Headlines

ಮುಖ್ಯಮಂತ್ರಿ ಸ್ಥಾನ: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ, ‘ಕೈ’ ಪಾಳಯದಲ್ಲಿ ಭರ್ಜರಿ ಚರ್ಚೆ.!

ಅಶ್ವಸೂರ್ಯ/ಬೆಂಗಳೂರು:1999 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಾಗ ಎಸ್.ಎಂ. ಕೃಷ್ಣ ಅವರಿಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಬೇಕಾಯಿತು ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಭಾನುವಾರ ವಿಜಯಪುರದಲ್ಲಿ ಮಾತನಾಡಿದ್ದ ಖರ್ಗೆ ಅವರು, ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶ ನನಗೆ ಇತ್ತು. ಆದರೆ ಅದು ಕೈ ತಪ್ಪಿತು. 1999ರಲ್ಲಿ ಸಿಎಂ ಆಗುವ ಅವಕಾಶ ಇದ್ದರೂ ಮತ್ತೆ ಕೈತಪ್ಪಿತು. ನಾನು ವಿಧಾನಸಭಾ ವಿರೋಧ ಪಕ್ಷದ ನಾಯಕನಾಗಿ ಹೋರಾಟ ಮಾಡಿ ಕಾಂಗ್ರೆಸ್ ಅನ್ನು ಪ್ರಬಲವಾಗಿ ಸಂಘಟಿಸಿದರು ನಾಲ್ಕು ತಿಂಗಳ ಹಿಂದೆ ಪಕ್ಷ ಸೇರಿದ್ದ ಎಸ್.ಎಂ ಕೃಷ್ಣ ಮುಖ್ಯಮಂತ್ರಿ ಆದರು.ಸತತವಾಗಿ ಅವಕಾಶಗಳು ನನ್ನ ಕೈತಪ್ಪಿತ್ತು.!

ಕಾಂಗ್ರೆಸ್​ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಕಷ್ಟು ಪ್ರಯತ್ನಿಸಿದೆ. ಆದರೆ, ಸಿಎಂ ಆಗಿದ್ದು ಎಸ್.ಎಂ ಕೃಷ್ಣಾ ಅವರು‌. ನಾನು ಸಲ್ಲಿಸಿದ ಸೇವೆ ನೀರಲ್ಲಿ ಹೊಮ ಮಾಡಿದಂತಾಗಿತ್ತು.ಸಾಕಷ್ಟು ಮಂದಿ ಸ್ವಾಮೀಜಿಗಳೇ ನಾನು ಪಕ್ಷಕ್ಕಾಗಿ ದುಡಿದದ್ದು ನೀರನಲ್ಲಿ ಹೋಮ ಮಾಡಿದಂತಾಯಿತು ಎಂದು ಹೇಳಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಿಂದ ಈಗ ಎಐಸಿಸಿ ಅಧ್ಯಕ್ಷನಾಗಿದ್ದೇನೆ. ಅಧಿಕಾರದ ಬೆನ್ನು ಹತ್ತಿ ನಾನು ಎಂದಿಗೂ ಹೋದವನಲ್ಲ. ಅದಾಗೇ ಎಲ್ಲವೂ ನನ್ನ ಬಳಿಗೆ ಬಂದಿದೆ. ಪ್ರಯತ್ನದ ಫಲದಿಂದ ಸಿಕ್ಕಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನಾಯಕತ್ವ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿರುವ ನಡುವಲ್ಲೇ ಖರ್ಗೆಯವರು ನೀಡಿರುವ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ
ಸಿದ್ದರಾಮಯ್ಯ ಅವರ ಉತ್ತರಾಧಿಕಾರಿಯಾಗಿ ಖರ್ಗೆ ಅವರನ್ನು ಆಯ್ಕೆ ಮಾಡಿದರೆ ಅದಕ್ಕೆ ನಮ್ಮ ಒಪ್ಪಿಗೆಯಿದೆ. ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಂಡರೆ ಅದನ್ನು ಸ್ವಾಗತಿಸುತ್ತೇವೆಂದು ಕೆಲ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಖರ್ಗೆ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಡಿಕೆ.ಶಿವಕುಮಾರ್ ಅವರು, ಅದರಲ್ಲಿ ಯಾವುದೇ ತಪ್ಪಿಲ್ಲ. ಅವರು ಪಕ್ಷದ ಹಿರಿಯ ನಾಯಕರಾಗಿರುವುದರಿಂದ, ಪಕ್ಷಕ್ಕಾಗಿ ಶ್ರಮಿಸಿರುವುದರಿಂದ ಅವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆಂದು ಹೇಳಿದ್ದಾರೆ.

ರಾಜ್ಯ ರಾಜಕಾರಣಕ್ಕೆ ಖರ್ಗೆ ಮರಳುವ ಸಾಧ್ಯತೆಯ ಕುರಿತು ಪ್ರಶ್ನೆಗೆ ಉತ್ತರಿಸಿ, ಪ್ರತಿಯೊಬ್ಬರಿಗೂ ಅವರವರ ಅಭಿಪ್ರಾಯ ವ್ಯಕ್ತಪಡಿಸಿರುವ ಹಕ್ಕಿದೆ ಎಂದು ತಿಳಿಸಿದ್ದಾರೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೂಡ ಖರ್ಗೆ ರಾಜ್ಯ ರಾಜಕೀಯಕ್ಕೆ ಮರಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ. ಖರ್ಗೆ ಪ್ರಧಾನಿಯಾಗಲು ಅರ್ಹರು ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಈ ನಡುವೆ ರಾಜ್ಯ ಬಿಜೆಪಿ, ದಲಿತ ನಾಯಕರು ಅಧಿಕಾರದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವುದನ್ನು ಕಾಂಗ್ರೆಸ್ ಹೈಕಮಾಂಡ್ ವಿರೋಧಿಸುತ್ತದೆ ಎಂದು ಆರೋಪಿಸಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!