ಸೊರಬ : ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿ.
ಭಾರಿ ಮಳೆಗೆ ಕುಸಿದ ಕೆರೆ ಏರಿ: ಗ್ರಾಮಸ್ಥರಲ್ಲಿ ಆತಂಕ..
news.ashwasurya.in
ಅಶ್ವಸೂರ್ಯ/ಸೊರಬ: ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು ಕ್ಯಾಸನೂರು ಗ್ರಾಮದ ವಾಸಪ್ಪ ಎಂಬುವವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

ಮನೆ ಮತ್ತು ಕಾರು ನಿಲ್ಲಿಸುವ ಜಾಗದ ಮಧ್ಯಭಾಗ ಮರ ಬಿದ್ದಿದ್ದು ಕಾರಿಗೆ ಯಾವುದೇ ಹಾನಿಯಾಗಿಲ್ಲ. ಅದೃಷ್ಟವಶಾತ್ ಹೆಚ್ಚಿನ ಅಪಾಯ ತಪ್ಪಿದ್ದು ವಿದ್ಯುತ್ ಕೂಡ ಇಲ್ಲದಿದ್ದರಿಂದ ಮನೆಯವರು ನಿಟ್ಟುಸಿರು ಬಿಡುವಂತಾಗಿದೆ.
ಮಳೆಯಿಂದ ಮನೆಗೆ ಹೆಚ್ಚಿನ ಹಾನಿಯಾಗಿದ್ದು ಅಧಿಕಾರಿಗಳು ಮತ್ತು ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಮಳೆಹಾನಿ ಪರಿಹಾರ ನಿಧಿಯಿಂದ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರಾದ ವಿಕಾಸ್ ಕ್ಯಾಸನೂರು ಆಗ್ರಹಿಸಿದ್ದಾರೆ.
ಭಾರಿ ಮಳೆಗೆ ಕುಸಿದ ಕೆರೆ ಏರಿ: ಗ್ರಾಮಸ್ಥರಲ್ಲಿ ಆತಂಕ
ಸೊರಬ : ಭಾರಿ ಮಳೆಗೆ ತಾಲ್ಲೂಕಿನ ವಿವಿಧ ಕಡೆ ಅವಾಂತರಗಳು ಉಂಟಾಗುತ್ತಿವೆ. ತಾಲ್ಲೂಕಿನ ದೇವತಿ ಕೊಪ್ಪ ಉರಗನಹಳ್ಳಿಯ ದೊಡ್ಡ ಕೆರೆ ಏರಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕುಸಿದಿದ್ದು ಅಪಾರ ಪ್ರಮಾಣದ ಕೃಷಿ ಭೂಮಿಗೆ ನೀರು ನುಗ್ಗುವ ಸಾಧ್ಯತೆಯಿದ್ದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಬೇಸಿಗೆಯ ಸಮಯದಲ್ಲಿ ಇಲ್ಲಿನ ಕೃಷಿ ಜಮೀನಿಗೆ ಈ ಕೆರೆಯು ಪ್ರಮುಖ ನೀರಾವರಿ ಮೂಲವಾಗಿದ್ದು ಪ್ರತಿ ವರ್ಷ ಕೆರೆ ಏರಿ ಕುಸಿಯುತ್ತಿರುವುದರಿಂದ ತಕ್ಷಣವೇ ಗಮನಹರಿಸಿ ಶಾಶ್ವತ ಪರಿಹಾರ ಒದಗಿಸುವ ಕಡೆ ಕಾರ್ಯೋನ್ಮುಖವಾಗಬೇಕು.
ಈ ಹಿಂದಿನ ಶಾಸಕರ ಅವಧಿಯಲ್ಲಿ 46 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿ ಮಾಡಿದ್ದು ಉಪಯೋಗಕ್ಕೆ ಬಾರದಂತಾಗಿದೆ. ಕೇವಲ ದಾಖಲೆಗಳಲ್ಲಿ ಮಾತ್ರ ಕಾಮಗಾರಿಯಾಗಿದ್ದು ವಾಸ್ತವವಾಗಿ ಯಾವುದೇ ಉಪಯೋಗವಾಗಿಲ್ಲ ಎಂದು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಸಂಜಯ್ ದೇವತಿಕೊಪ್ಪ ಆರೋಪಿಸಿದ್ದಾರೆ.
- ವರದಿ: ವಿಕಾಸ್ ಕ್ಯಾಸನೂರು


