ಬೆಂಗಳೂರು : ಡಾ. ವಿಷ್ಣುವರ್ಧನ್ ಹುಟ್ಟು ಹಬ್ಬಕ್ಕೆ ವಿಷ್ಣು ‘ಅಭಿಮಾನ ಕ್ಷೇತ್ರ’ ಮಾಡೆಲ್ ರಿಲೀಸ್! : ನಟ ಕಿಚ್ಚಾ ಸುದೀಪ್.
news.ashwasurya.in

ಅಶ್ವಸೂರ್ಯ/ಬೆಂಗಳೂರು :ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಹುಟ್ಟುಹಬ್ಬದಂದು ನಟ ಕಿಚ್ಚ ಸುದೀಪ್ ಮಾಡೆಲ್ ರಿಲೀಸ್ ಮಾಡಿದ್ದಾರೆ.
ಹಿಂದೆ ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ ನಿರ್ಮಿಸುವುದಾಗಿ ಘೋಷಿಸಿದ್ದ ಸುದೀಪ್, ಇದೀಗ ಮಾಡೆಲ್ ರಿಲೀಸ್ ಮಾಡಿ ಹೇಳಿದ್ದನ್ನು ಮಾಡಿ ತೋರಿಸಿದ್ದಾರೆ.

ವಿಷ್ಣುವರ್ಧನ್ ಹೆಸರಿನಲ್ಲಿ ಮಾದರಿ ಸ್ಮಾರಕ ನಿರ್ಮಿಸಲು ಅವರ ಅಭಿಮಾನಿಗಳಾದ ಸುದೀಪ್, ವೀರಕಪುತ್ರ ಶ್ರೀನಿವಾಸ್, ಅಶೋಕ್ ಖೇಣಿ, ಡಾ. ವಿಷ್ಣು ಸೇನಾ ಸಮಿತಿ ಅಧ್ಯಕ್ಷರು ಸದಸ್ಯರು ಮತ್ತಿತರರು ಮುಂದಾಗಿದ್ದಾರೆ.

ಈ ಪ್ರಯತ್ನ ದೇಶದಲ್ಲೇ ಮೊದಲು ಎನ್ನಲಾಗಿದ್ದು ’ಅಭಿಮಾನದ ಕಲಾವಿದನಿಗೆ ಅಭಿಮಾನಿಗಳೇ ಅಭಿಮಾನದಿಂದ ನಿರ್ಮಿಸುತ್ತಿರುವ ಮೊಟ್ಟ ಮೊದಲ “ಅಭಿಮಾನ ಕ್ಷೇತ್ರʼʼ ಎಂದು ಬಣ್ಣಿಸಲಾಗಿದೆ. ಇದಕ್ಕೆ “‘ಡಾ. ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ’ ಎಂದು ಹೆಸರಿಡಲಾಗಿದೆ.
ಈ ಸ್ಮಾರಕದ ತ್ರೀಡಿ ಮಾಡೆಲ್ ಗಮನ ಸೆಳೆದಿದೆ. ಈ ಸ್ಮಾರಕದಲ್ಲಿ ಡಾ. ವಿಷ್ಣುವರ್ಧನ್ ಅವರ ವಿಶೇಷ ಭಾವಚಿತ್ರಗಳನ್ನು ಒಳಗೊಂಡ ಫೋಟೊ ಗ್ಯಾಲರಿ, ಪ್ರತಿಮೆ, ಲೈಬ್ರರಿ, ಧ್ಯಾನ ಕೇಂದ್ರ ಇರಲಿದೆ. ವಿಶಾಲ ಸ್ಥಳದಲ್ಲಿ, ಹಚ್ಚ ಹಸುರಿನ ನಡುವೆ ಇದು ತಲೆ ಎತ್ತಲಿದೆ.

ಇಷ್ಟೇ ಅಲ್ಲದೆ ಇನ್ನಷ್ಟು ವೈಶಿಷ್ಟ್ಯ ಇದರಲ್ಲಿ ಇರಲಿದೆ ಎಂದು ಸುದೀಪ್ ತಿಳಿಸಿದ್ದಾರೆ.
ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ವಿಷ್ಣುವರ್ಧನ್ ಅವರ ಸಮಾಧಿಯನ್ನು ಇತ್ತೀಚೆಗೆ ತೆರವುಗೊಳಿಸಲಾಗಿತ್ತು. ಈ ಬಗ್ಗೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು.

ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ನಟ ಕಿಚ್ಚ ಸುದೀಪ್, ʼʼಈ ವಿಚಾರದಲ್ಲಿ ಅಭಿಮಾನಿಗಳ ಪರ ನಿಲ್ಲುತ್ತೇನೆ. ಸ್ಮಾರಕವಿದ್ದ ಜಾಗವನ್ನು ಉಳಿಸಲು ಹಾಗೂ ಮರುಸ್ಥಾಪನೆ ಮಾಡುವುದಕ್ಕೆ ನಾನು ತಯಾರಿದ್ದೀನಿʼʼ ಎಂದು ಹೇಳಿದ್ದರು. ಜತೆಗೆ ಕೆಂಗೇರಿ ಬಳಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸುದೀಪ್ ಭೂಮಿ ಖರೀದಿಸಿದ್ದರು.


