ಬಳ್ಳಾರಿ ಜೈಲಿನ ಸಿಬ್ಬಂದಿ ಜೊತೆಗೆ ಶಿವಮೊಗ್ಗ ಹರ್ಷ ಕೊಲೆ ಪ್ರಕರಣದ ಆರೋಪಿಗಳ ಗಲಾಟೆ.!
ASHWASURYA/SHIVAMOGGA
news.ashwasurya.in
ಶಿವಮೊಗ್ಗದ ಹರ್ಷ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಗಳ ಆರೋಪಿಗಳನ್ನು ಬಳ್ಳಾರಿ ಜೈಲಿನಲ್ಲಿ ಸಾಮಾನ್ಯ ಕೈದಿಗಳಿಂದ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಜೈಲಿನ ಸಿಬ್ಬಂದಿ ತಿಳಿಸಿದ್ದಾರೆ.
ಅಶ್ವಸೂರ್ಯ/ಬಳ್ಳಾರಿ : ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳಿಬ್ಬರೂ ಎರಡು ದಿನಗಳ ಹಿಂದೆ ಜೈಲಿನಲ್ಲಿ ತಕರಾರು ತೆಗೆದು ಗಲಾಟೆ ಮಾಡಿದ್ದಾರೆ. ಸದ್ಯ ಇಬ್ಬರಿಗೂ ಎಚ್ಚರಿಕೆ ನೀಡಿ ಪ್ರತ್ಯೇಕವಾಗಿ ಇರಿಸಲಾಗಿದೆ” ಎಂದು ಬಳ್ಳಾರಿ ಕೇಂದ್ರ ಕಾರಾಗೃಹದ ಅಧೀಕ್ಷಕಿ ಲತಾ ತಿಳಿಸಿದ್ದಾರೆ.

ಹರ್ಷ ಕೊಲೆ ಪ್ರಕರಣದ ಹತ್ತು ಜನ ಆರೋಪಿಗಳ ಪೈಕಿ ಜಿಲಾನ್ ಹಾಗೂ ಸೈಯದ್ ನಿಹಾಲ್ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಈ ಇಬ್ಬರೂ ಜೈಲಿನ ಸಿಬ್ಬಂದಿ, ಅಧಿಕಾರಿಗಳ ಜೊತೆ ನಿತ್ಯ ಜಗಳ ಮಾಡಿ ಅವಾಜ್ ಹಾಕಿ, ಕಿರಿಕ್ ಮಾಡುತ್ತಿದ್ದಾರೆ. ಕಿರಿಕ್ ಮಾಡುತ್ತಿರುವ ವಿಡಿಯೋ ಈಗ ಲಭ್ಯವಾಗಿದೆ.
ಜಿಲಾನ್ ಹಾಗೂ ಸೈಯ್ಯದ್ ನಿಹಾಲ್ ಬೆಂಗಳೂರು, ಕಲಬುರಗಿ, ಧಾರವಾಡದಲ್ಲಿ ಜಗಳ ಮಾಡಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಈ ಇಬ್ಬರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.
ನಿತ್ಯ ಒಂದೊಂದು ಸೌಲಭ್ಯ ಕೇಳಿ ಜೈಲು ಸಿಬ್ಬಂದಿಗೆ ಧಮ್ಕಿ ಹಾಕುತ್ತಿದ್ದಾರೆ. ಜೈಲಿನಲ್ಲಿ ನಡೆದ ಹಳೆ ಘಟನೆಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೇಳುತ್ತಿದ್ದಾರೆ. ನಮ್ಮನ್ನು ಸಾಮಾನ್ಯ ಕೈದಿಗಳಂತೆ ಟ್ರೀಟ್ ಮಾಡಿ ಪ್ರತ್ಯೇಕ ಕೊಠಡಿ ಕೊಡಿ, ವಿಶೇಷ ಸೌಲಭ್ಯ ನೀಡಿ ಎಂದು ಇಬ್ಬರು ಗಲಾಟೆ ಮಾಡುತ್ತಿದ್ದಾರಂತೆ.!

ಜೈಲಿನಲ್ಲಿ ಬೇರೇ ಬೇರೆ ಕೋಣೆಗೆ ಅಥವಾ ಜೈಲರ್ ಕೊಠಡಿಗೆ ಹೋಗುವಾಗ ಕಡ್ಡಾಯವಾಗಿ ಚೆಕಪ್ ಮಾಡಲಾಗುತ್ತದೆ. ಆದರೆ ನಮ್ಮನ್ನು ನೀವು ಪರಿಶೀಲನೆ ಮಾಡಬೇಡಿ ಎಂದು ಹೇಳುತ್ತಿದ್ದಾರಂತೆ. ಅಷ್ಟೇ ಅಲ್ಲದೇ ಸಣ್ಣ ಪುಟ್ಟ ವಿಚಾರಕ್ಕೂ ಜೈಲು ಸಿಬ್ಬಂದಿಯನ್ನು ಆರೋಪಿಗಳು ನಿಂದಿಸುತ್ತಿದ್ದಾರೆ ಎಂದು ಜೈಲಿನ ಸಿಬ್ಬಂದಿ ಹೇಳಿದ್ದಾರೆ.
ಶಿವಮೊಗ್ಗದ ಹರ್ಷ, ದಕ್ಷಿಣ ಕನ್ನಡದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಗಳ ಆರೋಪಿಗಳು ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಅವರನ್ನೆಲ್ಲ ಸಾಮಾನ್ಯ ಕೈದಿಗಳಿಂದ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಆರೋಪಿಗಳು ಇದೇ ರೀತಿ ಕಿರಿಕ್ ಮಾಡಿ ಬೆಂಗಳೂರು, ಕಲಬುರಗಿ, ಧಾರವಾಡ ಜೈಲಿಗೆ ಹೋಗಿದ್ದರು. ಈಗ ಅದೇ ಚಾಳಿಯನ್ನು ಬಳ್ಳಾರಿ ಜೈಲಿನಲ್ಲೂ ಮುಂದುವರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.


