ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡಿದವರು ಇಂದು ಅದೇ ಗ್ಯಾರಂಟಿಯ ಹೆಸರಲ್ಲಿ ಪ್ರಚಾರಕ್ಕೆ ಮುಂದಾಗಿದ್ದಾರೆ : ಡಿ.ಕೆ. ಸುರೇಶ್ ಸಂಸದರು
News.Ashwasurya.in
SUDHIR VIDHATA ✍️
ಬೆಂಗಳೂರು: ಬಡ ಮತ್ತು ಮಧ್ಯಮವರ್ಗದ ಜನರ ಸಮಸ್ಯೆಗಳಿಗೆ ಪರಿಹಾರ ಕೊಟ್ಟು ಅವರಿಗೆ ಶಕ್ತಿ ತುಂಬಿ ಬೆನ್ನೆಲುಬಾಗಿ ನಿಲ್ಲುವ ಉದ್ದೇಶದೊಂದಿಗೆ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಯಾಗಿದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡಿದವರೆ ಇಂದು ಅದೇ ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಪ್ರಚಾರಕ್ಕೆ ಪಡೆಯುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅವರು ತಿಳಿಸಿದ್ದಾರೆ!
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜರಗನಹಳ್ಳಿ ಸರ್ಕಾರಿ ಶಾಲಾ ಮೈದಾನದಲ್ಲಿ ಇತ್ತೀಚೆಗೆ ನಡೆದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಎನ್ನುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ವಿರೋಧ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಪ್ರವಾಸ ಮಾಡಿ ಜನರ ಸಮಸ್ಯೆಗಳನ್ನು ಅರಿತು ಅವರಿಗೆ ಶಕ್ತಿ ತುಂಬುವ ಉದ್ದೇಶದೊಂದಿಗೆ ಈ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದರು,ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದ ನಂತರ ಕೊಟ್ಟ ಮಾತಿನಂತೆ ನುಡಿದಂತೆ ನೆಡೆದು ನಾಲ್ಕು ಯೋಜನೆಗಳನ್ನು ಜಾರಿಗೆಗೆ ತರಲಾಗಿದೆ” ಇನ್ನೊಂದು ಯುವನಿಧಿ ಗ್ಯಾರಂಟಿ ಯೋಜನೆ ಒಂದೆರಡು ದಿನದಲ್ಲಿ ಜಾರಿಗೆ ಬರಲಿದೆ ಈ ಒಂದು ಕಾರ್ಯಕ್ರಮಕ್ಕೆ ಶಿವಮೊಗ್ಗದಲ್ಲಿ ವೇದಿಕೆ ಸಿದ್ಧವಾಗಿದೆ ಜನವರಿ12ರಂದು ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಪದವೀಧರರ ಖಾತೆಗೆ ನೇರವಾಗಿ ಹಣ ಹಾಕುವುದರ ಮೂಲಕ ಐದನೆಯ ಗ್ಯಾರಂಟಿಯನ್ನು ಜಾರಿಗೆತರಲಿದ್ದಾರೆ ಎಂದರು.
ಈ ಯೋಜನೆಗಳು ಯಾವುದೇ ಜಾತಿ, ಧರ್ಮಕ್ಕೆ ಸೇರಿಲ್ಲ. ರಾಜ್ಯದ 224 ಕ್ಷೇತ್ರಗಳಲ್ಲಿ ಎಲ್ಲಾ ವರ್ಗದ ಜನರಿಗೆ ಶಕ್ತಿ ತುಂಬುವ ಉದ್ದೇಶದೊಂದಿಗೆ ಈ ಯೋಜನೆಗಳನ್ನು ಜಾರಿ ತರಲಾಗಿದೆ.
ಸರ್ಕಾರ ಈ ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷ 58 ಸಾವಿರ ಕೋಟಿ ಅನುದಾನ ನೀಡುತ್ತಿದೆ. ಅಪಾರ್ಟ್ ಮೆಂಟ್ ನಿವಾಸಿಗಳು ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕಿಕೊಂಡಿದ್ದಾರೆ. ಅಂದರೆ ಅಪಾರ್ಟ್ ಮೆಂಟ್ ನಿವಾಸಿಗಳು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ ಎಂಬುದು ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.
ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರ್ಕಾರ ಇಂತಹ ಕಾರ್ಯಕ್ರಮಗಳ ಮೂಲಕ ಜನರ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಬೆಂಗಳೂರಿಗೆ ಹೊಸ ಕಾಯಕಲ್ಪ ನೀಡಲು, ಸರ್ಕಾರ ಜನರ ಮನೆ ಬಾಗಿಲಿಗೆ ಬಂದು ಸ್ಥಳದಲ್ಲೇ ಜನರ ಸಮಸ್ಯೆಗೆ ಪರಿಹಾರ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಬೆಂಗಳೂರು ಸಮಸ್ಯೆಗಳ ಸಾಗರವನ್ನು ಇಟ್ಟುಕೊಂಡಿದೆ. ಟ್ರಾಫಿಕ್, ರಸ್ತೆ ಗುಂಡಿ, 110 ಹಳ್ಳಿಗಳ ಮೂಲಸೌಕರ್ಯ, ಕೆರೆಗಳ ಪುನಶ್ಚೇತನ ಸೇರಿದಂತೆ ಅನೇಕ ಸಮಸ್ಯೆ ಇದೆ. ಈ ಅಹವಾಲು ಸ್ವೀಕಾರ ನಂತರ ಉಪಮುಖ್ಯಮಂತ್ರಿ ಗಳು ಸ್ಥಳಕ್ಕೆ ಭೇಟಿ ನೀಡಿ ಕಾನೂನಾತ್ಮಕ ಪರಿಹಾರ ನೀಡಬೇಕು. ಆಗ ಜನರ ಆಶೀರ್ವಾದದಿಂದ ಬಂದಿರುವ ಸರ್ಕಾರ ಯಶಸ್ಸು ಕಾಣಲಿದೆ ಎಂದರು.