Headlines

ರಾಜಸ್ಥಾನ:ಪಾಕಿಸ್ತಾನ-ಭಾರತ ಗಡಿಯಲ್ಲಿ ಹಿಂದೂ ಯುವಕ, ಅಪ್ರಾಪ್ತೆಯ ಮೃತದೇಹ ಪತ್ತೆ.! ನಿಗೂಢ ಸಾವಿಗೆ ಕಾರಣವೇನು?

ರಾಜಸ್ಥಾನ:ಪಾಕಿಸ್ತಾನ-ಭಾರತ ಗಡಿಯಲ್ಲಿ ಹಿಂದೂ ಯುವಕ, ಅಪ್ರಾಪ್ತೆಯ ಮೃತದೇಹ ಪತ್ತೆ.! ನಿಗೂಢ ಸಾವಿಗೆ ಕಾರಣವೇನು?

ಅಶ್ವಸೂರ್ಯ/ಜೈಪುರ : ಪಾಕಿಸ್ತಾನದ ಹಿಂದೂ ಯುವಕ, ಅಪ್ರಾಪ್ತೆಯ ಮೃತದೇಹ ರಾಜಸ್ತಾನದ ಪಾಕಿಸ್ತಾನದ ಗಡಿ ಭಾಗದಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಪಾಕಿಸ್ತಾನ ಮೂಲದ ಹಿಂದೂ ಧರ್ಮದ ಇಬ್ಬರ ಮೃತದೇಹ ಭಾರತ-ಪಾಕ್‌ ಅಂತಾರಾಷ್ಟ್ರೀಯ ಗಡಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ನಿಗೂಢ ರೀತಿಯಲ್ಲಿ ಪತ್ತೆಯಾಗಿದೆ. ಮೃತದೇಹದ ಪಕ್ಕದಲ್ಲಿ ಗುರುತಿನ ಚೀಟಿಯೂ ಕಂಡು ಬಂದಿದ್ದು ಜೈಸಲ್ಮೇರ್‌ನ ಭಾರತ-ಪಾಕಿಸ್ತಾನ ಗಡಿಯ ಬಳಿಯ ಮರಳು ರಾಶಿಯಲ್ಲಿ ಪತ್ತೆಯಾದ ಯುವಕ ಮತ್ತು ಅಪ್ರಾಪ್ತೆಯ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದ್ದು. ಶವದ ಸ್ಥಿತಿ ನೋಡಿದರೆ ಇವರು ಮೃತಪಟ್ಟು ಏಳೆಂಟು ದಿನಗಳೆ ಕಳೆದಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಅಂತಾರಾಷ್ಟ್ರೀಯ ಗಡಿಯಿಂದ ಸುಮಾರು 10 ರಿಂದ 12 ಕಿ.ಮೀ.ದೂರದ ಭಾರತದ ಗಡಿ ಒಳಗೆ ತನೌಟ್ ಮತ್ತು ಸಾಧೇವಾಲಾ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಐಎಎನ್‌ಎಸ್‌ ಸುದ್ದಿಸಂಸ್ಥೆ ವರದಿಯ ಪ್ರಕಾರ, ಮೃತದೇಹದ ಬಳಿ ಪಾಕಿಸ್ತಾನದ ಮೊಬೈಲ್‌ ಸಿಮ್‌ ಮತ್ತು ಗುರುತಿನ ಚೀಟಿ ಪತ್ತೆಯಾಗಿರುವುದರಿಂದ ಇವರು ಪಾಕ್‌ ಮೂಲದವರೆಂದು ದೃಢಪಡಿಸಲಾಗಿದ್ದು. ಈ ಗುರುತಿನ ಚೀಟಿ ಪ್ರಕಾರ ಈ ಇಬ್ಬರ ವಯಸ್ಸು 20 ವರ್ಷದೊಳಗಿದೆ. ಯುವಕನನ್ನು ರವಿ ಕುಮಾರ್‌ (18) ಮತ್ತು ಅಪ್ರಾಪ್ತೆಯನ್ನು ಶಾಂತಿ ಭಾಯಿ (15) ಎಂದು ಗುರುತಿಸಲಾಗಿದೆ. ವಾರದ ಹಿಂದ ಇವರು ಗಡಿ ದಾಟಿ ಭಾರತಕ್ಕೆ ನುಸುಳಲು ಯತ್ನಿಸಿದ್ದರು ಎಂದು ಶಂಕಿಸಲಾಗಿದೆ.
ಮೃತದೇಹ ಪತ್ತೆಯಾದ ಮಾಹಿತಿ ತಿಳಿದ ತಕ್ಷಣ ಹಿರಿಯ ಪೊಲೀಸ್ ಮತ್ತು ಗಡಿ ಭದ್ರತಾ ಪಡೆ (BSF) ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇದಾದ ಬಳಿಕ ಗಡಿಯಲ್ಲಿ ಭದ್ರತೆ ಇನ್ನಷ್ಟು ಬಿಗಿಗೊಳಿಸಲಾಗಿದ್ದು ಬಿಎಸ್‌ಎಫ್ ಪಡೆ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಗಡಿ ಆಚೆಯಿಂದ ಭಾರತೀಯ ಪ್ರದೇಶಕ್ಕೆ ನುಸುಳುವಿಕೆ ಮಾಡಿರುವುದಕ್ಕೆ ಯಾವುದೇ ಕುರುಹುಗಳು ಅಥವಾ ಹೆಜ್ಜೆಗುರುತುಗಳು ಕಂಡುಬಂದಿಲ್ಲ. ಇಬ್ಬರ ಬಗ್ಗೆ ಮಾಹಿತಿ ಪಡೆಯಲು ಬಿಎಸ್‌ಎಫ್ ವಿದೇಶಿಯರ ನೋಂದಣಿ ಕಚೇರಿ (FRO) ಅನ್ನು ಸಹ ಸಂಪರ್ಕಿಸುತ್ತಿದೆ.

ಸ್ಥಳೀಯ ವರದಿಗಳ ಪ್ರಕಾರ, ಮೇಲ್ನೋಟಕ್ಕೆ ಇಬ್ಬರೂ ದಾರಿ ತಪ್ಪಿ ಈ ಕಡೆ ಬಂದಿದ್ದು, ಹಸಿವು ಮತ್ತು ಬಾಯಾರಿಕೆಯಿಂದ ಬಳಲಿ ಸಾವನ್ನಪ್ಪಿದ್ದಾರೆ ಎನ್ನುವುದು.?ಆದರೂ ಸಾವಿನ ನಿಜವಾದ ಕಾರಣ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಪೊಲೀಸರು ಶವಗಳನ್ನು ರಾಮಗಢ ಶವಾಗಾರದಲ್ಲಿ ಇರಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಅದು ಹೊರ ಬಂದ ಬಳಿಕವೆ ಸಾವಿಗೆ ನಿಜವಾದ ಕಾರಣ ಗೊತ್ತಾಗಲಿದೆ. ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು,ತೀವ್ರ ತನಿಖೆಗೆ ಮುಂದಾಗಿದ್ದಾರೆ. ಶವಗಳನ್ನು ಗುರುತಿಸಲು ಮತ್ತು ಘಟನೆಯ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.
”ಗಡಿ ಪ್ರದೇಶದಲ್ಲಿ ಸಮಗ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಇಲ್ಲಿಯವರೆಗೆ, ಪಾಕಿಸ್ತಾನದ ಕಡೆಯಿಂದ ಇತ್ತೀಚೆಗೆ ನುಸುಳುವಿಕೆಯನ್ನು ಸೂಚಿಸುವ ಯಾವುದೇ ಪುರಾವೆಗಳು ಅಥವಾ ಹೆಜ್ಜೆಗುರುತುಗಳು ಕಂಡುಬಂದಿಲ್ಲ” ಎಂದು ಬಿಎಸ್‌ಎಫ್ ಐಜಿ ಎಂಎಲ್ ಗರ್ಗ್ ಟೈಮ್ಸ್‌ ಆಫ್‌ ಇಂಡಿಯಾಕ್ಕೆ ತಿಳಿಸಿದ್ದಾರೆ. ಮೃತರು ಯಾಕಾಗಿ ಭಾರತದತ್ತ ಬಂದಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲೂ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!