ಮೈಸೂರು: ನಗರದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾದರೆ ಕಾನೂನು ಕ್ರಮ: ಸೀಮಾ ಲಾಟ್ಕರ್, ಪೊಲೀಸ್ ಕಮಿಷನರ್
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಮೈಸೂರು :ಇತ್ತೀಚೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಂಡರ್ ವರ್ಲ್ಡ್ ಆಕ್ಟೀವ್ ಆಗಿದೆ ಈ ಹಿನ್ನೆಲೆಯಲ್ಲಿ ಒಂದೆರಡು ಹತ್ಯೆಗಳು ನಡೆದು ಹೋಗಿದೆ. ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದ್ದ ಆರಮನೆ ನಗರದಲ್ಲಿ ನೆತ್ತರ ಕಮಟುವಾಸನೆಗೆ ಜನ ಬೆಚ್ಚಿಬಿದ್ದಿದ್ದಾರೆ.ಅಂದು ಸೈನಿಕರ ಕತ್ತಿ ಗುರಾಣಿಯ ಸದ್ದು ಕೇಳುತ್ತಿದ್ದ ಆರಮನೆ ನಗರಿಯಲ್ಲಿ ಇಂದು ತಲ್ವಾರು ಮಚ್ಚುಗಳ ರಣಕೇಕೆಯ ಸದ್ದು ಮಾರ್ದನಿಸುತ್ತಿದೆ. ರಿವೆಂಜ್ಗೆ ಬಿದ್ದ ರೌಡಿಗಳ ನೆತ್ತರು ಹರಿಸಲು ಮುಂದಾಗಿದ್ದಾರೆ.ಮೈಸೂರು ಪೊಲೀಸರು ಈ ರೌಡಿಗಳ ನಡು ಮುರಿಯುತ್ತಿದ್ದರು ಬದಲಾಗದೆ ಹೋಗಿದೆ ಮೈಸೂರಿನಲ್ಲಿ ರೌಡಿಸಂ.! ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಮಾಜದ ಶಾಂತಿ ಸುವ್ಯವಸ್ಥೆ ಹದಗೆಡುವ ರೀತಿಯ ಫೋಸ್ಟ್ ಹಾಕುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಎಚ್ಚರಿಕೆ ನೀಡಿದ್ದಾರೆ.
ಮೇ 5ರಂದು ಮೈಸೂರು ಹೊರವಲಯದ ವರುಣ ಬಳಿ ಕಾರ್ತಿಕ್ ಎಂಬ ರೌಡಿಶೀಟರ್ನನ್ನು ಬರ್ಬರವಾಗಿ ಕೊಲೆಮಾಡಲಾಗಿತ್ತು. ಈ ಸಂಬಂಧ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದರು. ಆದರೆ, ಇದಾದ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ಹತ್ಯೆಯಾದ ಕಾರ್ತಿಕ್ ಅವರ ಪರ ವಿರೋಧ ಚರ್ಚೆಯ ಜೊತೆಗೆ ಓಪನ್ ಚಾಲೆಂಜ್ನ ಮೇಸೆಜ್ ನ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರುವ ರೀತಿಯಲ್ಲಿ ಯಾರಾದರೂ ಫೋಸ್ಟ್ ಹಾಕಿದರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ಪೊಲೀಸರ ವಿಶೇಷ ತಂಡ ರಚನೆ:
ಈಗಾಗಲೇ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರುವ ರೀತಿಯಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಫೋಸ್ಟ್ಗಳನ್ನು ಹಾಕಿದ್ದ 15ಕ್ಕೂ ಹೆಚ್ಚು ಮಂದಿಯ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವ ಪೊಲೀಸರು, ಈ ರೀತಿಯ ಫೋಸ್ಟ್ಗಳನ್ನು ಯಾರೂ ಹಾಕದಂತೆ ಎಚ್ಚರಿಕೆ ವಹಿಸಿದ್ದಾರೆ. ಇದಕ್ಕಾಗಿಯೇ 52 ಮಂದಿ ಪೊಲೀಸರನ್ನು ಒಳಗೊಂಡ ಸೋಷಿಯಲ್ ಮೀಡಿಯಾ ಮಾನಿಟರ್ ತಂಡವನ್ನು ನಿಯೋಜಿಸಲಾಗಿದ್ದು, ಈ ತಂಡ ಪ್ರತಿ ನಿತ್ಯವೂ ಮಾನಿಟರ್ ಮಾಡುತ್ತಿದೆ. ಜತೆಗೆ ಎಲ್ಲಾ ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಸಮಾಜ ವಿರೋಧಿ ಚಟುವಟಿಕೆ ಮತ್ತು ಫೋಸ್ಟ್ ಹಾಕುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ರೌಡಿ ಪೆರೇಡ್ ನಡೆಸಲಾಗಿದ್ದು, ಪ್ರತಿ 15 ದಿನಕ್ಕೊಮ್ಮೆ ರೌಡಿಗಳ ಪೆರೇಡ್ ನಡೆಸಲಾಗುತ್ತಿದೆ. ಪ್ರತಿಯೊಬ್ಬ ರೌಡಿಶೀಟರ್ಗಳ ಮೇಲೂ ಹೆಚ್ಚಿನ ನಿಗಾ ವಹಿಸಿಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸೀಮಾ ಲಾಟ್ಕರ್, ಪೊಲೀಸ್ ಕಮಿಷನರ್, ಮೈಸೂರು
ಏನಿದು ಪ್ರಕರಣ:
ಮೈಸೂರು ತಾಲೂಕಿನ ವರುಣ ಬಳಿಯ ಲಾಡ್ಜ್ ಎದುರು ಮೈಸೂರು ನಗರದ ರೌಡಿಶೀಟರ್ ಕಾರ್ತಿಕ್ ಎಂಬಾತನನ್ನು ಆತನ ಆಪ್ತ ಸ್ನೇಹಿತನೇ ಆಗಿದ್ದ ಅವಿನಾಶ್ ಮತ್ತು ಆತನ ಗ್ಯಾಂಗ್ ಮನಸ್ಸೊ ಇಚ್ಚೆ ತಲ್ವಾರ್ನಿಂದ ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದರು.ಇದಾದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರ್ಯಚರಣೆಗೆ ಇಳಿದ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದರು.ಆದರೆ ಇಷ್ಟಕ್ಕೆ ಸುಮ್ಮನಾಗದ ಮೃತ ಕಾರ್ತಿಕ್ನ ಸ್ನೇಹಿತರು ಅವಿನಾಶ್ ವಿರುದ್ಧ ಬೆದರಿಕೆ, ಹತ್ಯೆ ಮಾಡುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಹಾಕಿದ್ದರು.
ಇದನ್ನು ಗಮನಿಸಿದ್ದ ಪೊಲೀಸರು ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದಾದ ಬಳಿಕ ಆರೋಪಿ ಅವಿನಾಶ್ ಸ್ನೇಹಿತರು ವೈಷಮ್ಯ, ದ್ವೇಷ ಬಿತ್ತುವ ಫೋಸ್ಟ್ ಹಾಕಿದ್ದರು. ಇವರ ವಿರುದ್ಧವೂ ಪೊಲೀಸರು ಕ್ರಮ ಜರುಗಿಸಿದ್ದಾರೆ.ಇಷ್ಟಾದರೂ ಈ ಬೆಳವಣಿಗೆ ಮುಂದುವರೆದಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುವಹಾಗೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಫೋಸ್ಟ್ ಹಾಕಿದ್ದಲ್ಲಿ ಅವರ ವಿರುದ್ಧ ಕ್ರಮ ಜರುಗಿಸುವ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಕಾರ್ತಿಕ್ ಶವದ ಮೆರವಣಿಗೆ ನಡೆಸಿದ್ದವರ ವಿರುದ್ಧ ಕೇಸ್:

ಹತ್ಯೆಯಾದ ರೌಡಿ ಶೀಟರ್ ಕಾರ್ತಿಕ್ ಶವದ ಮೆರವಣಿಗೆ ನಡೆಸಿ ಸಾರ್ವಜನಿಕರಿಗೆ ಭಯ ಹುಟ್ಟಿಸಿದ ಆರು ಮಂದಿಯ ವಿರುದ್ಧ ಉದಯಗಿರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರುಕಾರ್ತಿಕ್ ಕೊಲೆಯಾದ ಬಳಿಕ ಶವವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಪೊಲೀಸರ ಅನುಮತಿ ಪಡಯದೇ ಶವ ಯಾತ್ರೆಯನ್ನು ನಡೆಸುವ ಮೂಲಕ ಸಾರ್ವಜನಿಕ ಶಾಂತಿ-ನೆಮ್ಮದಿಗೆ ಕೆಲವರು ಭಂಗ ತಂದಿದ್ದರು.ಈ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರು ಮಂದಿ ಯುವಕರನ್ನು ಬಂಧಿಸಿ,ಮೆರವಣಿಗೆಗೆ ಬಳಸಿದ್ದ ವಾಹನಗಳನ್ನು ವಶಪಡಿಸಿಕೊಂಡಿದ್ದರು.


