Headlines

ಪ್ರಿಯಕರನ ಜೊತೆ ಓಡಿ ಹೋಗಿದ್ದ ಪತ್ನಿ.! 5 ಕೋಟಿ ಪರಿಹಾರಕ್ಕಾಗಿ ಕರ್ನಾಟಕದ ಹೈಕೋರ್ಟ್ ಮೆಟ್ಟಿಲೇರಿದ ಪತಿ!ಎನಿದು ಪ್ರಕರಣ.?

ಅಶ್ವಸೂರ್ಯ/ಮೈಸೂರು : ಹೆಂಡತಿಯ ಕೊಲೆ ಆರೋಪದಲ್ಲಿ ಜೈಲು ಸೇರಿ ಎರಡು ವರ್ಷ ಜೈಲಿನಲ್ಲಿ ಕಳೆದ ವ್ಯಕ್ತಿ, ಬಿಡುಗಡೆಯಾದ ಬಳಿಕವೆ ಗೊತ್ತಾಗಿದ್ದು ಸತ್ತ ಹೆಂಡತಿ ಜೀವಂತವಾಗಿ ಇದ್ದಾಳೆ ಎಂದು ಆಕೆಯನ್ನು ನೋಡಿದ ಮೇಲೆ.! ಸರ್ಕಾರದ ಪರಿಹಾರಕ್ಕೆ ಅಸಮಾಧಾನಗೊಂಡ ಎರಡು ವರ್ಷ ಜೈಲಿನಲ್ಲಿ ಕಳೆದ ವ್ಯಕ್ತಿ ಈಗ 5 ಕೋಟಿ ಪರಿಹಾರ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಿಯಕರನೊಂದಿಗೆ ಓಡಿ ಹೋದ ಪತ್ನಿಯ ಸುಳಿವು ಸಿಗದ ಹಿನ್ನೆಲೆಯಲ್ಲಿ ಆಕೆಯನ್ನು ಕೊಂದಿದ್ದಾನೆಂದು 18 ತಿಂಗಳು ಜೈಲು ಸೇರಿದ್ದ ವ್ಯಕ್ತಿ ಜೈಲಿನಿಂದ ಬಿಡುಗಡೆಯಾದ ಬಳಿಕ ಪತ್ನಿಯನ್ನು ಪ್ರಿಯಕರನೊಂದಿಗೆ ನೋಡಿದ್ದ, ಬಳಿಕ ಪೊಲೀಸ್‌ ಇಲಾಖೆ ಮಾಡಿದ ತಪ್ಪಿಗೆ ಸರ್ಕಾರದಿಂದ ಪರಿಹಾರ ಘೋಷಿಸಲಾಗಿತ್ತು. ಇದೀಗ ಆ ವ್ಯಕ್ತಿ 5 ಕೋಟಿ ಪರಿಹಾರ ಕೇಳಿ ಹೈಕೋರ್ಟ್ ಮೆಟ್ಟಲೇರಿದ್ದಾರೆ. ಕೃಷ್ಣರಾಜನಗರ ತಾಲೂಕಿನ ಬಸವನಹಳ್ಳಿ ಮೂಲದ ಕುರುಬರ ಸುರೇಶ್, ಪತ್ನಿ ಹತ್ಯೆಯ ಆರೋಪದಲ್ಲಿ ಸುಮಾರು ಎರಡು ವರ್ಷಗಳ ಕಾಲ ಜೈಲು ಜೀವನ ಅನುಭವಿಸಿದ್ದರು. ಆದರೆ, ಪತ್ನಿ ಜೀವಂತವಾಗಿರುವುದು ಸಾಬೀತಾಗುತ್ತಿದ್ದಂತೆ, ತನ್ನನ್ನು ಅಕ್ರಮವಾಗಿ ಜೈಲು ಶಿಕ್ಷೆ ವಿಧಿಸಿದ್ದಕ್ಕಾಗಿ ಮತ್ತು ತನಿಖಾಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕೆಂದು ಹಾಗೂ 5 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
2025ರ ಏಪ್ರಿಲ್‌ನಲ್ಲಿ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸುರೇಶ್ ಅವರನ್ನು ಸಂಪೂರ್ಣ ನಿರಪರಾಧಿ ಎಂದು ಗೌರವಪೂರ್ವಕವಾಗಿ ಮುಕ್ತಗೊಳಿಸಿತ್ತು. ಕರ್ನಾಟಕ ಗೃಹ ಇಲಾಖೆಗೆ, ಸುರೇಶ್ ಅವರಿಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ನಿರ್ದೇಶಿಸಿತ್ತು. ಈ ಪರಿಹಾರ ಪ್ರಮಾಣಕ್ಕೆ ಅಸಮಾಧಾನಗೊಂಡ ಸುರೇಶ್ ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ತಮ್ಮ ಮೇಲ್ಮನವಿ ಅರ್ಜಿಯಲ್ಲಿ ಸುರೇಶ್, ಅಂದಿನ ತನಿಖಾಧಿಕಾರಿ ಪ್ರಕಾಶ್ ಬಿಜಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್, ಸಬ್ ಇನ್ಸ್‌ಪೆಕ್ಟರ್‌ಗಳಾದ ಪ್ರಕಾಶ್ ಯಟ್ಟಿಮಣಿ ಮತ್ತು ಮಹೇಶ್ ಬಿಕೆ, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸೋಮಶೇಖರ್ – ಈ ಐವರು ಅಧಿಕಾರಿಗಳನ್ನು ಹೆಸರಿಸಿದ್ದಾರೆ. ಅವರು ಸಾಕ್ಷ್ಯವನ್ನು ತಿರುಚಿ, ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ತನಿಖೆಯಲ್ಲಿ ಸರಿಯಾದ ಪ್ರಕ್ರಿಯೆ ಪಾಲಿಸದೆ ಅಕ್ರಮ ಬಂಧನಕ್ಕೆ ನಾನು ಒಳಗಾಗಬೇಕಾಯಿತು ಎಂಬುದು ಸುರೇಶ್ ಅವರ ವಾದ. ಅಧಿಕಾರಿಗಳ ವಿರುದ್ಧ ಆರ್ಥಿಕ ನಷ್ಟಕ್ಕೆ ಪರಿಹಾರವನ್ನೂ, ಕ್ರಿಮಿನಲ್ ಕ್ರಮವನ್ನೂ ಅವರು ಹೈಕೋರ್ಟ್‌ನಲ್ಲಿ ಕೋರಿದ್ದಾರೆ.

ಎನಿದು ಪ್ರಕರಣ.? : ಇದು 2021ರಲ್ಲಿ ನೆಡೆದ ಘಟನೆ, ಸುರೇಶ್ ಅವರ ಪತ್ನಿ ಮಲ್ಲಿಗೆ ನಾಪತ್ತೆಯಾಗಿದ್ದಕ್ಕೆ ಖುದ್ದು ತಾನೇ ಹೋಗಿ ಸುರೇಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2022ರಲ್ಲಿ ಮೈಸೂರು ಜಿಲ್ಲೆಯ ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಸ್ಥಿಪಂಜರದ ಅವಶೇಷ ಒಂದು ಪತ್ತೆಯಾಗಿದ್ದು, ಅವು ಮಲ್ಲಿಗೆಯದ್ದೇ ಎಂದು ಪೊಲೀಸರು ಶಂಕಿಸಿದ್ದರು. ಆದರೆ, ಡಿಎನ್‌ಎ ಪರೀಕ್ಷೆಯಲ್ಲಿ ಅವಶೇಷಗಳು ಮಲ್ಲಿಗೆಯದ್ದಲ್ಲವೆಂಬುದು ದೃಢವಾಗಿದ್ದರೂ ಸುರೇಶ್ ಅವರನ್ನು ಬಂಧಿಸಿ, ಪತ್ನಿ ಹತ್ಯೆಯ ಆರೋಪದಡಿ ಜೈಲಿಗೆ ಕಳಿಸಲಾಗಿತ್ತು. ನ್ಯಾಯಾಲಯದ ತೀರ್ಪು ಬರುವವರೆಗೆ ಅವರು ಸುಮಾರು 18 ತಿಂಗಳು ಬಂಧನದಲ್ಲೇ ಉಳಿದರು. ಬಳಿಕ ಅವರನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಲಾಯಿತು.
2025ರ ಏಪ್ರಿಲ್‌ನಲ್ಲಿ, ಮಲ್ಲಿಗೆ ಮಡಿಕೇರಿಯ ಒಂದು ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿದ್ದಾಗ ಸುರೇಶ್ ಅವರ ಸ್ನೇಹಿತರಿಗೆ ಕಂಡುಬಂದಿದ್ದರು. ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಮೈಸೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಇದರಿಂದಾಗಿ ಫೋರೆನ್ಸಿಕ್ ಪುರಾವೆಗಳ ನಿರ್ವಹಣೆ, ತನಿಖಾ ಕ್ರಮಗಳಲ್ಲಿ ಗಂಭೀರ ಲೋಪಗಳ ವಿಚಾರದಲ್ಲಿ ಹಲವು ಪ್ರಶ್ನೆಗಳು ಮೂಡಿದವು.
ಸಾಕ್ಷ್ಯ ತಿರುಚಿಕೆಯ ಆರೋಪದಲ್ಲಿ ಇನ್ಸ್‌ಪೆಕ್ಟರ್ ಪ್ರಕಾಶ್ ಬಿಜಿ ವಿರುದ್ಧ ಮಾತ್ರ ಕ್ರಿಮಿನಲ್ ಕ್ರಮ ಕೈಗೊಳ್ಳಲು ಸೆಷನ್ಸ್ ನ್ಯಾಯಾಲಯ ಶಿಫಾರಸು ಮಾಡಿತ್ತು. ಆದರೆ, ಸುರೇಶ್ ತಮ್ಮ ಮೇಲ್ಮನವಿ ಅರ್ಜಿಯಲ್ಲಿ ಆರೋಪಿತರ ಪಟ್ಟಿ ಎಲ್ಲಾ ಐವರು ಅಧಿಕಾರಿಗಳ ಮೇಲೆ ವಿಸ್ತರಿಸಬೇಕೆಂದು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಅಲ್ಲದೆ, ನ್ಯಾಯಾಲಯದ ದಾಖಲೆಯಲ್ಲಿನ “ಆರೋಪಿ” ಎಂಬ ಪದವನ್ನು ತೆಗೆದು ಹಾಕಿ, ತಮ್ಮನ್ನು “ಬಲಿಪಶು” ಎಂದೇ ದಾಖಲಿಸಬೇಕೆಂದು ಅವರು ವಿನಂತಿಸಿಕೊಂಡಿದ್ದಾರೆ. ಈ ನಡುವೆ, ಕಳೆದ ಮೂರು ವರ್ಷಗಳಿಂದ ಮಲ್ಲಿಗೆ ಎಲ್ಲಿ ಇದ್ದಳು? ಆಕೆಯ ಕಣ್ಮರೆ ಹೀಗೆ ಏಕೆ ಎಂಬ ಬಗ್ಗೆ ತನಿಖೆಗಳು ಇನ್ನೂ ನಡೆಯುತ್ತಿವೆ.ಒಟ್ಟಿನಲ್ಲಿ ಪೊಲೀಸರು ಮಾಡಿದ ಯಡವಟ್ಟಿನಿಂದ ಅಮಾಯಕನೊಬ್ಬ ಹದಿನೆಂಟು ತಿಂಗಳು ಜೈಲಿನಲ್ಲಿ ಕಳೆಯುವಂತಾಗಿದ್ದು ದುರಂತವೆ‌ ಹೌದು.!

Leave a Reply

Your email address will not be published. Required fields are marked *

Optimized by Optimole
error: Content is protected !!