ಮೈಸೂರು : ಪೊಲೀಸ್ ಠಾಣೆಯಲ್ಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಮುಂದಾದ ರೌಡಿಶೀಟರ್.!

news.ashwasurya.in
ಅಶ್ವಸೂರ್ಯ/ಮೈಸೂರು:ಮೈಸೂರಿನ ಪೊಲೀಸ್ ಠಾಣೆಯ ಒಳಗೆ ರೌಡಿಶೀಟರ್ ಒಬ್ಬ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ವರದಿಯಾಗಿದೆ.
ವಿಜಯನಗರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು, ಬೋಗಾದಿ ನಿವಾಸಿಯಾದ ರೌಡಿಶೀಟರ್ ಎಸ್.ಸ್ವಾಮಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಆತ್ಮಹತ್ಯೆಗೆ ಕಾರಣವೇನು?
ಆರೋಪಿ ಸ್ವಾಮಿ ವಿರುದ್ಧ ಕೆಲವು ಪ್ರಕರಣಗಳಿದ್ದು ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಪೊಲೀಸರು ರೌಡಿ ಶೀಟ್ ತೆರೆದಿದ್ದರು. ಮುಂಬರುವ ಗೌರಿಗಣೇಶ ಹಬ್ಬ ಹಾಗೂ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ರೌಡಿಶೀಟರ್‌ಗಳನ್ನು ಪೊಲೀಸ್ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೌಡಿಶೀಟರ್ ಸ್ವಾಮಿ ಮನೆಗೆ ತೆರಳಿದ್ದ ಪೊಲೀಸರು, ಠಾಣೆಗೆ ಬರುವಂತೆ ಸೂಚಿಸಿದ್ದರಂತೆ.!
ಪೊಲೀಸ್ ಠಾಣೆಗೆ ಬರುವಾಗ ರೌಡಿಶೀಟರ್ ಡೀಸೆಲ್ ಸಮೇತ ಬಂದಿದ್ದಾನೆ.! ನನ್ನ ಮೇಲೆ ಅನಗತ್ಯವಾಗಿ ರೌಡಿ ಶೀಟ್ ತೆರೆದು ಮಾನಸಿಕ ಹಿಂಸೆ ಕೊಡುತ್ತಿದ್ದೀರಿ ನೀವುಗಳು.ನನ್ನ ರೌಡಿ ಶೀಟ್ ಕ್ಲೋಸ್ ಮಾಡದೇ ಇದ್ದರೆ ಇಲ್ಲೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕೂಗಾಡಿ ಡೀಸೆಲ್ ಮೈಮೇಲೆ ಸುರಿದುಕೊಂಡಿದ್ದನಂತೆ.! ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆತ್ಮಹತ್ಯೆ ಯತ್ನವನ್ನು ತಡೆದಿದ್ದಾರೆ.
ಈ ಸಂಬಂಧ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ರೀತ್ಯ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.



