ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ತಮ್ಮನೆ ಅಣ್ಣನನ್ನು ಇರಿದು ಕೊಂದ.! ಆರೋಪಿ ತಮ್ಮನ ಬಂಧನ.

news.ashwasurya.in
ಅಶ್ವಸೂರ್ಯ/ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ತಮ್ಮನೇ ಅಣ್ಣನಿಗೆ ಚಾಕು ಇರಿದು ಕೊಂದ ಘಟನೆ ಶಿವಮೊಗ್ಗ ನಗರದ ಇಂದಿರಾ ಗಾಂಧಿ ಬಡಾವಣೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಜನಾರ್ಧನ್ (27) ಚಾಕು ಇರಿತದಿಂದ ಮೃತಪಟ್ಟ ಯುವಕ ಎಂದು ತಿಳಿದುಬಂದಿದ್ದು ಹನುಮಂತ (26) ಬಂಧಿತ ಆರೋಪಿ.
ಶಿವಮೊಗ್ಗ ತಾಲೂಕಿನ ಕೊಮ್ಮನಾಳು ಸಮೀಪದ ಬನ್ನಿಕೆರೆ ನಿವಾಸಿ ಜನಾರ್ಧನ್ ಶಿವಮೊಗ್ಗದ ನಿಸರ್ಗ ರೆಸ್ಟೋರೆಂಟ್ ನಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿದ್ದ. ಚಾಕು ಇರಿದ ಹನುಮಂತ, ಮೃತ ಜನಾರ್ಧನ್ ನ ಚಿಕ್ಕಪ್ಪನ ಮಗ ಎನ್ನಲಾಗಿದೆ.
ಪ್ರಕರಣದ ಹಿನ್ನೆಲೆ :
5 ವರ್ಷದ ಹಿಂದೆ ಸೇವಾಲಾಲ್ ಕ್ಷೇತ್ರ ಸೂರಗೊಂಡನ ಕೊಪ್ಪಕ್ಕೆ ಹೋಗುವ ವೇಳೆ ಬೈಕ್ ಅಪಘಾತದಲ್ಲಿ ಹನುಮಂತ ತನ್ನ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ. ಈ ಆ್ಯಕ್ಸಿಡೆಂಟ್ ಬಳಿಕ ಆತ ಕುಂಟುತ್ತಾ ನಡೆದಾಡುತ್ತಿದ್ದ. ಆಗಾಗ್ಗೆ ಕಾಲಿನ ವಿಚಾರವನ್ನು ಅಣಕಿಸುತ್ತಿದ್ದ ಜನಾರ್ಧನ್, ಕಾಲು ಅರ್ಧ ಹೋಯ್ತು, ಪೂರ್ತಿ ಹೋಗಿಲ್ಲ ಎಂದು ರೇಗಿಸುತ್ತಿದ್ದನಂತೆ.

ಇದೇ ಕಾರಣಕ್ಕೆ ಹನುಮಂತ ಬುಧವಾರ ರಾತ್ರಿ ಜನಾರ್ಧನ್ ಗೆ ಚಾಕು ಇರಿದಿದ್ದಾನೆ. ಏಕಾಏಕಿ 3-4 ಬಾರಿ ಇರಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಜನಾರ್ಧನ್ ನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಜನಾರ್ಧನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಜನಾರ್ಧನ್ ಮೃತ ದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಶವಪರೀಕ್ಷೆ ಮಾಡಲಾಗಿದೆ. ಆರೋಪಿ ಹನುಮಂತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



