ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಟಾನಕ್ಕೆ ಸಹರಿಸಬೇಕು : ಚಂದ್ರಭೂಪಾಲ್

ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಟಾನಕ್ಕೆ ಸಹರಿಸಬೇಕು : ಚಂದ್ರಭೂಪಾಲ್

ಅಶ್ವಸೂರ್ಯ/ಶಿವಮೊಗ್ಗ: ಗ್ಯಾರಂಟಿ ಯೋಜನೆಗಳನ್ನು ಪರಿಣಾಮಾರಿಯಾಗಿ ಅನುಷ್ಟಾನಗೊಳಿಸುವ ಮೂಲಕ ಸಾಮಾನ್ಯ ಜನರಿಗೆ ಅನುಕೂಲ ಮಾಡಿಕೊಡಬೇಕು. ಇದಕ್ಕೆ ಅಧಿಕಾರಿಗಳು ಸಹಕರಿಸಬೇಕೆಂದು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್ ತಿಳಿಸಿದರು.
ಗ್ಯಾರಂಟಿ ಯೋಜೆನಗಳ ಪರಿಣಾಮಕಾರಿ ಅನುಷ್ಟಾನ ಹಾಗೂ ಮೇಲ್ವಿಚಾರಣೆಗಾಗಿ ಶನಿವಾರ ಜಿಲ್ಲಾ ಪಂಚಾಯತ್‌ನಲ್ಲಿ ಕರೆಯಲಾಗಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನಷ್ಟಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಒಟ್ಟು 385195 ಮಹಿಳೆಯರು ನೋಂದಣಿಯಾಗಿದ್ದು 380997 ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗೆ ರೂ.2000 ಜಮಾ ಮಾಡಲಾಗಿದೆ. ಜೂನ್ ಮಾಹೆಯಲ್ಲಿ 380997 ಮಹಿಳೆಯರಿಗೆ ಒಟ್ಟು 761994000 ಹಣವನ್ನು ಜಮಾ ಮಾಡಲಾಗಿದೆ. ಆಧಾರ್ ಜೋಡಣೆ, ಹೆಸರು ಮಿಸ್‌ಮ್ಯಾಚ್ ಸೇರಿದಂತೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಎನ್‌ಪಿಸಿಐ ಫೇಲ್ ಆಗಿ 2767 ಫಲಾನುಭವಿಗಳಿಗೆ ಹಣ ಜಮಾ ಆಗಿರುವುದಿಲ್ಲವೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿರೂಪಣಾಧಿಕಾರಿ ಡಾ.ಸಂತೋಷ್ ಕುಮಾರ್ ತಿಳಿಸಿದರು.
ಅಧ್ಯಕ್ಷರು ಪ್ರತಿಕ್ರಿಯಿಸಿ, ಮುಂದಿನ ಸಭೆಯೊಳಗೆ ಎನ್‌ಪಿಸಿಐ ಫೇಲ್ ಆಗಿರುವ 2676 ಮಹಿಳೆಯರಿಗೆ ಯೋಜನೆಯ ರಾಷ್ಟ್ರೀಯತೆ ಮಾಡಲು ಪ್ರಯತ್ನಿಸಬೇಕು. ತಾಲ್ಲೂಕುವಾರು ಸಿಡಿಪಿಓ ಗಳಿಂದ ವರದಿ ತರಿಸಿಕೊಂಡು ಸಮಿತಿಗೆ ನೀಡಬೇಕು ಎಂದರು.
ಜಿ.ಪಂ ಸಿಇಓ ಹೇಮಂತ್ ಮಾತನಾಡಿ, ಎನ್‌ಪಿಸಿಐ ಫೇಲ್ ಆಗಿರುವುದಕ್ಕೆ ತಾಲ್ಲೂಕುವಾರು ಕಾರಣಗಳನ್ನು ಹುಡುಕಿ ಪ್ರಾಮಾಣಿಕವಾಗಿ ಸರಿಪಡಿಸುವ ಕೆಲಸ ಆಗಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಗೂ ಮರಣ ಹೊಂದಿದ ಫಲಾನುಭವಿಗಳ ಮಾಹಿತಿಯನ್ನು ಬ್ಯಾಂಕಿನಿಂದ ಪಡೆದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಶಕ್ತಿ ಯೋಜನೆಯಡಿ ಶಿವಮೊಗ್ಗ ವಿಭಾಗದಲ್ಲಿ ಈವರೆಗೆ 2.86 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಶೇ.60.3 ಮಹಿಳೆಯರು ಪ್ರಯಾಣ ಮಾಡಿದ್ದು 99.46 ಕೋಟಿ ಅಂದರೆ ಶೇ.42.7 ಆದಾಯ ಈ ಯೋಜನೆಯಿಂದ ಬಂದಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ದಿನೇಶ್ ಕುಮಾರ್ ಮಾಹಿತಿ ನೀಡಿದರು.

ಸಮಿತಿ ಸದಸ್ಯರು ಮಾತನಾಡಿ, ಎಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಿರುತ್ತದೋ ಅಲ್ಲಿ ಬಸ್ ನಿಲ್ಲಿಸುವುದಿಲ್ಲವೆಂಬ ದೂರು ಇದೆ. ಇದು ಆಗಬಾರದು ಎಂದರು.
ಶಿಕಾರಿಪುರ ತಾಲ್ಲೂಕು ಸಮಿತಿ ಅಧ್ಯಕ್ಷರು ಮಾತನಾಡಿ, ಪ್ರಸ್ತುತ ಶಿಕಾರಿಪುರ ಡಿಪೋದಲ್ಲಿ 35 ಬಸ್‌ಗಳಿದ್ದು ಪೂರ್ತಿ ಹಳೆಯ ಬಸ್‌ಗಳನ್ನ ನೀಡಲಾಗಿದೆ. ಬೆಳಿಗ್ಗೆ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದ್ದು ಇನ್ನೂ ಹೆಚ್ಚುವರಿ ಬಸ್ ರೂಟ್ ಮತ್ತು ಬಸ್‌ಗಳ ಅವಶ್ಯಕತೆ ಇದೆ. ಖಾಸಗಿ ಬಸ್‌ಗಳ ತೊಂದರೆ ನಿಲ್ಲಬೇಕು. ಶಿಕಾರಿಪುರದಲ್ಲಿ ಶಕ್ತಿ ಯೋಜನೆಯನ್ನು ಇನ್ನೂ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಕೋರಿದರು.
ಆಹಾರ ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ಅವಿನ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 389241 ಬಿಪಿಎಲ್ ಕಾರ್ಡುದಾರರು ಇದ್ದು 360012 ಫಲಾನುಭವಿಗಳು ಅನ್ನಭಾಗ್ಯ ಯೋಜನೆಯಡಿ ತಿಂಗಳಿಗೆ ಐದು ಕೆಜಿ ಅಕ್ಕಿ ಹಾಗೂ ರಾಜ್ಯದ 5 ಕೆಜಿ ಅಕ್ಕಿ ಬದಲಾಗಿ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ಪಡೆಯುತ್ತಿದ್ದು ಒಟ್ಟು 20.30 ಕೋಟಿ ಹಣವನ್ನು ಜೂನ್‌ವರೆಗೆ ಜಮಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಮಿತಿ ಸದಸ್ಯರು ಮಾತನಾಡಿ, ನ್ಯಾಯಬೆಲೆ ಅಂಗಡಿಗಳು ತಿಂಗಳ ಕೊನೆಯಲ್ಲಿ ಅದೂ 3 ರಿಂದ 4 ದಿನ ಮಾತ್ರ ತೆರೆದಿರುತ್ತವೆ. ಕೆಲವೊಮ್ಮೆ ಪಡಿತರ ಖಾಲಿಯಾಗಿದೆ ಎಂದು ಹೇಳಿ ಕಳಿಸುತ್ತಾರೆಂದು ದೂರಿದರು.
ಅಧ್ಯಕ್ಷರು ಮಾತನಾಡಿ, ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು ಓಪನಿಂಗ್ ಬ್ಯಾಲೆನ್ಸ್, ಮಾಹೆಯ ದಾಸ್ತಾನು ವಿವರಗಳನ್ನು ಪ್ರದರ್ಶಿಸಬೇಕೆಂದ ಸುತ್ತೋಲೆಯನ್ನು ಉಪನಿರ್ದೇಶಕರು ಹೊರಡಿಸಬೇಕೆಂದು ಸೂಚಿಸಿದರು.
ಉಪನಿರ್ದೇಶಕರು ಪ್ರತಿಕ್ರಿಯಿಸಿ, ದಾಸ್ತಾನು ಲಿಫ್ಟ್ ಆಗಿ ತಿಂಗಳ 10 ನೇ ತಾರೀಖಿನಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ನೀಡಲು ಆರಂಭವಾಗುತ್ತದೆ. ಪ್ರತಿ ದಿನ ಪಡಿತರ ನೀಡಬೇಕು. ಖಾಲಿಯಾಗಿದೆ ಎಂದು ವಾಪಸ್ ಕಳುಹಿಸುವ ಹಾಗಿಲ್ಲ. ಅಂತಹ ಪ್ರಕರಣಗಳಿದ್ದರೆ ತಿಳಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ಜಿಲ್ಲೆಯಲ್ಲಿ ಜಾಗೃತ ಸಮಿತಿ ರಚನೆಯಾಗಿದ್ದು ಅದೂ ಕೂಡ ನ್ಯಾಯಬೆಲೆ ಅಂಗಡಿಗಳ ಮೇಲ್ವಿಚಾರಣೆ ಮಾಡುತ್ತದೆ ಎಂದು ತಿಳಿಸಿದರು.

ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 537616 ಗ್ರಾಹಕರಿದ್ದು, 475802 ಗ್ರಾಹಕರು ಯೋಜನೆಯ ಸದುಪಯೋಗ ಪಡೆಯುತ್ತಿದ್ದು ರೂ.226.49 ಕೋಟಿ ಸಹಾಯಧನ ಪಡೆಯಲಾಗಿದೆ ಎಂದು ಮೆಸ್ಕಾಂ ಅಧೀಕ್ಷಕ ಅಭಿಯಂತರ ಕೃಷ್ಣಮೂರ್ತಿ ತಿಳಿಸಿದರು.
ಯುವ ನಿಧಿ ಯೋಜನೆಯಡಿ ಈವರೆಗೆ 5636 ಅಭ್ಯರ್ಥಿಗಳು ನೋಂದಣಿಯಾಗಿದ್ದು ಜುಲೈ ಮಾಹೆವರೆಗೆ 1634 ಫಲಾನುಭವಿಗಳಿಗೆ ರೂ.48,82,000 ಹಣ ವರ್ಗಾವಣೆ ಮಾಡಲಾಗಿದೆ ಎಂದು ಮಂಜುನಾಥ್ ತಿಳಿಸಿದರು
ತಾಲ್ಲೂಕು ಸಮಿತಿಗಳ ಅಧ್ಯಕ್ಷರು, ಸದಸ್ಯರು ಮಾತನಾಡಿ, ಭದ್ರಾವತಿ, ಶಿಕಾರಿಪುರ ಸೇರಿದಂತೆ ತಾಲ್ಲೂಕುಗಳಲ್ಲಿ ಸಮಿತಿಯ ಕಚೇರಿಗಳಲ್ಲಿ ಮೂಲಭೂತ ಸೌಕರ್ಯವಿಲ್ಲ. ಹಾಗೂ ಓರ್ವ ಡಾಟಾ ಎಂಟ್ರಿ ಆಪರೇಟರ್, ಕಂಪ್ಯೂಟರ್ ವ್ಯವಸ್ಥೆ ಮಾಡಿಕೊಡಬೇಕು. ತಾಲ್ಲೂಕುಗಳಲ್ಲಿನ ಗ್ಯಾರಂಟಿ ಯೋಜನೆ ಕುರಿತು ಕುಂದು ಕೊರತೆ ಆಲಿಸಲು ಹೆಲ್ಪ್ ಲೈನ್ ರೀತಿಯಲ್ಲಿ ಕೆಲಸ ಮಾಡಲು ಅನುಕೂಲ ಮಾಡಿ ಕೊಡಬೇಕೆಂದು ತಿಳಿಸಿದರು.

ಜಿ.ಪಂ ಸಿಇಓ ಮಾತನಾಡಿ, ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯಡಿ ಎನ್‌ಪಿಸಿಐ ಫೇಲ್ ಆಗಿರುವ ಫಲಾನುಭವಿಗಳನ್ನು ಲಿಂಕ್ ಮಾಡಬೇಕು. ತಾಲ್ಲೂಕುಗಳ ಕಚೇರಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಇಓ ಗಳು ಒದಗಿಸಲು ಕ್ರಮ ವಹಿಸಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ದಾಸ್ತಾನು ವಿವರ ಹಾಕಲು ಕ್ರಮ ಹಾಗೂ ಯುವ ನಿಧಿ ಯೋಜನೆಯಡಿ ಜುಲೈ ಮಾಹೆಯಲ್ಲಿ ಸೊರಬ ಮತ್ತು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಫಲಾನುಭವಿಗಳ ವಿವರ ಸಮರ್ಪಕವಾಗಿಲ್ಲ. ಈ ಮಾಹಿತಿಯನ್ನು ಒಂದು ವಾರದೊಳಗೆ ನೀಡುವಂತೆ ಸೂಚಿಸಿದರು.
ಹಾಗೂ ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಅಧ್ಯಕ್ಷರಾದ ಸೂರಜ್ ಹೆಗಡೆಯವರು, ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಪಂಚಾಯ್ತಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ತಿಳಿದು ಪಟ್ಟಿ ಮಾಡಿ ತಿಳಿಸುವಂತೆ ಸೂಚಿಸಿದ್ದಾರೆಂದು ತಿಳಿಸಿದರು.
ಸಭೆಯಲ್ಲಿ ತಾಲ್ಲೂಕುಗಳ ಗ್ಯಾರಂಟಿ ಯೋಜನೆಗಳ ಅನಷ್ಟಾನ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, 5 ಗ್ಯಾರಂಟಿ ಯೋಜನೆಗಳ ಅನುಷ್ಟಾನ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!