ಕಾಂಗ್ರೆಸ್ ನಿಂದ ಅಯನೂರು ಮಂಜುನಾಥ್ ಗೆ ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್, ಒಗ್ಗಟ್ಟಿನಿಂದ ಗೆಲ್ಲಿಸಿಕೊಂಡು ಬರುತ್ತೇವೆ: ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್
ನೈರುತ್ಯ ಪದವೀಧರ ಕ್ಷೇತ್ರಕ್ಕೆ ಅಯನೂರು ಮಂಜುನಾಥ್ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಘೋಷಿಸಿದೆ. ಅಯನೂರು ಅವರ ಗೆಲುವಿಗಾಗಿ ಪಕ್ಷದ ಪ್ರತಿಯೊಬ್ಬ ಸದಸ್ಯರು ಒಟ್ಟಾಗಿ ಶ್ರಮಿಸುತ್ತೇವೆ. ಅವರ ಗೆಲುವು ಖಚಿತ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಇಂದು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಅವರು ಇಂದು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿ ವಿಧಾನಪರಿಷತ್ ಚುನಾವಣೆ ದಿನಾಂಕವನ್ನು ಘೋಷಣೆ ಮಾಡುವ ಮೊದಲೇ ಕಾಂಗ್ರೆಸ್ ಪಕ್ಷ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ,
ಆಯನೂರು ಮಂಜುನಾಥ್ ಈ ಹಿಂದೆ ಇದೇ ಕ್ಷೇತ್ರದಿಂದ ಗೆದ್ದಂತವರು,ಹಾಗಾಗಿ ಇದು ಅವರ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.ಇದೆ ನೈರುತ್ಯ ಕ್ಷೇತ್ರಕ್ಕೆ ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ಎಸ್.ಪಿ.ದಿನೇಶ್ ಕೂಡ ಇದ್ದರು. ಈಗ ಕಾಂಗ್ರೆಸ್ ಹೈಕಮಾಂಡ್ ಆಯನೂರು ಮಂಜುನಾಥ್‌ರವರಿಗೆ ಟಿಕೇಟ್ ನೀಡಿದೆ. ಪಕ್ಷದ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು ಹಾಗಾಗಿ ಎಲ್ಲರೂ ಒಗ್ಗಟ್ಟಾಗಿ ಅಯನೂರು ಮಂಜುನಾಥ್ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಆಯನೂರು ಮಂಜುನಾಥ್ ಶಿಕ್ಷಕರ ಪರವಾಗಿ ಪದವೀಧರರ ಪರವಾಗಿ, ಕಾರ್ಮಿಕರ ಪರವಾಗಿ ಯಾವ ಪಕ್ಷದಲ್ಲಿದ್ದರು ಧ್ವನಿ ಎತ್ತಿದ್ದಾರೆ ಈ ಕ್ಷಣದ ವರೆಗೂ ಧ್ವನಿ ಎತ್ತುತ್ತಲೆ ಇದ್ದಾರೆ ಹಾಗಾಗಿ ಗೆಲುವು ಅವರ ಪರವಾಗಿದೆ ಎಂದರು.
ಟಿಕೆಟ್ ಸಿಕ್ಕ ಸಂತೋಷದಲ್ಲಿದ್ದ ಅಭ್ಯರ್ಥಿ ಆಯನೂರು ಮಂಜುನಾಥ್ ಮಾತನಾಡಿ, ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಮಲ್ಲಿಕಾರ್ಜುನ ಖರ್ಗೆ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ 6 ಜಿಲ್ಲೆಗಳ ಶಾಸಕರು, ಮುಖಂಡರು, ಉಸ್ತುವಾರಿ ಸಚಿವರುಗಳು ಎಲ್ಲರಿಗೂ ನನ್ನ ಕೃತಜ್ಞತೆಗಳು ಎಂದರು.
ಎಲ್ಲರ ಸಹಕಾರದಿಂದ ನನಗೆ ಟಿಕೇಟ್ ಸಿಕ್ಕಿದೆ. ಅವರ ಭರವಸೆಯನ್ನು ಉಳಿಸಿಕೊಳ್ಳುವೆ. ನನ್ನ ಗೆಳೆಯ ಎಸ್.ಪಿ.ದಿನೇಶ್ ಅವರು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದರು ಅವರಿಗೆ ಟಿಕೇಟ್ ಸಿಕ್ಕರೆ ನಾನು ಅವರ ಪರ ನಿಂತು ಗೆಲ್ಲಿಸುತ್ತೇನೆ ಎಂದು ಹೇಳಿದ್ದೆ, ಈಗ ನನಗೆ ಟಿಕೇಟ್ ಸಿಕ್ಕಿದೆ
ಅವರನ್ನು ನಾನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ ನನ್ನ ಪರವಾಗಿ ಅವರು ಕೆಲಸ ಮಾಡುತ್ತಾರೆ. ಎಲ್ಲರು ಒಟ್ಟಾಗಿ ಸೇರಿ ಕೆಲಸ ಮಾಡುತ್ತೇವೆ. ನಾನು ಈ ಬಾರಿ ಗೆಲ್ಲುತ್ತೇನೆ. ಎದುರಾಳಿ ಯಾರು ಎಂಬುವುದು ಮುಖ್ಯವಲ್ಲ .ನನ್ನ ಗೆಲ್ಲುವಷ್ಟೇ ಮುಖ್ಯ ಅಂದರು. ಲೋಕಸಭಾ ಚುನಾವಣೆಗೆ ನಾವು ಭರ್ಜರಿ ಪ್ರಚಾರವನ್ನು ಆರಂಭಿಸಿದ್ದೇವೆ ಸಹೋದರಿ ಗೀತಾ ಶಿವರಾಜ್‌ಕುಮಾರ್ ಅತ್ಯಂತ ಉತ್ಸಾಹದಲ್ಲಿದ್ದಾರೆ ಅವರಿಗೆ ಎಲ್ಲಾ ಕಡೆ ಅಭೂತಪೂರ್ವ ಸ್ವಾಗತ ದೊರೆಯುತ್ತಿದೆ.
ಪ್ರಚಾರ ತೀವ್ರತೆ ಕಂಡುಕೊಂಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಯೊಬ್ಬರು ಹುರುಪಿನಿಂದ ಪ್ರಚಾರ ಕಾರ್ಯಕ್ಕೆ ಇಳಿದಿದ್ದಾರೆ ಗೆಲುವಿಗೆ ಒಳ್ಳೆಯ ವಾತಾವರಣವಿದೆ. ಗೀತಾ ಶಿವರಾಜ್‌ಕುಮಾರ್ ಅವರನ್ನು ಖಂಡಿತಾ ಗೆಲ್ಲಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎನ್.ರಮೇಶ್, ಚಂದ್ರಭೂಪಾಲ್, ಎಸ್.ಟಿ.ಚಂದ್ರಶೇಖರ್, ಎಸ್.ಕೆ.ಮರಿಯಪ್ಪ, ವೈ.ಹೆಚ್.ನಾಗರಾಜ್, ಎಸ್.ಪಿ.ಶೇಷಾದ್ರಿ, ಧೀರರಾಜ್ ಹೊನ್ನಾವಿಲೆ, ಜಿ.ಪದ್ಮನಾಭ್, ಶಿ.ಜು.ಪಾಶ, ಎನ್.ಡಿ.ಪ್ರವೀಣ್‌ಕುಮಾರ್, ಟಿ.ನೇತ್ರಾವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.