ಪ್ರತಿಷ್ಠಿತ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ: ಶಿವಮೊಗ್ಗ “ಕ್ರಾಂತಿದೀಪ” ಎನ್ ಮಂಜುನಾಥ್ ಮಡಿಲಿಗೆ.
ಅಶ್ವಸೂರ್ಯ/ಶಿವಮೊಗ್ಗ: ಕನ್ನಡ ಪತ್ರಿಕಾ ರಂಗದ ಭೀಷ್ಮ ಎಂದೇ ಹೆಸರಾದ ಮೊಹರೆ ಹಣಮಂತರಾಯರು 1892 ರ ನವೆಂಬರ್ 12 ರಂದು ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿಯಲ್ಲಿ ಜನಿಸಿದವರು. ವಿಜಯಪುರದಲ್ಲೇ ಶಿಕ್ಷಣ ಪೂರೈಸಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸೆರೆಮನೆವಾಸವನ್ನೂ ಅನುಭವಿಸಿದವರು. ನಿಷ್ಠುರ ಪತ್ರಿಕೋದ್ಯಮಕ್ಕೆ ಹೆಸರಾದ ಮೊಹರೆ ಹಣಮಂತರಾಯರು
ವಿಜಯಪುರದಲ್ಲಿ ಪ್ರಕಟವಾಗುತ್ತಿದ್ದ ‘ಕರ್ನಾಟಕ ವೈಭವ’ ವಾರ ಪತ್ರಿಕೆಯ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಬಳಿಕ, 1934ರಲ್ಲಿ ಆಗ ಬೆಳಗಾವಿಯಲ್ಲಿ ಪ್ರಕಟವಾಗುತ್ತಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿ, ವ್ಯವಸ್ಥಾಪಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಕರ್ಮವೀರ ವಾರ ಪತ್ರಿಕೆಯನ್ನು ಪ್ರಾರಂಭಿಸಿ ಕರ್ನಾಟಕದ ಉದ್ದಗಲಕ್ಕೂ ಹೆಸರು ಸಂಪಾದಿಸಿದ ಹಣಮಂತರಾಯರು. 1956ರ ಸೆಪ್ಟೆಂಬರ್ ನಲ್ಲಿ ಕನ್ನಡದ ಪ್ರಥಮ ಡೈಜೆಸ್ಟ್ ‘ಕಸ್ತೂರಿ’ ಮಾಸಿಕವನ್ನು ಲೋಕ ಶಿಕ್ಷಣ ಟ್ರಸ್ಟ್ ಪರವಾಗಿ ಪ್ರಾರಂಭಿಸಿ ಸೈ ಎನ್ನಿಸಿಕೊಂಡವರು. 1958 ರಲ್ಲಿ ನಿವೃತ್ತಿ ಹೊಂದಿದ ಮೊಹರೆ ಹಣಮಂತರಾಯರು 1960 ರ ಜುಲೈ 27 ರಂದು ಇಹಲೋಕ ತ್ಯಜಿಸಿದರು.
ಕನ್ನಡ ಪತ್ರಿಕೆ ಅಥವಾ ಪತ್ರಿಕಾ ಸಮೂಹವನ್ನು ಕಟ್ಟಿ ಬೆಳೆಸಿದ ಪತ್ರಕರ್ತರ ಸಾಧನೆಯನ್ನು ಗುರುತಿಸಿ. ಇವರ ಸ್ಮರಣಾರ್ಥ ‘ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ’ಯನ್ನು ಕರ್ನಾಟಕ ಸರ್ಕಾರವು 2010ರಿಂದ ಪ್ರತಿ ವರ್ಷ ನೀಡುತ್ತಿದೆ. ಈ ಪ್ರಶಸ್ತಿಯು 2 ಲಕ್ಷ ರೂ. ನಗದು ಪುರಸ್ಕಾರವನ್ನು ಒಳಗೊಂಡಿದೆ. ಈ ವರೆಗೆ 09 ಮಂದಿ ಪತ್ರಕರ್ತರು ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 2019 ರಿಂದ 2023 ರವರೆಗಿನ 5 ವರ್ಷಗಳ ಅವಧಿಯ ಪ್ರಶಸ್ತಿಗಳನ್ನು ಇದೀಗ ಕರ್ನಾಟಕ ಸರ್ಕಾರ ಪ್ರಕಟಿಸಿದೆ.
2021ನೇ ಸಾಲಿಗೆ ಮೊಹರೆ ಹಣಮಂತರಾಯ ಪ್ರಶಸ್ತಿ ಶಿವಮೊಗ್ಗದ ಎನ್.ಮಂಜುನಾಥ್ ಮುಡಿಗೇರಿದೆ
ಶಿವಮೊಗ್ಗದ ಹೆಸರಾಂತ ದಿನಪತ್ರಿಕೆ. ಕ್ರಾಂತಿದೀಪ ಕನ್ನಡ ದಿನಪತ್ರಿಕೆಯ ಸಂಪಾದಕರಾಗಿರುವ ಎನ್ ಮಂಜುನಾಥ್. ಪತ್ರಿಕಾ ರಂಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲೆ 1985 ಆಗಸ್ಟ್ 15 ರಂದು ಕ್ರಾಂತಿದೀಪ ದಿನಪತ್ರಿಕೆಯ ಜವಾಬ್ದಾರಿಯನ್ನು ಹೊತ್ತು ಸಂಪಾದಕರಾಗಿ ಮುನ್ನಡೆಸಿಕೊಂಡು ಬಂದಂತವರು. ಮಂಜುನಾಥ್ ಅವರು ಪತ್ರಿಕಾ ರಂಗದಲ್ಲಿ ಹೆಜ್ಜೆ ಹೆಜ್ಜೆಗೂ ಕಠಿಣ ಶ್ರಮಹಾಕಿ ಗೆದ್ದು ಬಂದಂತವರು. ಅಚ್ಚುಮೊಳೆಯ ಮುದ್ರಣದಲ್ಲಿ ಕ್ರಾಂತಿದೀಪ ಪತ್ರಿಕೆಯನ್ನು ಪ್ರಾರಂಭಿಸಿದ ಇವರು ಕಾಲಕ್ಕನುಗುಣವಾಗಿ ತಮ್ಮ ಸಂಪಾದಕತ್ವದ ಕ್ರಾಂತಿದೀಪ ಪತ್ರಿಕೆಯನ್ನು ಕಾಲ ಕಾಲಕ್ಕೆ ಹೊಸ ಹೊಸ ಬದಲಾವಣೆಯೊಂದಿಗೆ ಹೊರತಂದು ಮಲೆನಾಡು ಭಾಗವಲ್ಲದೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಪತ್ರಿಕೆಯನ್ನು ಹೊರತಂದು ಜನಪ್ರಿಯಗೊಳಿಸಿದ್ದಾರೆ.ಇವರ ಗರಡಿಯಲ್ಲಿ ಬೆಳೆದ ನೂರಾರು ಪತ್ರಕರ್ತರು ನಾಡಿನ ಉದ್ದಗಲಕ್ಕೂ ಪ್ರಮುಖ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತ ಪತ್ರಿಕಾ ರಂಗದಲ್ಲಿ ಬದುಕು ರೂಪಿಸಿಕೊಂಡಿದ್ದಾರೆ.
ಪತ್ರಿಕೋದ್ಯಮಕ್ಕೆ ಕಾಲಿಡುವ ಯುವ ಪತ್ರಕರ್ತರಿಗೆ ಇವರ ದಿನಪತ್ರಿಕೆಯ ಪಡುಸಾಲೆ ತರಬೇತಿಯ ಶಾಲೆಯಂತೆ ಇಲ್ಲಿ ತರಭೇತಿ ಪಡೆದವರಲ್ಲಿ ಸಾಕಷ್ಟು ಮಂದಿ ಇಂದು ಸಂಪಾದಕರಾಗಿ ಸ್ವಂತ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
ಎನ್ ಮಂಜುನಾಥ್ ಅವರ ಸುದೀರ್ಘ ಪತ್ರಿಕೋದ್ಯಮದ ಹಾದಿಯಲ್ಲಿ ಇಂದು ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಎನ್ನುವಂತೆ ರಾಜ್ಯ ಸರ್ಕಾರ ಇವರನ್ನು ಗುರುತಿಸಿ ಗೌರವಿಸಿದೆ.
ಕನ್ನಡ ಪತ್ರಿಕಾ ರಂಗದ 2021ನೇ ಸಾಲಿನ ಪ್ರತಿಷ್ಠಿತ ಮೊಹರೆ ಹಣಮಂತರಾಯ ಪ್ರಶಸ್ತಿಗೆ ಕರ್ನಾಟಕ ಸರ್ಕಾರ ಶಿವಮೊಗ್ಗದ ಹೆಸರಾಂತ ಕ್ರಾಂತಿದೀಪ ಪತ್ರಿಕೆಯ ಸಂಪಾದಕರಾದ ಎನ್ ಮಂಜುನಾಥ್ ಅವರಿಗೆ ನೀಡಿ ಗೌರವಿಸಿದೆ. ಶಿವಮೊಗ್ಗ ಪತ್ರಿಕಾ ರಂಗದ ಹಿರಿಮೆ ಮತ್ತಷ್ಟು ಎತ್ತರಕ್ಕೆ ಜಿಗಿದಿದೆ. ಪ್ರತಿಷ್ಠಿತ ಮೊಹರೆ ಹಣಮಂತರಾಯ ಪ್ರಶಸ್ತಿಗೆ ಭಾಜನರಾಗಿರುವ ಕಾಂತಿದೀಪ ಪತ್ರಿಕೆಯ ಸಂಪಾದಕರು.ಹಿರಿಯ ಪತ್ರಕರ್ತರಾಗಿರುವ ಎನ್ ಮಂಜುನಾಥ್ ( ಮಂಜಣ್ಣ ) ಅವರಿಗೆ ನನ್ನ ಮತ್ತು ನನ್ನ ಪತ್ರಿಕೆಯ ಬಳಗದ ಹಾಗೂ ಓದುಗರ ಪರವಾಗಿ ಅಭಿನಂದನೆಗಳು. ನಿಮ್ಮ ಮುಂದಿನ ಪತ್ರಿಕಾ ರಂಗದ ಹಾದಿಯಲ್ಲಿ ಇನ್ನಷ್ಟೂ ಪ್ರಶಸ್ತಿಗಳು ನಿಮ್ಮ ಮುಡಿಗೇರಲಿ ಶುಭವಾಗಲಿ ಮಂಜಣ್ಣ.