WPL ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಬಗ್ಗುಬಡಿದ ಆರ್​ಸಿಬಿ : ಈ ಬಾರಿ ಕಪ್ ಗೆದ್ದಾಯ್ತು

WPL ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಬಗ್ಗುಬಡಿದ ಆರ್​ಸಿಬಿ : ಈ ಬಾರಿ ಕಪ್ ಗೆದ್ದಾಯ್ತು

ASHWASURYA / SHIVAMOGGA

SUDHIR VIDHATA

ಅಶ್ವಸೂರ್ಯ/ಶಿವಮೊಗ್ಗ: ವುಮೆನ್ಸ್ ಪ್ರೀಮಿಯರ್ ಲೀಗ್ (WPL) ನ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡವು ದೆಹಲಿಯ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಬಗ್ಗುಬಡಿದಿದೆ ಸಂಪೂರ್ಣ ಪಂದ್ಯದ ಗತಿ ಬದಲಾಗಿದ್ದೇ ಅ ಒಂದು ಓವರ್​​ನಿಂದ ಮ್ಯಾಚ್​​ ಟರ್ನಿಂಗ್​ ಪಾಯಿಂಟ್ ಎಂದೆ ಹೇಳಬಹುದು.
ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಬೌಲರ್‌ಗಳು ಅಂತಿಮ ಹಣಾಹಣಿಯ ಪಂದ್ಯದಲ್ಲಿ ಅದ್ಭುತ ಬೌಲಿಂಗ್​ ಪ್ರದರ್ಶನ ನೀಡಿದ್ದಾರೆ ಆರ್​ಸಿಬಿಯ ನಂಬಿಕಸ್ತ ಬೌಲರ್ ಗಳು ದೆಹಲಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿ ಫೈನಲ್ ಪಂದ್ಯದಲ್ಲಿ ಸಲುಭ ಜಯ ದಾಖಲಿಸಲು ಕಾರಣರಾದರು. ಆದರೆ ಈ ಪಂದ್ಯದಲ್ಲಿ ಅ ಒಂದು ಓವರ್​ ಪಂದ್ಯದ ಗತಿಯನ್ನೇ ಬದಲಾಯಿಸಿತು.ರಾಯಲ್ ಚಾಲೆಂಜರ್ಸ್ ತಂಡಕ್ಕೆ ಸುಲಭವಾಗಿ‌ ಗೆಲ್ಲಲು ಸಹಕಾರಿ ಆಯಿತು.


ಅಂತೂ ಇಂತೂ ಹೆಣ್ಣುಮಕ್ಕಳ ಕ್ರಿಕೆಟ್ ತಂಡದಿಂದ ಕೊನೆಗೂ ಬರೋಬ್ಬರಿ 16 ವರ್ಷಗಳ ಆರ್​ಸಿಬಿ ಅಭಿಮಾನಿಗಳ ಕನಸು ನನಸಾಯಿತು ಈ ಬಾರಿ ಕಪ್ ನಮ್ಮದಾಯಿತು.! ದೆಹಲಿಯ ಅರುಣ್​ ಜೇಟ್ಲಿ ಮೈದಾನದಲ್ಲಿ ನಡೆದ ಮಹಿಳಾ ಪ್ರೀಮಿಯರ್​ ಲೀಗ್​ 2ನೇ ಸೀಸನ್​ ಫೈನಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸುವುದರೊಂದಿಗೆ ಡಬ್ಲ್ಯೂಪಿಎಲ್​ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು.


ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಕಳಪೆ ಬ್ಯಾಟಿಂಗ್ ನಿಂದ ಅಂತಿಮವಾಗಿ 18.3 ಓವರುಗಳಲ್ಲಿ ಎಲ್ಲಾ ವಿಕೇಟ್‌ ಗಳನ್ನು ಕಳೆದುಕೊಂಡು ಕೇವಲ 113 ರನ್​ ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಈ ಕಡಿಮೆ ಅಂತರದ ಮೊತ್ತವನ್ನು ಬೆನ್ನಟ್ಟಿದ ಬೆಂಗಳೂರಿನ ಆರ್​ಸಿಬಿ ತಂಡ 19.3 ಓವರುಗಳಿಗೆ 2 ವಿಕೆಟ್ ಕಳೆದುಕೊಂಡು 115  ರನ್​ ಗಳಿಸುವ ಮೂಲಕ 8 ವಿಕೆಟ್​ ಗಳನ್ನು ಉಳಿಸಿಕೊಂಡು ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಚೊಚ್ಚಲ ಕಪ್​ ಮುಡಿಗೇರಿಸಿಕೊಂಡಿದೆ ಬೆಂಗಳೂರಿನ ಆರ್​ಸಿಬಿ ತಂಡ.
ಆದರೆ ಈ ಪಂದ್ಯ ಗೆಲ್ಲಲು ಪ್ರಮುಖ ಕಾರಣವೇ ಅ ಒಂದು ಓವರ್.! ಎಂದರೆ ತಪ್ಪಾಗಲಾರದು. ಈ ನಿರ್ಣಾಯಕ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಎಲ್ಲಾ ಬೌಲರುಗಳು ಅದ್ಭುತವಾಗಿ ಬೌಲಿಂಗ್​ ಮಾಡಿದ್ದಾರೆ ಡೆಲ್ಲಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಆದರೆ ಅದೊಂದು ಓವರ್​ ಪ್ರಮುಖವಾಗಿ ಪಂದ್ಯದ ಗತಿಯನ್ನೇ ಬದಲಾಯಿಸಿತು
ಒಂದು ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ್ತಿಯರ ಅಬ್ಬರ ಆಟಕ್ಕೆ ಡೆಲ್ಲಿ ಬೃಹತ್​ ಮೊತ್ತ ಕಲೆ ಹಾಕಬಹುದು ಎನ್ನುವ ನಂಬಿಕೆ ಇತ್ತು. ಪವರ್​ ಪ್ಲೇ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಮೊದಲ 6 ಓವರ್​ ಗಳಿಗೆ ಹತ್ತು ರನ್ನುಗಳ ಸರಾಸರಿಯಲ್ಲಿ 61 ರನ್​ ಸಿಡಿಸಿದ್ದರು. ಆದರೆ ನಂತರದ 6 ಓವರ್​ಗಳಿಗೆ ಕೇವಲ 16 ರನ್​ ಗಳಿಸಿ ತಂಡದ 4 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದ್ದರು.


ಹೌದು, ಪವರ್​ ಪ್ಲೇ ಮುಗಿಯುತ್ತಿದ್ದ ಹಾಗೆ ಬೌಲಿಂಗ್​​ ದಾಳಿಗೆ ಬಂದ ನಂಬಿಕಸ್ಥ ಬೌಲರ್ ಸೋಫಿ ಮೊಲಿನಕ್ಸ್ ಒಂದೇ ಓವರಿನಲ್ಲಿ ಕೇವಲ ಒಂದುರನ್ ಕೊಟ್ಟು ಪ್ರಮುಖ 3 ವಿಕೆಟ್ ಪಡೆದು ಮಿಂಚುವುದರ ಜೋತೆಗೆ ಡೆಲ್ಲಿ ತಂಡಕ್ಕೆ ಬಲವಾದ ಹೊಡೆತ ಕೊಟ್ಟರು ಈ ಒಂದು ಓವರ್ ಪಂದ್ಯದ ಗತಿಯನ್ನೆ ಬದಲಾಯಿಸಿತು.! ಸೋಫಿ ಮೊಲಿನಕ್ಸ್ ಅವರು 7ನೇ ಓವರ್​ ನ ಮೊದಲ ಎಸೆತದಲ್ಲಿಯೇ ವಿಕೆಟ್ ಪಡೆದು ಬ್ರೇಕ್​ ಥ್ರೂ ನೀಡಿದರು.


ಸೋಫಿ ಮೊಲಿನಕ್ಸ್ 7ನೇ ಓವರ್​ನ ಮೊದಲ ಎಸೆತದಲ್ಲಿ ಡೇಂಜರಸ್​ ಬ್ಯಾಟರ್​ ಆಗಿದ್ದ ಶೇಫಾಲಿ ವರ್ಮಾ ಅವರ ವಿಕೆಟ್​ ಪಡೆದರು. ಬಳಿಕ ನಂತರದ ಬಾಲ್​ ನಲ್ಲಿ ರನ್ ಕೊಡಲಿಲ್ಲ ಬಳಿಕ ಮೂರು ಮತ್ತು ನಾಲ್ಕನೇ ಬಾಲ್ ನಲ್ಲಿ ಜೆಮಿಮಾ ರಾಡಿಗ್ರಸ್​​ ಹಾಗೂ ಕ್ಯಾಪ್ಸಿ ವಿಕೆಟ್ ಪಡೆಯುವ ಮೂಲಕ ಡೆಲ್ಲಿ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನೆ ಮುರಿದು ಹಾಕಿದರು.!


ಈ ಮೂಲಕ ಕೆಲವು 64 ರನ್​ ಗಳಿಸಿದ್ದಾಗಲೇ ಸತತ 3 ವಿಕೆಟ್ ಕಳೆದುಕೊಂಡು ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದರು ಸೋಫಿ ಮೊಲಿನಕ್ಸ್.! ಇವರ ಬೌಲಿಂಗ್ ನಲ್ಲಿ 3 ವಿಕೆಟ್ ಬೀಳದೆ ಹೋಗಿದ್ದರೆ ಶೇಫಾಲಿ ಮತ್ತು ಜೆಮಿಮಾ ಆರ್​ಸಿಬಿ ವಿರುದ್ಧ ಡೇಂಜರಸ್​ ಭರ್ಜರಿ ಬ್ಯಾಟಿಂಗ್ ಮಾಡುವುದಂತೀ ಪಕ್ಕಾ ಆಗಿತ್ತು. ಆದರೆ ಸೋಫಿ ಮೊಲಿನಕ್ಸ್ ಈ 3 ವಿಕೆಟ್ ಪಡೆದು ಪಂದ್ಯದ ಗತಿಯನ್ನೇ ಬದಲಿಸಿ ಆರ್​ಸಿಬಿಗೆ ಅರ್ಧದಷ್ಟು ಜಯ ತಂದುಕೊಟ್ಟಿದ್ದರು.!


ಈ ಫೈನಲ್ ಪಂದ್ಯದಲ್ಲಿ ಆರ್​ಸಿಬಿ ಪರ ಕನ್ನಡತಿ ಶ್ರೇಯಾಂಕ ಪಟೇಲ್​ 3.3 ಓವರ್​ಗೆ ಕೇವಲ 12 ರನ್​ ನೀಡಿ 4 ವಿಕೆಟ್​​ ಕಬಳಿಸಿದರೆ , ಸೋಫಿ ಮೊಲಿನಕ್ಸ್ 4 ಓವರ್​ಗೆ 20 ರನ್​ ನೀಡಿ 3 ವಿಕೆಟ್ ಪಡೆದಿದ್ದರು. ಶೋಭನಾ ಆಶಾ ಸಹ ಒಂದೇ ಓವರ್​ ನಲ್ಲಿ 2 ವಿಕೆಟ್ ಪಡೆದು ತಂಡದ ಗೆಲುವಿಗೆ ಸಹಕಾರಿಯಾದರು.ಡೆಲ್ಲಿ ತಂಡದ 10 ವಿಕೆಟ್ ಗಳಲ್ಲಿ 9 ವಿಕೆಟುಗಳನ್ನು ಆರ್​ಸಿಬಿಯ ಸ್ಪಿನ್​ ಬೌಲರುಗಳೆ ಕಬಳಿಸಿದರು.! ಡೆಲ್ಲಿಯ ಇನ್ನೊಂದು ವಿಕೆಟ್ ರನೌಟಿಗೆ ಬಲಿಯಾಗಿತ್ತು.


ಕೊನೆಗೂ ಬೆಂಗಳೂರಿನ ಆರ್​ಸಿಬಿ ಮಹಿಳಾ ತಂಡ WPL ಕಪ್ ಗೆಲ್ಲುವುದರೊಂದಿಗೆ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳ ಹಲವು ವರ್ಷದ ಕನಸನ್ನು ನನಸು ಮಾಡಿತು. ಈ ಬಾರಿ ಕಪ್ ನಮ್ದೆ ಎಂದಿದ್ದು ಸಾರ್ಥಕವಾಯಿತು…

Leave a Reply

Your email address will not be published. Required fields are marked *

Optimized by Optimole
error: Content is protected !!