Headlines

ಕಾಸರಗೋಡು: ಕದ್ದ ಮಾಂಗಲ್ಯ ಸರದ ಪವಿತ್ರತೆ ಮತ್ತು ಮಹತ್ವ ಅರಿವಾದಾಗ ಮರಳಿ ತಂದಿಟ್ಟ ಕಳ್ಳ.!!

ಅಶ್ವಸೂರ್ಯ/ಕಾಸರಗೋಡು : ಮನೆಯಿಂದ ಚಿನ್ನದ ಮಾಂಗಲ್ಯ ಸರವನ್ನು ಕಳವು ಮಾಡಿದ್ದ ಕಳ್ಳನೊಬ್ಬ ವಾಟ್ಸಾಪ್‌ ನಲ್ಲಿ ಹರಿದಾಡಿದ ಸಂದೇಶವನ್ನು ನೋಡಿ ಮನ ಪರಿವರ್ತನೆಗೊಂಡು ಕದ್ದ ಚಿನ್ನದ ಮಾಂಗಲ್ಯ ಸರವನ್ನು ಕ್ಷಮೆಯಾಚನೆಯ ಪತ್ರದೊಂದಿಗೆ ಒಂಬತ್ತು ದಿನಗಳ ನಂತರ ಮರಳಿಸಿದ ಅತ್ಯಂತ ಅಪರೂಪದ ಘಟನೆಯೊಂದು ಕೇರಳ ರಾಜ್ಯದ ಕಾಸರಗೋಡಿನಲ್ಲಿ ನಡೆದಿದೆ.
ಕಾಸರಗೋಡು ಜಿಲ್ಲೆಯ ಪೊಯಿನಾಚಿ ಎಂಬಲ್ಲಿನ ನಿವಾಸಿ ಪರಂಬ ಲಕ್ಷ್ಮಿ ನಿವಾಸದ ಎಂ. ಗೀತಾ ಎಂಬವರು ಆಗಸ್ಟ್ 4 ರಂದು ತನ್ನ ಪತಿ ನಿವೃತ್ತ ಕಂದಾಯ ಅಧಿಕಾರಿ ವಿ. ದಾಮೋದರನ್ ಜೋತೆಗೆ ಮನೆಯಿಂದ ಹೊರಗೆ ಹೋಗಿದ್ದರು. ಸಂಜೆ ವೇಳೆಗೆ ಮನೆಗೆ ಹಿಂದಿರುಗಿದಾಗ ಮನೆಯಲ್ಲಿದ್ದ ತನ್ನ ಮದುವೆ ಸಂದರ್ಭದ ಚಿನ್ನದ ಮಾಂಗಲ್ಯ ಸರ ಕಳವಾಗಿರುವುದು ಗಮನಕ್ಕೆ ಬಂದಿದೆ.ಕಳುವಾದ ಮಾಂಗಲ್ಯ ಸರದಿಂದ ದಿಕ್ಕೆಟ್ಟು ಹೋದ ಗೀತಾ ಅವರು ತಕ್ಷಣವೇ ಮೇಲ್ಪರಂಬ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.
ಪೊಲೀಸರು ಮನೆಯಿಂದ ಚಿನ್ನದ ಮಾಂಗಲ್ಯ ಸರ ಕಾಣೆಯಾಗಿದೆ ಎಂಬುದಾಗಿ ವಿವರಗಳೊಂದಿಗೆ ಸ್ಥಳೀಯ ವಾಟ್ಸಾಪ್ ಗ್ರೂಪ್‌ ಗಳಲ್ಲಿ ಮಾಹಿತಿ ಹಾಕಿದ್ದರು. ಆಗಸ್ಟ್ 13 ರಂದು ಬೆಳಗ್ಗೆ 10.30 ರ ವೇಳೆಗೆ ಗೀತಾ ಮತ್ತು ದಾಮೋದರನ್ ದಂಪತಿ ಪೊಯಿನಾಚಿ ಪೇಟೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾಗ, ತಮ್ಮ ಮನೆಯ ವರಾಂಡಾದಲ್ಲಿ ಅಚ್ಚುಕಟ್ಟಾಗಿ ಇರಿಸಿದ್ದ ತಮ್ಮ ಕಳೆದು ಹೋದ ಚಿನ್ನದ ಮಾಂಗಲ್ಯ ಸರ ಮತ್ತು ಮಲಯಾಳ ಭಾಷೆಯಲ್ಲಿ ಕೈ ಬರಹದಲ್ಲಿ ಬರೆದಿರುವ ಪತ್ರವೊಂದು ಕಾಣಿಸಿದೆ.
ಪತ್ರದ ಕೆಳಗಡೆ ಸಮೀಪದ ಪ್ರದೇಶದ ಹೆಸರು ಕುಂಡಂಕುಳಿ ಎಂಬುದಾಗಿ ಮಾತ್ರ ಬರೆಯಲಾಗಿತ್ತು. ಸರವನ್ನು ಕದ್ದ ವ್ಯಕ್ತಿ ತನ್ನ ಹೆಸರನ್ನು ಬರೆಯದೆ ಅನಾಮಧೇಯನಾಗಿ ಉಳಿಯಲು ಇಚ್ಛಿಸಿದ್ದಾನೆ.

ತನ್ನ ಮದುವೆಯ ಮಾಂಗಲ್ಯ ಸರವನ್ನು ಕಳವು ಮಾಡಿದ್ದ ವ್ಯಕ್ತಿ ಮನ ಪರಿವರ್ತನೆಗೊಂಡು ಅದನ್ನು ಹಿಂದಿರುಗಿಸುವ ಮೂಲಕ ತೋರಿದ ಅನಿರೀಕ್ಷಿತ ದಯೆಗೆ ಗೀತಾ ಅವರು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.ಇದೊಂದು ಮಾಂಗಲ್ಯ ಸರಕ್ಕಿರುವ ಶಕ್ತಿ ಎನ್ನಬಹುದಷ್ಟೆ..!

Leave a Reply

Your email address will not be published. Required fields are marked *

Optimized by Optimole
error: Content is protected !!