ನರೇಗಾ ಕೂಲಿ ಕಾರ್ಮಿಕರಿಗೆ ಹಣ ಬಿಡುಗಡೆ ಮಾಡುವಂತೆ ಒಕ್ಕೂಟದ ಅಧ್ಯಕ್ಷ ಟಿ.ಜೆ. ಅನಿಲ್ ಒತ್ತಾಯ
ತೀರ್ಥಹಳ್ಳಿ : ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರಿಗೆ ಸರ್ಕಾರ ಹಣ ಬಿಡುಗಡೆಗೊಳಿಸುತ್ತಿಲ್ಲ. ಆದರೆ ಅಧಿಕಾರಿಗಳು ಕೂಲಿ ಸಂಬಳವನ್ನು ನೀಡದೇ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವಂತೆ ಒತ್ತಡ ಹೇರುತ್ತಿದ್ದಾರೆ.
ಕೂಲಿಗಾಗಿ ಕಾಳು ಎಂಬ ಯೋಜನೆಯಲ್ಲಿ ಕೆಲಸ ನಿರ್ವಹಿಸುವವರು ಕೂಲಿ ಕಾರ್ಮಿಕರಾಗಿರುತ್ತಾರೆ. ಒಂದೊತ್ತಿನ ಕೂಳಿಗೂ ಪರದಾಡುವಂತಿರುವವರು ಅನೇಕರಿರುತ್ತಾರೆ. ಕಳೆದ ಎರಡು ತಿಂಗಳುಗಳಿಂದ ನರೇಗಾ ಯೋಜನೆಯಡಿ ಹಣ ಬಿಡುಗಡೆ ಮಾಡದೇ ಇರುವುದರಿಂದ ಅವರುಗಳಿಗೆ ತಾವು ಮಾಡಿದ ಕೂಲಿಗೆ ಹಣ ಸಿಗದಂತಾಗಿದೆ. ಸಂಘ ಸಂಸ್ಥೆಗಳಲ್ಲಿ ಸಾಲಸೂಲ ಮಾಡಿಕೊಂಡ ಅನೇಕ ಕೂಲಿ ಕಾರ್ಮಿಕರು ಗ್ರಾಮಪಂಚಾಯಿತಿಯಿಂದ ತಮ್ಮ ಖಾತೆಗೆ ಹಣ ಬಿಡುಗಡೆಯಾಗಿಲ್ಲ, ಕೂಲಿ ಮಾಡಿದ ಹಣವನ್ನು ನೀಡಲು ಯೋಗ್ಯತೆಯಿಲ್ಲದ ಮೇಲೆ ನರೇಗಾ ಯೋಜನೆಯಡಿ ಯಾವ ಕಾರಣಕ್ಕೆ ಕೆಲಸ ಮಾಡಿಸಿಕೊಳ್ಳುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರಲ್ಲದೇ, ಅಲ್ಲಿನ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮಪಂಚಾಯಿತಿಯ ಪ್ರತಿನಿಧಿಗಳಿಗೆ ಮನಬಂದಂತೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಹಣ ಬಿಡುಗಡೆ ಯಾಗದಿದ್ದರೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಅಭಿವೃದ್ಧಿ ಅಧಿಕಾರಿಗಳನ್ನು ಕರೆದು ಸಭೆ ಮೇಲೆ ಸಭೆ ನಡೆಸಿ, ನರೇಗಾ ಯೋಜನೆಯಡಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಕೆಲಸ ನಿರ್ವಹಿಸಬೇಕೆಂಬ ಟಾರ್ಗೆಟ್ ವಿಧಿಸುತ್ತಿದ್ದಾರೆ. ಜನರ ಮನವೊಲಿಸಿ ಕೆಲಸ ನಿರ್ವಹಿಸಿದರೆ ಸರ್ಕಾರದಿಂದ ಹಣ ಮಂಜೂರಾಗದೇ ಜನರಿಂದ ಉಗಿಸಿಕೊಳ್ಳಬೇಕಾದಂತಹ ಪರಿಸ್ಥಿತಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಬಂದಿದೆ.
ಒಟ್ಟಿನಲ್ಲಿ ನಿಗದಿತ ಸಮಯಕ್ಕೆ ನರೇಗಾ ಯೋಜನೆಯ ಹಣ ಬಿಡುಗಡೆ ಮಾಡದೇ ಕೂಲಿ ಕಾರ್ಮಿಕರು ಅತಂತ್ರವಾಗುತ್ತಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮಪಂಚಾಯಿತಿ ಒಕ್ಕೂಟದ ಅಧ್ಯಕ್ಷ ಟಿ.ಜೆ. ಅನಿಲ್ ಆಗ್ರಹಿಸಿದ್ದಾರೆ.
ಸುಧೀರ್ ವಿಧಾತ ,ಶಿವಮೊಗ್ಗ