ಭಾರತೀಯ ಜನತಾ ಪಕ್ಷದ ನಾಯಕರಿಗೆ ನಾಲ್ಕು ಶಬ್ದಗಳ ಬಿಟ್ಟು ಬೇರೇನೂ ಗೊತ್ತಿಲ್ಲ.: ವೈ.ಬಿ.ಚಂದ್ರಕಾಂತ್ ಟೀಕೆ
ಅಶ್ವಸೂರ್ಯ/ಶಿವಮೊಗ್ಗ: ಭಾರತೀಯ ಜನತಾ ಪಕ್ಷದ ನಾಯಕರಿಗೆ ಮುಸ್ಲಿಂ, ಕಾಂಗ್ರೇಸ್, ಗಾಂಧಿ ಕುಟುಂಬ ಮತ್ತು ಹಿಂದೂ ಶಬ್ದಗಳನ್ನು ಬಿಟ್ಟು ಬೇರೇನು ಗೊತ್ತಿಲ್ಲ. ಈ ನಾಲ್ಕು ಶಬ್ದಗಳ ಮೇಲೆಯೆ ತಮ್ಮ ರಾಜಕೀಯ ಬೇಳೆಕಾಳು ಬೇಯಿಸಿಕೊಳ್ಳುತ್ತಿದ್ದಾರೆಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ತಮ್ಮ ಹೇಳಿಕೆಯಲ್ಲಿ ಟೀಕಿಸಿದ್ದಾರೆ.
ದೇಶದ ಸಂವಿಧಾನದ ವಿರುದ್ಧ ಮಾತನಾಡುವುದು, ಚುನಾಯಿತ ಸರ್ಕಾರ ಬೀಳಿಸುವ ಕುತಂತ್ರ ಮಾಡುವುದು, ದೇಶದ ಕಾನೂನನ್ನು ತಮ್ಮ ಮನಸ್ಸಿಗೆ ಬಂದಂತೆ ದುರ್ಬಳಕೆ ಮಾಡಿಕೊಳ್ಳುವುದನದನ್ನು ಇವರು ಚಾಳಿಯಾಗಿ ಮಾಡಿಕೊಂಡಿರುವುದರಿಂದ ಇತ್ತೀಚೆಗೆ ಶ್ರೀಗಳೊಬ್ಬರು ನೀಡಿರುವ ದೇಶದ ಸಮಗ್ರತೆಗೆ ಧಕ್ಕೆ ತರುವ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿರುವುದು ನೋಡಿದರೆ ಇವರಿಗೆ ದೇಶದ ಕಾನೂನಿನ ಬಗ್ಗೆ ಎಷ್ಟು ಗೌರವವಿದೆ ಎಂದು ಗೊತ್ತಾಗುತ್ತದೆ ಎಂದು ವಕ್ತಾರರಾದ ವೈ.ಬಿ.ಚಂದ್ರಕಾಂತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೇಶದ ಪ್ರತಿಯೊಬ್ಬ ಪ್ರಜೆಯೂ ದೇಶದ ಕಾನೂನು ಮತ್ತು ಸಮಗ್ರತೆಯನ್ನು ಕಾಪಾಡಬೇಕು. ದೇಶದ ಕಾನೂನು ಮತ್ತು ಸಮಗ್ರತೆಗೆ ಧಕ್ಕೆ ತರುವವರು ಕಾನೂನಿಗಿಂತ ದೊಡ್ಡವರಲ್ಲ. ಇದನ್ನು ಮೀರಿ ರಾಜಕೀಯ ಪಕ್ಷಗಳ ನಾಯಕರು, ಯಾವುದೆ ಧರ್ಮದ ಮಠಾಧೀಶರು ವರ್ತಿಸುವುದು, ಮಾತನಾಡುವುದು ಸರಿಯಲ್ಲ. ಇಂತಹ ದುಸ್ಸಾಹಸಗಳು ದೇಶವನ್ನು ಅಭದ್ರಗೊಳಿಸುತ್ತವೆ. ಇಂತಹ ಕೃತ್ಯಗಳಿಗೆ ಕಾಂಗ್ರೇಸ್ ಪಕ್ಷ ಮತ್ತು ಕಾಂಗ್ರೇಸ್ ಸರ್ಕಾರಗಳು ಎಂದಿಗೂ ಆಸ್ಪದ ನೀಡಿಲ್ಲ ಎನ್ನುವುದನ್ನು ಬಿ.ಜೆ.ಪಿ. ಮತ್ತು ಆ ಪಕ್ಷದ ನಾಯಕರು ಅರ್ಥ ಮಾಡಿಕೊಳ್ಳಬೇಕೆಂದು ವೈ.ಬಿ.ಚಂದ್ರಕಾಂತ್ ಅವರು ಹೇಳಿದ್ದಾರೆ. ರಾಜ್ಯದಲ್ಲಿ ನಡೆದ ಮತ್ತು ನಡೆಯುವ ಕೆಲವು ಘಟನೆಗಳ ಬಗ್ಗೆ ಸರ್ಕಾರವೇ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸುವ ಅಧಿಕಾರ ಹೊಂದಿರುತ್ತದೆ. ಇಂತಹ ಪ್ರಕರಣಗಳಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡಬಹುದೆ ಹೊರತು, ಖಾಸಗಿ ವ್ಯಕ್ತಿಗಳು ದಾಖಲಿಸುವ ಪ್ರಕರಣಗಳಲ್ಲಿ ಸರ್ಕಾರ ಮದ್ಯ ಪ್ರವೇಶ ಮಾಡುವುದಕ್ಕೆ ಹೇಗೆ ಬರುತ್ತದೆ ಎನ್ನುವ ಕನಿಷ್ಠ ಜ್ಞಾನವೂ ಬಿ.ಜೆ.ಪಿ. ನಾಯಕರಿಗೆ ಇದ್ದಂತೆ ಇಲ್ಲ. ಶ್ರೀಗಳಿಂದ ಆಗಿರುವ ಘಟನೆಯ ಬಗ್ಗೆ ಶ್ರೀಗಳೇ ಕ್ಷಮೆ ಕೇಳಿರುವ ಹಿನ್ನೆಲೆಯಲ್ಲಿ ಪ್ರಕರಣ ಸುಖಾಂತ್ಯವಾದಲ್ಲಿ ಕಾಂಗ್ರೇಸ್ ಪಕ್ಷದ ಯಾವುದೇ ಅಭ್ಯಾಂತರವಿಲ್ಲವೆಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಕೆಲವು ತಿಂಗಳುಗಳ ಹಿಂದೆ ಮಾಜಿ ಮುಖ್ಯಮಂತ್ರಿಯೊಬ್ಬರಿಂದ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಕಾನೂನು ಯಾವ ರೀತಿಯಲ್ಲಿ ಪಾಲನೆಯಾಗಿದೆ ಎನ್ನುವುದು ಇಡೀ ದೇಶಕ್ಕೆ ತಿಳಿದಿದೆ. ಇಷ್ಟಿದ್ದರೂ ಕಾನೂನು ಪಾಲನೆಯ ಬಗ್ಗೆ ಬಿ.ಜೆ.ಪಿ. ನಾಯಕರು ಕಾಂಗ್ರೇಸ್ ಪಕ್ಷಕ್ಕೆ ಬುದ್ದಿ ಹೇಳುತ್ತಿರುವುದು ಹಾಸ್ಯಾಸ್ಪದವೆಂದು ರಾಜ್ಯ ಬಿ.ಜೆ.ಪಿ. ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕರಾದ ಆರ್. ಆಶೋಕ್ ಅವರ ಹೇಳಿಕೆಗೆ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ತಿರುಗೇಟು ನೀಡಿದ್ದಾರೆ.