ಶಿವಮೊಗ್ಗ ಲಯನ್ಸ್ ಮಡಿಲಿಗೆ ಅಭಿನವ್ ಮನೋಹರ್
ಈ ಸಾಲಿನ ಮಹಾರಾಜ ಟ್ರೋಫಿ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಹಿಂದಿಕ್ಕಿದ ಅಭಿನವ್ ಮನೋಹರ್…!! ಶಿವಮೊಗ್ಗ ಲಯನ್ಸ್ ಮಡಿಲಿಗೆ.
ಮಹಾರಾಜ ಟ್ರೋಫಿ 2023 ಟಿ20 ಕ್ರಿಕೆಟ್: ಮಯಾಂಕ್ ಅಗರವಾಲ್ ಮತ್ತು ಮನೋಜ್ ಬಾಂಢಗೆ ಉತ್ತಮ ಮೌಲ್ಯ ದೊರಕಿದ್ದರು ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗಿದ್ದು ಮಾತ್ರ ಅಭಿನವ್ ಮನೋಹರ್.
ಬೆಂಗಳೂರು: ಭರ್ಜರಿ ಹೊಡೆತಗಳ ಆಟಗಾರನೆಂದೆ ಖ್ಯಾತಿ ಹೊಂದಿರುವ ಅಭಿನವ್ ಮನೋಹರ್ ಶನಿವಾರ ನಡೆದ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಆಟಗಾರರ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಹಿಂದಿಕ್ಕಿ ಅತ್ಯಧಿಕ ಮೊತ್ತಕ್ಕೆ ಬಿಡ್ ಅದರು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಆಡಿರುವ ಬೆಂಗಳೂರಿನ ಅಭಿನವ್ ಅವರನ್ನು ಶಿವಮೊಗ್ಗ ಲಯನ್ಸ್ ತಂಡವು ₹ 15 ಲಕ್ಷ ಮೌಲ್ಯ ನೀಡಿ ಖರೀದಿಸಿತು. ಕಳೆದ ಐಪಿಎಲ್‌ನಲ್ಲಿ ಅವರು ಗುಜರಾತ್ ಟೈಟನ್ಸ್ ತಂಡದಲ್ಲಿ ಆಡಿದ್ದರು. 28 ವರ್ಷದ ಬಲಗೈ ಬ್ಯಾಟ್ಸ್ಮನ್ ಆಗಿರುವ ಅಭಿನವ್ ಮೂರು ಲಿಸ್ಟ್ ಎ ಪಂದ್ಯಗಳ ಜೋತೆಗೆ 29 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಹರಾಜು ಪ್ರಕ್ರಿಯೆಯಲ್ಲಿ ಅಭಿನವ್ ಮನೋಹರ್ ಅವರನ್ನು ಖರೀದಿಸಲು ಶಿವಮೊಗ್ಗ ಮತ್ತು ಹುಬ್ಬಳ್ಳಿ ಟೈಗರ್ಸ್ ತಂಡಗಳ ನಡುವೆ ಬಾರಿ ಪೈಪೋಟಿಯ ನಡುವೆ ಶಿವಮೊಗ್ಗ ಮೇಲುಗೈ ಸಾಧಿಸಿತು.
ಈ ಹಾದಿಯಲ್ಲಿ ಅಭಿನವ್ ಅವರು ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಆಗಿ ತಂಡವನ್ನು ಪ್ರತಿನಿಧಿಸಿದ್ದ ಮಾಯಂಕ್ ಅಗರವಾಲ್ ಅವರನ್ನೂ ಹಿಂದಿಕ್ಕಿ ಹೆಚ್ಚಿನ ಮೌಲ್ಯಕ್ಕೆ ಬಿಡ್ ಆಗಿದ್ದಾರೆ. ಕರ್ನಾಟಕ ತಂಡದ ನಾಯಕರೂ ಆಗಿರುವ ಮಾಯಂಕ್ ಅಗರವಾಲ್ ಹದಿನಾಲ್ಕು ಲಕ್ಷ ಮೌಲ್ಯಕ್ಕೆ ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ಸೇರ್ಪಡೆಯಾದರು. ಐಪಿಎಲ್‌ನಲ್ಲಿ ಮಿಂಚಿರುವ ದೇವದತ್ತ ಪಡಿಕ್ಕಲ್ ಅವರನ್ನು ಗುಲ್ಬರ್ಗ ಮಿಸ್ಟಿಕ್ಸ್ ತಂಡವು ಹದಿಮೂರು ಲಕ್ಷಕ್ಕೆ ತನ್ನದಾಗಿಸಿಕೊಂಡಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿರುವ ಮಧ್ಯಮವೇಗಿ ವೈಶಾಖ ವಿಜಯಕುಮಾರ್ ಕೂಡ ಎಂಟು ಲಕ್ಷದ ಎಂಬತ್ತು ಸಾವಿರ ರೂಪಾಯಿಗೆ ಗುಲ್ಬರ್ಗ ತಂಡದ ಪಾಲಾದರು
ಪ್ರತಿಷ್ಠಿತ ಮೈಸೂರು ವಾರಿಯರ್ಸ್ ತಂಡವು ಗಾಯದಿಂದ ಚೇತರಿಸಿಕೊಂಡಿರುವ ಉತ್ತಮ ಬೌಲರ್ ಪ್ರಸಿದ್ಧ ಕೃಷ್ಣ ಅವರನ್ನು ಏಳು ಲಕ್ಷದ ನಲವತ್ತು ಸಾವಿರಕ್ಕೆ ಖರೀದಿಸಿತು. ಮೈಸೂರಿನ ಹೆಮ್ಮೆಯ ಆಟಗಾರ ಜಗದೀಶ್ ಸುಚೇತ್ ಎಂಟು ಲಕ್ಷ ನಾಲ್ಕು ಸಾವಿರಕ್ಕೆ ಹಾಗೂ ಅನುಭವಿ ಬ್ಯಾಟ್ಸ್ ಮನ್ ಕರುಣ್ ನಾಯರ್ ಅವರನ್ನು ಆರು ಲಕ್ಷದ ಎಂಟು ಸಾವಿರಕ್ಕೆ ಮೈಸೂರು ತಂಡದ ಪಾಲಾದರು.
ಮನಮೋಹಕ ಆಟಗಾರ ಭಾರತ ತಂಡವನ್ನು ಪ್ರತಿನಿಧಿಸಿದಂತ ಮನೀಷ್ ಪಾಂಡೆ ಅವರನ್ನು ಹುಬ್ಬಳ್ಳಿ ಟೈಗರ್ಸ್ ತಂಡವು ಹತ್ತು ಲಕ್ಷದ ಆರು ಸಾವಿರಕ್ಕೆ ತನ್ನದಾಗಿಸಿಕೊಂಡಿತು. ಇನ್ನೂ ಪ್ರಸಿದ್ಧ ಆಲ್‌ರೌಂಡರ್ ಮನೋಜ್ ಬಾಂಢ ಅವರನ್ನು ಪಡೆಯಲು ಮೈಸೂರು ಮತ್ತು ಗುಲ್ಬರ್ಗ ತಂಡಗಳ ನಡುವೆ ಸಾಕಷ್ಟು ಪೈಪೋಟಿ ನೆಡೆದು ಕೊನೆ ಕ್ಷಣದಲ್ಲಿ ಮೈಸೂರು ತಂಡವು ಒಂಬತ್ತು ಲಕ್ಷ ಮೌಲ್ಯಕ್ಕೆ ಮನೋಜ್ ಅವರನ್ನು ತನ್ನದಾಗಿಸಿಕೊಂಡಿತು. ಕಳೆದ ಸಾಲಿನ ಐಪಿಎಲ್‌ನಲ್ಲಿ ಮನೋಜ್ ಆರ್‌ಸಿಬಿ ತಂಡದಲ್ಲಿದ್ದರು. ಆದರೆ ಅವರು ಈ ಹರಾಜಿನಲ್ಲಿ ಬಿ ಗುಂಪಿನಲ್ಲಿದ್ದರು.
ಚಿನ್ನಸ್ವಾಮಿ ಕ್ರೀಡಾಂಗಣದ ಪಡುಸಾಲೆಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸುಮಾರು ಏಳನೂರು ಆಟಗಾರರು ಸ್ಪರ್ಧೆಯಲ್ಲಿದ್ದರು. ಒಟ್ಟು ಆರು ಫ್ರ್ಯಾಂಚೈಸಿಗಳು ಬಿಡ್ ನಲ್ಲಿ ಭಾಗವಹಿಸಿದ್ದರು. ಪ್ರತಿ ತಂಡವೂ 18 ಆಟಗಾರರನ್ನು ಖರೀದಿಸಿದರು.
ಒಟ್ಟು ನಾಲ್ಕು ಗುಂಪುಗಳಲ್ಲಿ ಆಟಗಾರರನ್ನು ವಿಂಗಡಿಸಲಾಗಿತ್ತು. ಎ ಗುಂಪಿನಲ್ಲಿ ಭಾರತ ಮತ್ತು ಐಪಿಎಲ್‌ನಲ್ಲಿ ಆಡಿರುವ ಆಟಗಾರರು ಇದ್ದರೆ. ಬಿ ಗುಂಪಿನಲ್ಲಿ ಬಿಸಿಸಿಐ ಆಯೋಜಿತ ರಾಜ್ಯ ಟೂರ್ನಿಗಳಾದ ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ಮತ್ತು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡಿದಂತಹ ಆಟಗಾರರು ಇದ್ದರು. ಸಿ ಗುಂಪಿನಲ್ಲಿ ಬಿಸಿಸಿಐನ ಇನ್ನಿತರ ಟೂರ್ನಿಗಳಲ್ಲಿ ಆಡಿದ ಆಟಗಾರರು ಹಾಗೂ ಡಿ ಗುಂಪಿನಲ್ಲಿ ಕೆಎಸ್‌ಸಿಎನಲ್ಲಿ ನೋಂದಾಯಿತ ಆಟಗಾರರು ಸ್ಥಾನ ಪಡೆದಿದ್ದರು.
ಆಗಸ್ಟ್ 13 ರಿಂದ ಕರ್ನಾಟಕದ ಪ್ರತಿಷ್ಠಿತ
ಮಹಾರಾಜ ಟ್ರೋಫಿ ಪಂದ್ಯಾವಳಿಗಳು ಆರಂಭವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ ಎಂದು ತಿಳಿದು ಬಂದಿದೆ.
ಸುಧೀರ್ ವಿಧಾತ, ಶಿವಮೊಗ್ಗ