Headlines

ತೀರ್ಥಹಳ್ಳಿ ಕ್ಷೇತ್ರದ ಶಿಕ್ಷಣಾಧಿಕಾರಿ ಬಿಜೆಪಿ ಸಂಘಟನಾ ಕಾರ್ಯದರ್ಶಿಯೇ.? : ಬಿ.ಆರ್.ರಾಘವೇಂದ್ರ ಶೆಟ್ಟಿ ಪ್ರಶ್ನೆ.

ಅಶ್ವಸೂರ್ಯ/ತೀರ್ಥಹಳ್ಳಿ :ತೀರ್ಥಹಳ್ಳಿಯ ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್, ಸ್ವೆಟರ್ ವಿತರಣೆ ಕಾರ್ಯಕ್ರಮವನ್ನು ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿಜೆಪಿ ಕಾರ್ಯಕ್ರಮವನ್ನಾಗಿ ಸಂಪೂರ್ಣ ಮಾರ್ಪಡಿಸಿದ್ದಾರೆ. ಸರ್ಕಾರಿ ಯೋಜನೆ ವಿತರಣೆ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಶಿಷ್ಟಾಚಾರ ಪಾಲನೆ ಮಾಡದ ಕ್ಷೇತ್ರ ಶಿಕ್ಷಣಾಧಿಕಾರಿ ಬಿಜೆಪಿ ಸಂಘಟನಾ ಕಾರ್ಯದರ್ಶಿಯೇ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ, ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಬಿ.ಆರ್. ರಾಘವೇಂದ್ರ ಶೆಟ್ಟಿ ಅವರು ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ಅವರ ಕಚೇರಿ ಮುಂಭಾಗ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ಯೋಜನೆಯಡಿ ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಲು ಬಿಡುಗಡೆಗೊಂಡ ಬ್ಯಾಗ್ ಮತ್ತು ಸ್ವೆಟರ್‌ಗಳನ್ನು ತೀರ್ಥಹಳ್ಳಿಯ ಬಿಇಓ ನೇರವಾಗಿ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರ ಗಮನಕ್ಕೆ ತಾರದೆ ಸಂಸದರ ಮೂಲಕ ಹಂಚಿಕೆ ಮಾಡಿದ್ದಾರೆ. ಅಲ್ಲದೇ ಕಾರ್ಯಕ್ರಮದಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ (ಎಂಎಡಿಬಿ) ಅಧ್ಯಕ್ಷರು ಹಾಗೂ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು, ವಿಧಾನ ಪರಿಷತ್ತು ಸದಸ್ಯರನ್ನು ಕೈಬಿಡಲಾಗಿದೆ. ಇದು ಒಕ್ಕೂಟ ವ್ಯವಸ್ಥೆಯನ್ನು ಮುರಿಯುವ ಪ್ರಯತ್ನವಾಗಿದೆ.

ವೇದಿಕೆ ಕಾರ್ಯಕ್ರಮದಲ್ಲಿಯೂ ಶಿಕ್ಷಣ ಸಚಿವರ ಬಗ್ಗೆ ಉಲ್ಲೇಖ ಮಾಡಿಲ್ಲ. ಇದು ಸಂಸದರು, ಶಾಸಕರು ವೈಯಕ್ತಿಕ ಹಣದಿಂದ ಕೊಟ್ಟಿರುವುದೇ ಆಗಿದ್ದರೆ ನಾವೇನು ಪ್ರಶ್ನಿಸುವುದಿಲ್ಲ. ಆದರೆ ಇದೂ ಪೂರ್ಣ ಕೇಂದ್ರ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮವಾಗಿದೆ. ರಾಜ್ಯ ಸರ್ಕಾರವೇ ಮೂಲಕವೇ ಅನುಷ್ಠಾನವಾಗಬೇಕಾದ ಈ ಕಾರ್ಯಕ್ರಮವನ್ನು ಶಿಕ್ಷಣಾಧಿಕಾರಿ ಮೊದಲೇ ಸಚಿವರ ಗಮನಕ್ಕೆ ತಂದಿಲ್ಲ ಎಂದು ಆರೋಪಿಸಿದ್ದಾರೆ.

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಸ್ವೆಟರ್ ವಿತರಿಸುವ ಕೇಂದ್ರ ಸರ್ಕಾರದ ಯೋಜನೆಯ ಕಾರ್ಯ ಶ್ಲಾಘನೀಯ. ಅದನ್ನೇ ನೆಪ ಮಾಡಿಕೊಂಡು ಕ್ಷೇತ್ರ ಶಿಕ್ಷಣಾಧಿಕಾರಿ ತಮ್ಮ ಕಚೇರಿಯನ್ನು ಬಿಜೆಪಿ ಕಚೇರಿ ಎಂದು ತಿಳಿದಂತಿದೆ. ಅದೊಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯನ್ನು ಬಿಜೆಪಿ ಮೋರ್ಚಾವಾಗಿ ಬದಲಾಯಿಸಲು ಪ್ರಯತ್ನಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸಿಆರ್‌ಪಿ, ಮುಖ್ಯಶಿಕ್ಷಕರು, ಶಿಕ್ಷಕರಿಗೆ ನೋಟೀಸ್ ಜಾರಿ ಮಾಡಿ ಅವರ ಮೇಲೆ ಶಿಸ್ತುಕ್ರಮ ಜರುಗಿಸಬೇಕೆಂದು ಬಿ.ಆರ್.ರಾಘವೇಂದ್ರ ಶೆಟ್ಟಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!