
ಚಿತ್ರದುರ್ಗ : ರಾಜೇಂದ್ರ ಶ್ರೀನಿವಾಸ್
ಎಂಬಾತನನ್ನು ಬಾತ್ರೂಮಲ್ಲಿ ಹತ್ಯೆ ಮಾಡಿದ್ದ 7 ಆರೋಪಿಗಳ ಬಂಧನ.!

news.ashwasurya.in

ಅಶ್ವಸೂರ್ಯ/ಚಿತ್ರದುರ್ಗ: ಚಿತ್ರದುರ್ಗದಲ್ಲಿ ನಡೆದಿದ್ದ ರಾಜೇಂದ್ರ ಶ್ರೀನಿವಾಸ್ (30) ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಹೊಸದುರ್ಗ ಪೊಲೀಸರು ಯಶಸ್ವಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಹುಣವಿನಡು ಗ್ರಾಮದಲ್ಲಿ ಬಾತ್ರೂಮಲ್ಲಿ ಸ್ನಾನ ಮಾಡುತ್ತಿದ್ದ ಸಂಧರ್ಭದಲ್ಲಿ ಮನೆಯ ಒಳ ನುಗ್ಗಿದ ಹಂತಕರು ಗ್ಯಾಂಗ್ ರಾಜೇಂದ್ರನನ್ನು ಮನಬಂದಂತೆ ಕೊಚ್ಚಿ ಬರ್ಬರವಾಗಿ ಕೊಂದು ಹಾಕಿದ್ದರು.!

ಸಾಲದ್ದಕ್ಕೆ ರಕ್ತಸಿಕ್ತವಾದ ಮೃತದೇಹದ ಫೋಟೊವನ್ನು ತೆಗೆದು ಇನ್ಸ್ಟಾದಲ್ಲಿ ಹಾಕಿ ವಿಕೃತಿ ಮೆರೆದಿದ್ದರು. ಹೊಳಲ್ಕೆರೆಯ ಸಾಗರ್, ಸಹೋದರ ಅಭಿಷೇಕ್ ಸೇರಿದಂತೆ ಸಂಬಂಧಿಕರಾದ ಕಿರಣ್ ಕುಮಾರ್, ಕೃಷ್ಣಮೂರ್ತಿ ಹಾಗೂ ಕೊಲೆಗೆ ಸಹಕರಿಸಿದ ಸಂಜು, ಕರಿಯಪ್ಪ, ಯಶವಂತ್ ಸೇರಿ ಒಟ್ಟು 7 ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಲ್ಲದೇ ಈ ಕೃತ್ಯಕ್ಕೆ ಬಳಸಿದ ಸ್ಕೂಟಿ, ಎರ್ಟಿಗಾ ಕಾರು, ಎರಡು ಮಚ್ಚುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜೇಂದ್ರ ಶ್ರೀನಿವಾಸನನ್ನು ಹತ್ಯೆಮಾಡಿದ ಹಂತಕರನ್ನು ಪೊಲೀಸರು ಕೊಲೆ ನೆಡೆದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಚಿತ್ರದುರ್ಗ ಎಸ್ಪಿ ರಂಜಿತ್ ಬಂಡಾರು, ಹೊಳಲ್ಕೆರೆ ಮೂಲದ ಕಿರಣಾ ಜೊತೆ ರಾಜೇಂದ್ರ ಲಿವಿಂಗ್ ರಿಲೇಷನ್ನಲ್ಲಿದ್ದು, ಕೆಲ ತಿಂಗಳ ಬಳಿಕ ಭಿನ್ನಾಭಿಪ್ರಾಯದಿಂದ ರಾಜೇಂದ್ರ ಹಾಗೂ ಕಿರಣಾ ದೂರವಾಗಿದ್ದರು. ಹೀಗಾಗಿ ದೂರಾದ ಬಳಿಕವೂ ಕಿರಣಾಗೆ ರಾಜೇಂದ್ರ ಕರೆ ಮಾಡಿ ಕಿರುಕುಳ ನೀಡುತ್ತಿದ್ದನಂತೆ. ಹೀಗಾಗಿ ಕಿರಣಾ ಸಹೋದರ ಸಾಗರ್ ಮತ್ತು ಅಭಿಷೇಕ್ ಒಮ್ಮೆ ರಾಜೇಂದ್ರನಿಗೆ ಕರೆ ಮಾಡಿ ಎಚ್ಚರಿಸಿದ್ದರಂತೆ. ಆದರೂ ಸಹೋದರಿ ಕಿರಣಾಳನ್ನು ಬಳಸಿಕೊಂಡು ಮೋಸ ಮಾಡಿದ್ದಾನೆ ಎನ್ನುವ ಕಾರಣಕ್ಕೆ ರಿವೆಂಜಿಗೆ ಬಿದ್ದ ಆಕೆಯ ಸಹೋದರರು ಆಕ್ರೋಶದಿಂದ ಆತನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ಇನ್ಸ್ಟಾಗ್ರಾಮ್ನಲ್ಲಿ ಆರೋಪಿಯಾದ ಸಾಗರ್ ಸ್ಟೇಟಸ್ ಹಾಕಿದ್ದಾನೆ. ಕೊಲೆಯಾದ ಶವದ ಫೋಟೋ ಶೇರ್ ಮಾಡಿದ್ದನ್ನು ಪೊಲೀಸರು ಪ್ರಕರಣದ ಸಾಕ್ಷಿಯಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ…


