ಕೆಲಸ ಕೊಡಿಸುವುದಾಗಿ ಮಹಿಳೆ ಮಾರಾಟದ ಶಂಕೆ: ಭದ್ರಾವತಿಯ ಮೂವರ ವಿರುದ್ಧ ಎಫ್ಐಆರ್ ದಾಖಲು.!
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ದಾವಣಗೆರೆ: ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆ ಮಾರಾಟ ಮಾಡಿದ ಶಂಕೆ ವ್ಯಕ್ತವಾಗಿದ್ದು,ಈ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಕೇಸು ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ರೋಜಿ ಲಿನಾ(43), ಮಲ್ಲಿಕಾರ್ಜುನ(47), ಲೋಕೇಶ(35) ಎನ್ನುವ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಇವರು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಗ್ರಾಮವೊಂದರ ಮಹಿಳೆಯನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಮಾರಾಟ ಮಾಡಿದ್ದಾರೆ ಎಂದು ಮಹಿಳೆಯ ಸಹೋದರ ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪತಿ ನಿಧನದ ನಂತರ ಮಹಿಳೆ ಕಲ್ಯಾಣ ಮಂಟಪಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದರಂತೆ. ಮೇ 12ರಂದು ಮನೆಯಿಂದ ಶಿವಮೊಗ್ಗಕ್ಕೆ ತೆರಳಿದ್ದ ಅವರು ವಾಪಸ್ ಬಂದಿರಲಿಲ್ಲ. ಬೇರೊಬ್ಬರ ಮೊಬೈಲ್ ನಿಂದ ಸಹೋದರನಿಗೆ ಮಹಿಳೆ ಕರೆ ಮಾಡಿದ್ದಾರೆ. ಒಂದು ಲಕ್ಷ ರೂಪಾಯಿಗೆ ಸೊಲ್ಲಾಪುರದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದು, ಹಣ ಕೊಟ್ಟರಷ್ಟೇ ಬಿಡುವುದಾಗಿ ಸಹೋದರನಿಗೆ ಮಹಿಳೆ ಹೇಳಿದ್ದಾರೆ. ಮಾಹಿತಿ ಆಧರಿಸಿ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.