ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ (ರಿ.) ಸುರತ್ಕಲ್ ಇವರ ಆಶ್ರಯದಲ್ಲಿ ಯಶಸ್ವಿಯಾಗಿ ಜರುಗಿದ ರಕ್ತದಾನ ಶಿಬಿರ
ಅಶ್ವಸೂರ್ಯ/ಶಿವಮೊಗ್ಗ: ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ (ರಿ.) ಸುರತ್ಕಲ್ ಇದರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಭಾರತೀಯ ಅಂಚೆ ಇಲಾಖೆ ಮಂಗಳೂರು ಇವರ ಸಹಯೋಗದೊಂದಿಗೆ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮ ವಿದ್ಯಾದಾಯಿನೀ ಪ್ರೌಢಶಾಲೆಯ ವಜ್ರಮಹೋತ್ಸವ ಸಭಾಂಗಣದಲ್ಲಿ ಯಶಸ್ವಿಯಾಗಿ ಜರಗಿತು.
ಸುರತ್ಕಲ್ ನ ಡೆಂಟಲ್ ಸರ್ಜನ್ ರೋ. ಡಾ. ಅರವಿಂದ್ ಭಟ್ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದಾನಗಳಲ್ಲಿ ರಕ್ತದಾನ ಮಹಾದಾನ. ಜನರ ಜೀವ ರಕ್ಷಣೆಗೆ ರಕ್ತ ಅತ್ಯಮೂಲ್ಯವಾಗಿದ್ದು ರಕ್ತದ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ರಕ್ತದಾನ ಮಾಡುವುದರ ಮೂಲಕ ಎಲ್ಲರೂ ಜನರ ಅಮೂಲ್ಯವಾದ ಜೀವ ರಕ್ಷಣೆಗೆ ಮುಂದಾಗಬೇಕು ಈ ನಿಟ್ಟಿನಲ್ಲಿ ಸಂಸ್ಥೆಯ ಈ ಒಂದು ರಕ್ತದಾನ ಶಿಬಿರ ಶ್ಲಾಘನೀಯವೆಂದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ, ಹಿಂದೂ ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಶ್ರೀರಂಗ ಎಚ್ ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರತಿಯೊಂದು ಚಟುವಟಿಕೆಗಳಿಗೆ ಸದಾ ಬೆನ್ನೆಲುಬಾಗಿ ನಿಂತು ಸಹಕರಿಸುತ್ತಿರುವ ಬಿಎಎಸ್ಎಫ್ ಸಂಸ್ಥೆಯನ್ನು ಅಭಿನಂದಿಸಲಾಯಿತು.
ಅಭಿನಂದನೆ ಸ್ವೀಕರಿಸಿದ ಸೀನಿಯರ್ ಮ್ಯಾನೇಜರ್ ಸಂತೋಷ್ ಪೈ ಶುಭಹಾರೈಸಿದರು.
50 ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ಸಾಧಕರುಗಳಾದ ರಾಜೇಶ್ ಕದ್ರಿ, ಯೋಗೀಶ್ ದೇವಾಡಿಗ ಪಡುಪದವು, ಸಂದೀಪ್ ಪೂಜಾರಿ ಹೊಸಬೆಟ್ಟು ಇವರುಗಳನ್ನು ಸನ್ಮಾನಿಸಲಾಯಿತು.
ರಕ್ತದಾನ ಶಿಬಿರದ ಬಗ್ಗೆ ಕೆಎಂಸಿ ಆಸ್ಪತ್ರೆ ವಿಭಾಗದ ಮೆಡಿಕಲ್ ಆಫೀಸರ್ ಡಾ. ಅಗಸ್ಟಿನ್ ಮತ್ತು ಅಂಚೆ ಇಲಾಖೆಯ ವಿವಿಧ ಸೌಲಭ್ಯಗಳ ಬಗ್ಗೆ ಪ್ರದೀಪ್ ಕುಮಾರ್ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿ ಮಾತನಾಡಿದರು.
ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 100 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದು 79 ಮಂದಿ ರಕ್ತದಾನ ಮಾಡಿದರು.
ಅಂಚೆ ಜನ ಸಂಪರ್ಕ ಆಧಾರ್ ತಿದ್ದುಪಡಿ ಅಭಿಯಾನದಲ್ಲಿ ಸುಮಾರು 65 ಮಂದಿ ಸದುಪಯೋಗ ಪಡೆದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಹಾಪೋಷಕರಾದ ಎಸ್. ಮಹೇಶ್ ಕುಮಾರ್ , ರಕ್ತದಾನ ಶಿಬಿರದ ಸಂಚಾಲಕರಾದ ನಾಗರಾಜ್ ಕಡಂಬೋಡಿ, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಪ್ರಸಾದ್ ಪ್ರಾರ್ಥಿಸಿದರು. ಕಾರ್ಯದರ್ಶಿ ಕಿರಣ್ ಆಚಾರ್ಯ ಸ್ವಾಗತಿಸಿ ನಿರೂಪಿಸಿದರು.