆಟ್ಟ ಗಣಿಗಾರಿಕೆಗೆ ಕಡಿವಾಣ ಬೀಳುತ್ತಿಲ್ಲವೆಂದು ಸ್ಥಳೀಯ ಜನ ಆರೋಪಿಸುತ್ತಿದ್ದಾರೆ.
ಸದ್ಯ ದಕ್ಷ ಅಧಿ ಕಾರಿಯಂತೆ ಕಾಣುವ ಇತ್ತೀಚೆಗಷ್ಟೇ ಶಿಕಾರಿಪುರದಿಂದ ತೀರ್ಥಹಳ್ಳಿಗೆ ಆಗಮಿಸಿರುವ ಯುವ ತಹಶೀಲ್ದಾರ್ ರಂಜಿತ್ ಎಸ್ ಅವರಿಗೆ ಈ ಅಸಹ್ಯವನ್ನು ರಕ್ಷಿಸಿ, ಶತ್ರುಗಳನ್ನು ಸೃಷ್ಟಿಸಿಕೊಳ್ಳುವ ಹರಕತ್ತು ಖಂಡಿತ ಇಲ್ಲಾ ಎನ್ನುವಂತೆ ಕಾಣುತ್ತಿದೆ.
ಇನ್ನೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಬಗ್ಗೆ ಮಾತನಾಡುವುದೆ ಬೇಡ ಅ ಮಟ್ಟದ ಹಸಿವು ಅವರನ್ನು ಆವರಿಸಿಕೊಂಡು ಮೇಲಿನ ಕುರುವಳ್ಳಿಯ ಹೆಬ್ಬಂಡೆಗಳ ಬೆಟ್ಟದ ಸಾಲುಗಳು ದಿನದಿಂದ ದಿನಕ್ಕೆ ಕರಗಿ ಬೆಂಗಳೂರು ಬೆತ್ತಲಾಗುತ್ತಿದೆ.! ಇನ್ನೂ ಮೇಲಿನ ಕುರುವಳ್ಳಿಯ ಅದೆಷ್ಟೋ ಕಲ್ಲು ಕ್ವಾರಿಗಳಲ್ಲಿ ಭದ್ರತೆಗೆ ಸಂಬಂಧಿಸಿದಂತೆ ಯಾವುದೇ ಕ್ರಮಗಳನ್ನು ಅನುಸರಿಸುತ್ತಿಲ್ಲ. ಇನ್ನೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕೆಲವು ಖದೀಮ ಅಧಿಕಾರಿಗಳೇ ಪೊಗದಸ್ತು ಬೆಂಬಲ ಒದಗಿಸುತ್ತಿದ್ದಾರೆ ಎನ್ನುವ ಮಾತ್ತು ಕೇಳಿಬರುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲಾ ಪಕ್ಷಗಳ ಕೆಲವು ರಾಜಕಾರಣಿಗಳ ನೆರಳೇ ಈ ಗಣಿ ಖದೀಮರ ಬೆನ್ನಿಗಿದೆ ಎಂದು ಹೇಳಲಾಗುತ್ತಿದೆ.ಇನ್ನೂ ತೀರ್ಥಹಳ್ಳಿಯನ್ನು ಉದ್ಧಾರ ಮಾಡಿ ಸ್ವಾಮಿ ಎಂದು ಜನ ನಿರೀಕ್ಷಿಸಿ ಜನನಾಯಕರನ್ನು ಗೆಲ್ಲಿಸಿದರೆ ಅವರು ದೋಚುವವರನ್ನು ಮಾತ್ರ ಉದ್ದಾರ ಮಾಡುತ್ತಿದ್ದಾರೆಂದು ಗಣಿಗಾರಿಕೆಯ ಅಬ್ಬರಕ್ಕೆ ರೋಸಿಟ್ಟಿರುವ ಜನ ಶಾಪ ಹಾಕುವಂತಾಗಿದೆ. ಯಾಕೆಂದರೆ ಇದರಿಂದ ಕೇವಲ ದೂಳು, ಘೋರ ಶಬ್ದ ಮಾತ್ರ ಮಗ್ಗರ್ ಬ್ಲಾಸ್ಟಿಂಗ್ ನಂತಹ ಅಪಾಯಕಾರಿ ಸ್ಫೋಟಕಗಳನ್ನು ಬಳಸುತ್ತಿರುವುದರಿಂದ ಮನೆ, ಮಠ,ಶಾಲಾ ಕಾಲೇಜು, ದೇವಾಲಯಗಳ ಬುನಾದಿಯೇ ಅಲುಗಾಡತೊಡಗಿದೆ.
ಗೋಡೆಗಳು ಬಿರುಕು ಬಿಟ್ಟು ಜನರನ್ನು ಆತಂಕಕ್ಕೀಡು ಮಾಡುತ್ತಿವೆ.
ತೀರ್ಥಹಳ್ಳಿಯ ಪಟ್ಟಣದಿಂದ ಕೂಗಳತೆ ದೂರಕ್ಕಿರುವ ಮೇಲಿನ ಕುರುವಳ್ಳಿ ಮತ್ತು ಮುಂತಾದ ಅಕ್ಕಪಕ್ಕದ ಗ್ರಾಮಗಳ ಜನರಂತೂ ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ. ಇಷ್ಟೆಲ್ಲಾ ಅಪಾಯಗಳ ಜೊತೆಗೆ ತೀರ್ಥಹಳ್ಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ಕುರುವಳ್ಳಿಯ ಕ್ವಾರಿಯ ದಂಧೆಕೋರರು ದಿನಕ್ಕೆ ಲಕ್ಷಾಂತರ ರೂಪಾಯಿ ಗಳಿಸುವುದಲ್ಲದೆ,ಕೆಲವು ಸರ್ವೆ ನಂಬರುಗಳಲ್ಲಿ ಪ್ರದೇಶದ ಅರಣ್ಯದಲ್ಲೂ ತಮ್ಮ ಕಲ್ಲು ಕ್ವಾರಿಯನ್ನು ಅಕ್ರಮವಾಗಿ ವಿಸ್ತರಿಸಿಕೊಂಡಿದ್ದಾರೆ. ಇದೆಲ್ಲಾ ನಿಚ್ಚಳ ಕಾಣುವಂತಿದ್ದರೂ ಸಹ ಸಂಬಂಧಪಟ್ಟ ಕಂದಾಯ, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಜಿಲೆಟಿನ್ ಕಡ್ಡಿ ಜಬಡುತ್ತ ಚಪ್ಪಡಿಕಲ್ಲು ಜೀರ್ಣಿಸಿಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿ ಹೀಗೆ ಮುಂದುವರೆದರೆ ತೀರ್ಥಹಳ್ಳಿಯ ಕಲ್ಲು ಕ್ವಾರೆ ದಂಧೆ ಬಳ್ಳಾರಿಯ ರೂಪ ಪಡೆದು ಜೀವಂತ ಸುಡುಗಾಡಾಗು ವುದರಲ್ಲಿ ಅನುಮಾನವೇ ಇಲ್ಲ, ತಹಶೀಲ್ದಾರ್ ರಂಜಿತ್ ಅವರು ಇನ್ನಾದರೂ ಎಚ್ಚರವಹಿಸಿ ಪುಣ್ಯಕಟ್ಟಿಕೊಳ್ಳಲಿ!
- ಮುಂದುವರಿಯುವುದು..ಭಾಗ-3