ಯುಟ್ಯೂಬ್ ನೋಡಿ ಖೋಟಾ ನೋಟು ಪ್ರಿಂಟ್ ಮಾಡಿದ ಖದೀಮರು: ನಾಲ್ವರು ಅಂದರ್!
ಅಶ್ವಸೂರ್ಯ/ಶಿವಮೊಗ್ಗ: ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ಯುಟ್ಯೂಬ್ ನಲ್ಲಿ ಖೋಟಾ ನೋಟು ಪ್ರಿಂಟ್ ಮಾಡುವುದು ಹೇಗೆ ಎನ್ನುವುದನ್ನು ಕಲಿತ ನಾಲ್ವರು ಖದೀಮರ ತಂಡ 500 ರೂಪಾಯಿ ಮುಖ ಬೆಲೆಯ ಖೋಟಾನೋಟು ಪ್ರಿಂಟ್ ಮಾಡಿ ಅದನ್ನು ಚಲಾವಣೆಗೆ ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಸೊಮವಾರ ಖೆಡ್ಡಕ್ಕೆ ಕೆಡವಿಕೊಂಡು ಬಂಧಿಸಿ ಜೈಲು ಹಾದಿ ತೋರಿಸಿದ್ದಾರೆ. ಬಂಧಿತರಿಂದ 427 ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.
ಬಂಧಿತರು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕೊಳತ್ತೂರಿನ ವಿ.ಪ್ರಿಯೇಶ್ (38), ಮಲ್ಲ ಗ್ರಾಮದ ಮುಳಿಯಾರಿನ ವಿನೋದ್ ಕುಮಾರ್ ಕೆ. (33), ಪೆರಿಯದ ಕುನಿಯಾ ವಡಂಕುಂಕರದ ಅಬ್ದುಲ್ ಖಾದರ್ ಎಸ್.ಎ (58) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಬೆಳಿಯೂರು ಕಟ್ಟೆಯ ಆಯೂಬ್ ಖಾನ್ (51) ಎಂದು ಗುರುತಿಸಲಾಗಿದೆ. ‘ಆರೋಪಿಗಳಿಂದ ಸುಮಾರು 2.13 ಲಕ್ಷ ಖೋಟಾನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಈಗಾಗಲೇ ಖೋಟಾ ನೋಟುಗಳನ್ನು ಚಲಾವಣೆ ಮಾಡಿದ್ದಾರೊ ಇಲ್ಲವೋ ಎನ್ನುವುದು ಇನ್ನಷ್ಟೆ ತನಿಖೆಯಿಂದ ಬಯಲಾಗಬೇಕಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಪ್ರಿಯೇಶ್ ಕಾಸರಗೋಡು ಜಿಲ್ಲೆಯ ಚೆರ್ಕಳದಲ್ಲಿ ಮುದ್ರಣಾಲಯವನ್ನು ಹೊಂದಿದ್ದು, ಅಲ್ಲಿ ಖೋಟಾ ನೋಟು ಮುದ್ರಿಸುತ್ತಿದ್ದ. ಅದಕ್ಕೆ ಬೇಕಾದ ಕಚ್ಚಾ ಸಾಮಾಗ್ರಿಗಳನ್ನು ಕೇರಳದ ಕೋಯಿಕ್ಕೋಡ್ ಮತ್ತು ದೆಹಲಿಯಿಂದ ಖರೀದಿಸಿದ್ದ. ಸಾಲದ ಸುಳಿಗೆ ಸಿಲುಕಿದ್ದ ಆತ ಖೋಟಾ ನೋಟುಗಳನ್ನು ತಯಾರಿಸುವ ವಿಧಾನವನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸಿದ್ದ. ಸುಲಭದಲ್ಲಿ ಹಣ ಸಂಪಾದಿಸುವ ಉದ್ದೇಶದಿಂದ ನಾಲ್ಕು ತಿಂಗಳಿನಿಂದ ಈ ಕೃತ್ಯದಲ್ಲಿ ತೊಡಗಿದ್ದ. ಆತನಿಗೆ ವಿನೋದ್ ಪರಿಚಯವಿತ್ತು. ವಿನೋದ್ ಮೂಲಕ ಅಬ್ದುಲ್ ಖಾದರ್ ಹಾಗೂ ಆತನ ಮೂಲಕ ಆಯೂಬ್ ಖಾನ್ ಪರಿಚಯವಾಗಿದ್ದರು.
ಆರೋಪಿಗಳು ಖೋಟಾ ನೋಟುಗಳನ್ನು ಪ್ರಿಯೇಶ್‌ನಿಂದ ತರಿಸಿಕೊಂಡು ನಗರದಲ್ಲಿ ಚಲಾವಣೆ ಮಾಡಲು ಯತ್ನಿಸಿದ್ದರಂತೆ.! ಪ್ರಿಯೇಶ್ ₹ 25 ಸಾವಿರ ಪಡೆದು, ಪ್ರತಿಯಾಗಿ ₹ 500 ಮುಖ ಬೆಲೆಯ ಖೋಟಾ ನೋಟು ( ₹ 1 ಲಕ್ಷ ) ನೀಡಲು ಒಪ್ಪಿದ್ದ. ಈ ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆ ಇದ್ದು. ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಂಡಿದೆ ಎಂದರು.
ಅವರು ಮುದ್ರಿಸಿದ್ದ ಖೋಟಾ ನೋಟುಗಳು ಅಸಲಿ ನೋಟಿನಂತೆಯೇ ತೋರುತ್ತಿವೆ. ಅದನ್ನು ಬರಿಗಣ್ಣಿನಲ್ಲಿ ಪತ್ತೆಹಚ್ಚುವುದು ಬಹಳ ಕಷ್ಟಕರವಾಗಿದ್ದು ಗುಣಮಟ್ಟದ ಕಾಗದ ಹಾಗೂ ಶಾಯಿಯನ್ನು ಬಳಸಿ ಅವುಗಳನ್ನು ಮುದ್ರಿಸಲಾಗಿದೆ. ಆದರೆ ನೋಟು ಎಣಿಸುವ ಯಂತ್ರಗಳಿಂದ ಅವುಗಳನ್ನು ಪತ್ತೆ ಹಚ್ಚಬಹುದಾಗಿದೆ ಎಂದು ಪೋಲಿಸರು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳೂರು ಪೋಲಿಸರು ಬಾರಿ ಅನಾಹುತ ಆಗುವ ಮೊದಲೇ ಖೋಟಾ ನೋಟು ಖದೀಮರನ್ನು ಬಂಧಿಸಿ ಜೈಲಿಗಟ್ಟಿರುವುದನ್ನು ಮೆಚ್ಚಲೆ ಬೇಕಿದೆ..