ಮುಂಬಯಿ :ನಾಗ್ಪುರ ಜೈಲಿನಿಂದ 17 ವರ್ಷಗಳ ಬಳಿಕ ಹೊರಬಂದ ಮಾಜಿ (ಡ್ಯಾಡಿ) ಡಾನ್ ಅರುಣ್ ಗೌವ್ಲಿ.!
news.ashwasurya.in

ಅಶ್ವಸೂರ್ಯ/ಮುಂಬಯಿ : 17 ವರ್ಷಗಳಿಗೂ ಹೆಚ್ಚು ಸಮಯ ಸೆರೆಮನೆಯಲ್ಲಿದ್ದ ಮುಂಬೈ ಗ್ಯಾಂಗ್ ಸ್ಟರ್,ಮಾಜಿ ಭೂಗತ ಲೋಕದ ದೊರೆ, ಪರಿವರ್ತಿತ ರಾಜಕಾರಣಿ ಮಾಜಿ ಶಾಸಕ ಅರುಣ್ ಗೌವ್ಲಿ (70) 2007ರಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಅರುಣ್ ಗೌವ್ಲಿ ಅವರಿಗೆ ಸರ್ವೋಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ ಬಳಿಕ ಬುಧವಾರ ನಾಗ್ಪುರ ಸೆಂಟ್ರಲ್ ಜೈಲಿನಿಂದ ಬಿಡುಗಡೆಗೊಂಡಿದ್ದಾನೆ.
ಮುಂಬೈನ ಶಿವಸೇನೆ ಕಾರ್ಪೊರೇಟರ್ ಕಮಲಾಕರ್ ಜಮ್ಸಂಡೇಕರ್ ಹತ್ಯೆ ಪ್ರಕರಣದಲ್ಲಿ ಗೌವ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ.
ವಿಚಾರಣಾ ನ್ಯಾಯಾಲಯದ ಷರತ್ತುಗಳಿಗೊಳಪಟ್ಟು ಗೌಳಿಗೆ ಜಾಮೀನು ಮಂಜೂರು ಮಾಡುವಾಗ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಮತ್ತು ಎನ್.ಕೋಟೀಶ್ವರ್ ಸಿಂಗ್ ಪೀಠವು,ಆತ 17 ವರ್ಷಗಳಿಗೂ ಹೆಚ್ಚು ಸಮಯದಿಂದ ಜೈಲಿನಲ್ಲಿದ್ದಾನೆ ಮತ್ತು ಆತನ ಮೇಲ್ಮನವಿ ತನ್ನ ಮುಂದೆ ಬಾಕಿಯಿದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡಿತ್ತು.
ಜೈಲು ಇಲಾಖೆಯ ಕಾನೂನು ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ಬಳಿಕ ಬುಧವಾರ ಅಪರಾಹ್ನ 12:30ರ ಸುಮಾರಿಗೆ ಗೌವ್ಲಿ ಜೈಲಿನಿಂದ ಹೊರನಡೆದಿದ್ದಾನೆ ಎಂದು ಅಧಿಕಾರಿಯೋರ್ವರು ತಿಳಿಸಿದರು.

ಜೈಲಿನ ಹೊರಗೆ ಕಾದು ನಿಂತಿದ್ದ ಗೌವ್ಲಿ ಕುಟುಂಬದ ಸದಸ್ಯರು, ವಕೀಲರು ಮತ್ತು ಬೆಂಬಲಿಗರು ಮುಂಬೈನ ಮಾಜಿ ಡಾನ್ ನನ್ನು ಸ್ವಾಗತಿಸಿದರು.
‘ಡ್ಯಾಡಿ’ ಎಂದೂ ಕರೆಯಲ್ಪಡುವ ಗೌವ್ಲಿ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ(ಎಂಕೋಕಾ)ಯಡಿ ಪ್ರಕರಣ ದಾಖಲಾಗಿತ್ತು. ವಿಚಾರಣಾ ನ್ಯಾಯಾಲಯವು ತನಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದನ್ನು ಎತ್ತಿ ಹಿಡಿದಿದ್ದ ಬಾಂಬೆ ಉಚ್ಚ ನ್ಯಾಯಾಲಯದ ಡಿ.9,2019ರ ತೀರ್ಪನ್ನು ಗೌವ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ.

ಬಾಯಖಳಾದ ದಗ್ಡಿ ಚಾಳ್ ನಿಂದ ಅಪರಾಧ ಜಗತ್ತಿನಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದ ಗೌವ್ಲಿ ಅಖಿಲ ಭಾರತೀಯ ಸೇನಾ (ಎಬಿಎಸ್)ದ ಸ್ಥಾಪಕನಾಗಿದ್ದು, 2004ರಿಂದ 2009ರವರೆಗೆ ಮುಂಬೈನ ಚಿಂಚ್‌ಪೋಕ್ಲಿ ವಿಧಾನಸಭಾ ಕ್ಷೇತ್ರದ ಶಾಸಕನಾಗಿದ್ದ.
ಆ.2012ರಲ್ಲಿ ಮುಂಬೈನ ಸೆಷನ್ಸ್ ನ್ಯಾಯಾಲಯವು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗವಳಿಗೆ ಜೀವಾವಧಿ ಶಿಕ್ಷೆ ಮತ್ತು 17 ಲಕ್ಷ ರೂ.ದಂಡ ವಿಧಿಸಿತ್ತು.
ಪ್ರಕರಣದ ಹಿನ್ನೆಲೆ :
ಮಾರ್ಚ್ 2008 ರಲ್ಲಿ ಮುಂಬೈನ ಘಾಟ್ಕೋಪರ್ ಉಪನಗರದಲ್ಲಿರುವ ಅವರ ಅಸಲ್ಫಾ ನಿವಾಸದ ಬಳಿ ಗೌವ್ಲಿ ಗ್ಯಾಂಗ್ ಸದಸ್ಯರು ಜಮ್ಸಂದೇಕರ್ ಅವರನ್ನು ಗುಂಡಿಕ್ಕಿ ಕೊಂದರು. ಪ್ರಾಸಿಕ್ಯೂಷನ್ ಪ್ರಕರಣ ಮತ್ತು ಚಾರ್ಜ್ಶೀಟ್ನಲ್ಲಿ ಗೌವ್ಲಿಗೆ ಜಮ್ಸಂದೇಕರ್ ಅವರ ವ್ಯವಹಾರ ಮತ್ತು ರಾಜಕೀಯ ಪ್ರತಿಸ್ಪರ್ಧಿಗಳಾದ ಸಾಹೇಬ್ರಾವ್ ಭಿಂಟಡೆ ಮತ್ತು ಬಾಲಾ ಸುರ್ವೆ ಅವರು 30 ಲಕ್ಷ ರೂಪಾಯಿಗಳನ್ನು ನೀಡಿದ್ದರು ಎಂದು ವಾದಿಸಲಾಗಿತ್ತು.
ಮೇ 2008 ರಿಂದ ಪೊಲೀಸ್ ಕಸ್ಟಡಿಯಲ್ಲಿರುವ ಗಾವ್ಲಿಗೆ ಆಗಸ್ಟ್ 24 ರಂದು ಹತ್ಯೆ ಪ್ರಕರಣಕ್ಕೆ ಶಿಕ್ಷೆ ವಿಧಿಸಲಾಗಿತ್ತು. ಸಹ-ಆರೋಪಿ ಸುರ್ವೆ ವಿಚಾರಣೆಯ ಸಮಯದಲ್ಲಿ ನಿಧನರಾದರು. ಇತರ ಸಹ-ಆರೋಪಿಗಳಲ್ಲಿ ಒಬ್ಬ ಸುನಿಲ್ ಘಾಟೆ ಮಾತ್ರ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಶಿಕ್ಷೆಗೊಳಗಾಗಿದ್ದರು ಮತ್ತು ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಒಳಗಾಗಿದ್ದರು.
ಮಾರ್ಚ್ 2008 ರಲ್ಲಿ ಶಿವಸೇನಾ ಕಾರ್ಪೊರೇಟರ್ ಕಮಲಾಕರ್ ಜಮ್ಸಂದೇಕರ್ ಅವರ ಕೊಲೆಗೆ ಸಂಬಂಧಿಸಿದಂತೆ ಮುಂಬೈನ ವಿಶೇಷ MCOCA ನ್ಯಾಯಾಲಯವು ಪಾತಕಿ, ರಾಜಕಾರಣಿ ಅರುಣ್ ಗಾವ್ಲಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.


