


ಮಂಡ್ಯ : ಧರಿಸಿದ್ದ ಬಿಳಿಯ ಶರ್ಟ್ ನೆತ್ತರು ಹರಿಯಲು ಕಾರಣವಾಯ್ತು.!ಟಾರ್ಗೆಟ್ ಇದ್ದವನನ್ನು ಬಿಟ್ಟು ಮತ್ತೊಬ್ಬನ ಹತ್ಯೆ.!
news.ashwasurya.in
ಅಶ್ವಸೂರ್ಯ/ಮಂಡ್ಯ: ವ್ಯಕ್ತಿಯೊಬ್ಬ ಧರಿಸಿದ್ದ ಬಿಳಿಯ ಶರ್ಟ್ನಿಂದಾಗಿ ಟಾರ್ಗೆಟ್ ಮಾಡಿದವನನ್ನು ಬಿಟ್ಟು ಹಂತಕರ ಗ್ಯಾಂಗ್ ಮತ್ತೊಬ್ಬನನ್ನು ಹತ್ಯೆಗೈದಿರುವ ಘಟನೆ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ರಸ್ತೆಯಲ್ಲಿ ನಡೆದಿದೆ.

ವಡ್ಡರಹಳ್ಳಿ ಗ್ರಾಮದ ಅರುಣ್ (34) ಕೊಲೆಯಾದ ಅಮಾಯಕ ಯುವಕ. ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಅರುಣ್ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಊರಿಗೆ ಬಂದಿದ್ದ. ಈ ವೇಳೆ 8 ರಿಂದ10 ಮಂದಿ ದುಷ್ಕರ್ಮಿಗಳು ಸೇರಿ ಲಾಂಗು, ಮಚ್ಚು, ಡ್ರ್ಯಾಗರ್ನಿಂದ ಮನಬಂದಂತೆ ಅಟ್ಯಾಕ್ ಮಾಡಿ ಕೊಲೆ ಮಾಡಿದ್ದಾರೆ.

ಅಷ್ಟಕ್ಕೂ ಅ ರಾತ್ರಿ ನಡೆದಿದ್ದೇನು?
ಶುಕ್ರವಾರ (ಆ.8) ಒಂದೆಡೆ ವರ ಮಹಾಲಕ್ಷ್ಮಿ ಹಬ್ಬದ ಊಟ ಸವಿದು ಮಂದಿ ಮಲಗಿದ್ದರೆ ಊರಿಗೆ ಹಬ್ಬಕ್ಕೆಂದು ಬಂದಿದ್ದ ಅರುಣ್ ( ಹತ್ಯೆಯಾದ ವ್ಯಕ್ತಿ ) ರಾತ್ರಿ ಸ್ನೇಹಿತರಾದ ಸೂರ್ಯ, ಸಹೋದರ ಉಮೇಶ್ ಹಾಗೂ ಸಂಬಂಧಿ ದೇವರಾಜ್ ಜೊತೆಗೆ ಬಾರ್ನಲ್ಲಿ ಪಾರ್ಟಿ ಮಾಡಿದ್ದಾರೆ.ಅದೆ ಸಂಧರ್ಭದಲ್ಲಿ ಅದೆ ಬಾರ್ ಮುಂಭಾಗದಲ್ಲಿ ಸಿಕ್ಕ ವಿಕಾಸ್ ಎಂಬಾತನೊಂದಿಗೆ ಹಳೇ ದ್ವೇಷದ ಹಿನ್ನೆಲೆ ಮೃತ ಅರುಣ್ ಜೋತೆಯಲ್ಲಿ ಬಂದಿದ್ದ ಸೂರ್ಯ ಎಂಬ ವ್ಯಕ್ತಿ ಕಿರಿಕ್ ತೆಗೆದಿದ್ದ. 2 ವರ್ಷಗಳ ಹಿಂದಿನ ಜಗಳದ ವಿಚಾರ ತೆಗದು ಸೂರ್ಯ ವಿಕಾಸ್ ಮೇಲೆ ಹಲ್ಲೆ ಮಾಡಿದ್ದ. ಅಲ್ಲೆ ಇದ್ದ ಅರುಣ್ ಇವರಿಬ್ಬರ ಜಗಳ ಬಿಡಿಸಿ ಮತ್ತೆ ಪಾರ್ಟಿ ಮುಂದುವರಿಸಿದ್ದ. ಕೆಲ ಹೊತ್ತಿನ ಬಳಿಕ ದುಷ್ಕರ್ಮಿಗಳು ಸೂರ್ಯನ ಮೇಲೆ ಅಟ್ಯಾಕ್ಗೆ ಯತ್ನಿಸಿದ್ದರು, ಈ ವೇಳೆ ಸೂರ್ಯ & ಟೀಂ ಎಸ್ಕೇಪ್ ಆಗಿದ್ದಾರೆ.
ಸೂರ್ಯ ಬಿಳಿಯ ಶರ್ಟ್ ಹಾಕಿದ್ದಾನೆಂದು ವಿಕಾಸ್ ಹಂತಕರಿಗೆ ಹೇಳಿದ್ದ.! ಆದೇನು ಗ್ರಹಾಚಾರವೋ ಅದೇ ಸಮಯದಲ್ಲಿ ಅರುಣ್ ಕೂಡ ಬಿಳಿಯ ಶರ್ಟ್ ಹಾಕಿದ್ದ. ಹಾಗಾಗಿ ಬಿಳಿಯ ಶರ್ಟ್ ಹಾಕಿದ್ದ ಅರುಣ್ನನ್ನೇ ಸೂರ್ಯ ಎಂದು ತಿಳಿದು ಹಿಂಬಾಲಿಸಿ ಕೊಂಡು ಬಂದಿದ್ದ ಹಂತಕರು,

ಹೆಮ್ಮನಹಳ್ಳಿ ರಸ್ತೆಯ ನಿರ್ಜನ ಪ್ರದೇಶದ ಬಳಿ ಸೂರ್ಯ ಎಂದು ತಿಳಿದು ಹಂತಕರು ಅಮಾಯಕ ಅರುಣ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ದುಷ್ಕರ್ಮಿಗಳು ಎರಗುತ್ತಿದ್ದಂತೆ ಅರುಣ್ ಸಂಬಂಧಿ ದೇವರಾಜು ತಪ್ಪಿಸಿಕೊಂಡು ಓಡಿದ್ದಾನೆ. ಬಳಿಕ ಅರುಣ್ಗೆ ಮನಬಂದಂತೆ ಡ್ರ್ಯಾಗರ್ನಿಂದ ಚುಚ್ಚಿ ಕೊಲೆ ಮಾಡಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ತನಿಖೆ ಮುಂದುವರಿದಿದೆ.



