5 ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ ಜನಸಾಮಾನ್ಯರು ನೆಮ್ಮದಿಯ ಜೀವನ ನಡೆಸುವಂತಾಗಿದೆ – ಮಧು ಎಸ್ ಬಂಗಾರಪ್ಪ
ಶಿವಮೊಗ್ಗ: ಸರ್ಕಾರದ ಐದು ಮಹತ್ವಕಾಂಕ್ಷಿ ಯೋಜನೆಗಳಾದ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನ ಭಾಗ್ಯ, ಶಕ್ತಿ ಮತ್ತು ಯುವನಿಧಿ ಯೋಜನೆಗಳ ಸಮರ್ಪಕ ಅನುಷ್ಟಾನದಿಂದ ರಾಜ್ಯದ ಜನಸಾಮಾನ್ಯರು ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ಸೊರಬ ತಾಲೂಕಿನ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ತಮ್ಮ ಕೌಟುಂಬಿಕ ನಿರ್ವಹಣೆಯ ಅನೇಕ ಸಂದಿಗ್ಧ ಸಂದರ್ಭಗಳಲ್ಲಿ ಸರ್ಕಾರ ಆರ್ಥಿಕ ನೆರವಿನ ಹಸ್ತ ನೀಡಿ ಸಹಕರಿಸುತ್ತಿದೆ. ಚುನಾವಣಾ ಪೂರ್ವದಲ್ಲಿ ಗ್ಯಾರೆಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಉಪಾಧ್ಯಕ್ಷನಾಗಿದ್ದೆ ಎಂಬ ಸಂತಸದ ಸಂಗತಿ ನನ್ನದಾಗಿದೆ ಎಂದರು
ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಗ್ಯಾರಂಟಿಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಾಗುತ್ತಿದೆ. ನಂಬಿಕೆ ಇಡಿ, ತಮ್ಮ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ. ಅಂತಯೇ ಇದು ನಿಮ್ಮದೇ ಸರ್ಕಾರ ಅದನ್ನು ಪೋಷಿಸಿ ಬೆಳೆಸುವ ಹೊಣೆಗಾರಿಕೆಯು ನಿಮ್ಮದೇ ಆಗಿದೆ ಎಂದರು.
ಮಹಿಳೆಯರು ರಾಜ್ಯದ ಪುಣ್ಯಕ್ಷೇತ್ರಗಳಲ್ಲದೆ ಅವರ ಅನುಕೂಲಕ್ಕೆ ತಕ್ಕಂತೆ ರಾಜ್ಯದಲ್ಲೇ ಪ್ರಯಾಣಿಸಲು ಅನುಕೂಲವಾಗುವಂತೆ ಶಕ್ತಿ ಯೋಜನೆ ಮಹಿಳೆಯರಿಗೆ ವರದಾನವಾಗಿದೆ. ಮಾಜಿ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಬಂಗಾರಪ್ಪನವರು ಕೂಡ ರೈತರು ಹಿತೈಷಿಯಾಗಿದ್ದರು. ಅವರು ರೈತರ ಪಂಪ್‍ಸೆಟ್‍ಗಳಿಗೆ ಅನುಕೂಲವಾಗುವಂತೆ ಉಚಿತ ವಿದ್ಯುತ್ ಸೌಲಭ್ಯವನ್ನು ಒದಗಿಸಿದ್ದರು. 30 ವರ್ಷಗಳ ನಂತರವೂ ಈ ಯೋಜನೆ ಅನುಷ್ಟಾನದಲ್ಲಿರುವುದು ಬಂಗಾರಪ್ಪನವರ ದೂರ ದೃಷ್ಟಿಯ ಪ್ರತಿಕವಾಗಿದೆ ಎಂದ ಅವರು ಇಂತಹ ಯೋಜನೆಗಳ ಅನುಷ್ಟಾನದಿಂದಾಗಿ ರೈತರಿಗೆ ಆರ್ಥಿಕ ಶಕ್ತಿ ತುಂಬುವಂತಾಗಿದೆ. ರೈತರ ಹಿತ ಕಾಯುವಲ್ಲಿ ಬಂಗಾರಪ್ಪನವರು ಹಾಗೂ ಕಾಗೋಡು ತಿಮ್ಮಪ್ಪನವರ ದೃಷ್ಟಿ ಸ್ಮರಣೀಯವಾದುದು ಎಂದರು.
ಕಾರ್ಯಕ್ರಮಕ್ಕೂ ಮುನ್ನಾ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ಅರ್ಹರಿಗೆ ತಲುಪಬೇಕು ಅಲ್ಲದೆ ಸೌಲಭ್ಯ ವಂಚಿತರಿಗೂ ಸೌಲಭ್ಯ ದೊರೆಯುವ ನಿಟ್ಟಿನಲ್ಲಿ ವೇದಿಕೆಯ ಎರಡು ಭಾಗಗಳಲ್ಲಿ ದೂರು ಸ್ವೀಕಾರ ಹಾಗೂ ಸಲಹಾ ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದರು.
ಈ ರೀತಿಯ ಜನಪರ ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸುತ್ತಿರುವ ದೇಶದ ಏಕೈಕ ರಾಜ್ಯ ಇದಾಗಿದೆ ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಸಾವಿರದ ಉಪ ವಿಭಾಗಾಧಿಕಾರಿ ಯತೀಶ್, ಸೊರಬದ ತಹಶೀಲ್ದಾರ್ ಸರಕಾವಸ್, ಕಾರ್ಯನಿರ್ವಾಹಕ ಅಧಿಕಾರಿ ಪ್ರದೀಪ್ ಕುಮಾರ್, ಪುರಸಭಾ ಅಧ್ಯಕ್ಷ ಪ್ರಸನ್ನ ಕುಮಾರ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳು ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು